ನಗರದಲ್ಲಿ `ಏರ್‌ಪೋರ್ಟ್‌’ ಸ್ಥಾಪಿಸಲು ಸಿಎಂಗೆ ಮನವಿ

ದಾವಣಗೆರೆ, ಫೆ.22- ನಗರದಲ್ಲಿ ಏರ್‌ಪೋರ್ಟ್‌ ಸ್ಥಾಪಿಸಬೇಕು, ಮಹಾನಗರ ಪಾಲಿಕೆಯ ಕಂದಾಯ ಕಡಿಮೆ ಮಾಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಸೇರ್ಪಡೆ ಮಾಡುವ ಮೂಲಕ ಈಡೇರಿಸುವಂತೆ ದಾವಣಗೆರೆ ಛೇಂಬರ್‌ ಆಫ್‌ ಕಾಮರ್ಸ್‌ ನಿರ್ದೇಶಕ ಅಂದನೂರು ಮುಪ್ಪಣ್ಣ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಂದು ನಡೆದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಮುಖ ಬೇಡಿಕೆಗಳ ಕುರಿತಂತೆ ಲಿಖಿತ ಮನವಿ ಪತ್ರ ಸಲ್ಲಿಸಿದರು.

ಬೆಸ್ಕಾಂ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಬಳಕೆಗೆ ತಕ್ಕ ಶುಲ್ಕ ಪಡೆಯಬೇಕು. ಎ.ಸಿ ಐರಾವತ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್‌ ನೀಡಬೇಕು. ದಾವಣಗೆರೆ – ತುಮಕೂರು ನೇರ ರೈಲು ಮಾರ್ಗ ಸರ್ವೇ ಆಗಿ ಬಹುದಿನಗಳಾಗಿದ್ದರೂ ಕಾರ್ಯಾರಂಭಗೊಂಡಿಲ್ಲ. ಕೂಡಲೇ ಈ ಬಗ್ಗೆ ಗಮನಹರಿಸಬೇಕು ಎಂದು ಅವರು ಮನವಿ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಎಪಿಎಂಸಿಯಲ್ಲಿ ಏಕರೂಪ ಸೆಸ್ ಇರಬೇಕು. ಕರೂರು ಕೈಗಾರಿಕಾ ಪ್ರದೇಶದಲ್ಲಿ ಕಳೆದ 2008 ರಲ್ಲಿ ಕೈಗಾರಿಕೆ ಉದ್ದೇಶಕ್ಕಾಗಿ ನೀಡಿರುವ ಜಾಗವನ್ನು ಉದ್ದಿಮೆದಾರರ ಸ್ವಾಧೀನಕ್ಕೆ ಬಿಟ್ಟುಕೊಡಬೇಕು ಎಂಬಿತರೆ ಬೇಡಿಕೆಗಳ ಬಗ್ಗೆಯೂ ಮುಪ್ಪಣ್ಣ ಅವರು ಸಭೆಯಲ್ಲಿ ಪ್ರಸ್ತಾಪ ಮಾಡಿದರು.

error: Content is protected !!