ಮಡಿವಾಳ ಮಾಚಿದೇವ ಸಮಾಜ ಬಾಂಧವರಿಗೆ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಕಿವಿಮಾತು
ದಾವಣಗೆರೆ, ಅ.12- ಸಮಾಜದಿಂದ ಫಲಾಪೇಕ್ಷೆ ಬಯಸುತ್ತಾ ಕಡೆಗಣಿಸಿದರೆ ಸರ್ಕಾರ ಸಮಾಜದತ್ತ ತಿರುಗಿ ನೋಡುವುದಿಲ್ಲ. ಅಲ್ಲದೇ, ವೈಯಕ್ತಿಕ ಏಳಿಗೆಯನ್ನೂ ಕಾಣಲು ಸಾಧ್ಯವಿಲ್ಲ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಬಸವ ಮಾಚಿದೇವ ಸ್ವಾಮೀಜಿ ತಿಳುವಳಿಕೆ ಮೂಡಿಸಿದರು.
ಇಲ್ಲಿನ ವಿನೋಬ ನಗರದಲ್ಲಿರುವ ಶ್ರೀ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಇವರ ಸಹಯೋಗದಲ್ಲಿ ಶ್ರೀ ಮಡಿವಾಳ ಮಾಚಿದೇವ ಸಂಘ, ಮಡಿಕಟ್ಟೆ ಸಮಿತಿ ಯಿಂದ ಇಂದು ಆಯೋಜಿಸಲಾಗಿದ್ದ ಅಸಂಘಟಿತ ಕಾರ್ಮಿ ಕರ ವಲಯದಲ್ಲಿ ಬರುವ ಮಡಿವಾಳ ಸಮುದಾಯದ ವೃತ್ತಿನಿರತರಿಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಕೇವಲ ಸಮಾಜದಿಂದ ಸವಲತ್ತುಗಳನ್ನು ಪಡೆಯಲು ಒಂದೆಡೆ ಸೇರುವುದಲ್ಲ. ಸಮಾಜದ ಎಲ್ಲಾ ಕಾರ್ಯಕ್ರಮಗಳು, ಪ್ರತಿಭಟನೆಗಳು, ಹೋರಾಟಗಳಿಗೆ ಭಾಗವಹಿಸುತ್ತೇನೆ ಎನ್ನುವ ಮನಸ್ಸಿದ್ದರೆ ಮಾತ್ರ ಆಹಾರದ ಕಿಟ್ ಪಡೆಯಿರಿ. ಇಲ್ಲವಾದಲ್ಲಿ ಪಡೆಯಬೇಡಿ ಎಂದು ಕಿಡಿಕಾರಿದ ಶ್ರೀಗಳು, ನಾವುಗಳ ಒಗ್ಗಟ್ಟಾಗಿ ಹೋರಾಟ ಮಾಡದಿದ್ದರೆ ಯಾವುದೇ ಸವಲತ್ತುಗಳು ನಮಗೆ ಸರ್ಕಾರದಿಂದ ದೊರೆಯುವುದಿಲ್ಲ. ಇದೇ ರೀತಿ ನಾವು ಸುಮ್ಮನಿದ್ದರೆ ಎಲ್ಲಾ ಸರ್ಕಾರಗಳು ನಮ್ಮನ್ನು ನಿರ್ಲಕ್ಷಿಸಲಿವೆ. ಅಷ್ಟೇ ಅಲ್ಲದೆ ನಮ್ಮತ್ತ ತಿರುಗಿಯೂ ನೋಡಲ್ಲ ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಇದೀಗ ತಂತ್ರಜ್ಞಾನದ ಕಾಲ, ಕಾಲಕ್ಕೆ ತಕ್ಕಂತೆ ನಮ್ಮಗಳ ವೃತ್ತಿ ಬದಲಾವಣೆ ಮಾಡಿಕೊಳ್ಳಬೇಕು. ಕೊರೊನಾದಂ ತಹ ಸಂದರ್ಭದಲ್ಲಿ ಎಲ್ಲಾ ವರ್ಗಗಳು ದುಡಿಮೆ ಇಲ್ಲದೇ ಬೀದಿಗೆ ಬಿದ್ದಿದ್ದಾರೆ. ಸರ್ಕಾರದಿಂದ ಇದೀಗ ಕೊಡುವ ಸೌಲಭ್ಯ ಸರ್ಕಾರ ತನ್ನ ಹಣದಿಂದ ನೀಡಲ್ಲ. ಬದಲಿಗೆ ನಮ್ಮಗಳ ತೆರಿಗೆ ಹಣದಿಂದಲೇ ನಮಗೆ ನೀಡುತ್ತದೆ. ಆದರೆ, ಅದರ ಗುಣಮಟ್ಟವನ್ನು ಇಲಾಖೆಗಳು ಕಾಯ್ದುಕೊ ಳ್ಳಬೇಕು. ಅಂತೆಯೇ ನಾವುಗಳು ಕಾಯಕ ಜೀವಿಗಳಾಗ ಬೇಕು. ಮಾತ್ರವಲ್ಲ ಶಿಕ್ಷಿತರಾಗಿ ಉನ್ನತ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್ ಕುಮಾರ್ ಮಾತನಾಡಿ, ಸರ್ಕಾರ ನೀಡಿದಂತಹ ಯಾವುದೇ ಸೌಲಭ್ಯಗಳಾಗಲೀ ಅದರಲ್ಲಿ ರಾಜಕಾರಣಿ ಗಳು, ಅವರ ಹಿಂಬಾಲಕರ ಹಸ್ತಕ್ಷೇಪ ಇದ್ದೇ ಇರುತ್ತದೆ. ಈ ರೀತಿ ಎಲ್ಲಾ ಹಂತಗಳನ್ನು ದಾಟಿ ಅಧಿಕಾರಿಗಳು ಸಾರ್ವಜನಿಕರಿಗೆ ಸವಲತ್ತುಗಳನ್ನು ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಜಿಲ್ಲಾಧ್ಯಕ್ಷ ಎಂ. ನಾಗೇಂದ್ರಪ್ಪ ವಹಿಸಿದ್ದರು.
ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಇಬ್ರಾಹಿಂ ಸಾಬ್, ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜಾಧ್ಯಕ್ಷ ಆವರಗೆರೆ ಹೆಚ್.ಜಿ.ಉಮೇಶ್, ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಬಿ.ಆರ್. ಪ್ರಕಾಶ್ ಮಾತನಾಡಿದರು.
ವೇದಿಕೆಯಲ್ಲಿ ದೀಪಕ್, ಪತ್ರಕರ್ತ ಎಂ.ವೈ. ಸತೀಶ್, ಕೋಗುಂಡೆ ಸುರೇಶ್, ಎಂ. ಮಂಜುನಾಥ್, ವಿಜಯ್‍ಕುಮಾರ್, ಮಡಿಕಟ್ಟೆ ಸಂಘದ ಅಧ್ಯಕ್ಷ ಫಕ್ಕೀರಸ್ವಾಮಿ, ಕಿಶೋರ್‍ಕುಮಾರ್, ಮಂಜುನಾಥ್ ಕಕ್ಕರಗೊಳ್ಳ, ಬಸವರಾಜ್, ರುದ್ರೇಶ್, ನಾಗಮ್ಮ ಸೇರಿದಂತೆ ಇತರರು ಇದ್ದರು