ಶೇ.14ರಷ್ಟು ಮಕ್ಕಳಲ್ಲಿ ಮಾನಸಿಕ ಅಸ್ವಸ್ಥತೆ : ಜಿಲ್ಲಾ ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ
ದಾವಣಗೆರೆ, ಅ. 11 – ದೇಶದಲ್ಲಿ ಶೇ.14ರಷ್ಟು ಮಕ್ಕಳು ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿನ ಮಾನಸಿಕ ಅಸ್ವಸ್ಥತೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳ ಮಾನಸಿಕ ಅಸ್ವಸ್ಥತೆ ಗುರುತಿಸಲು ಶಿಕ್ಷಕರಿಗೆ ತರಬೇತಿ ಬೇಕಿದೆ. ಮಕ್ಕಳಿಗೆ ಆರಂಭದಲ್ಲೇ ಚಿಕಿತ್ಸೆ ದೊರೆತರೆ ಆರೋಗ್ಯ ಸುಧಾರಣೆಯಾಗಿ, ಸಮಾಜಕ್ಕೆ ಮುಂದಿನ ದಿನ ಗಳಲ್ಲಿ ಸಮಸ್ಯೆಗಳು ತಪ್ಪುತ್ತವೆ ಎಂದರು.
ಹುಚ್ಚರನ್ನು ಗುಣಪಡಿಸಬಹುದು, ‘ವಿದ್ಯಾವಂತರ’ದ್ದೇ ಕಷ್ಟ
ಮಾನಸಿಕ ರೋಗ ಹಾಗೂ ಹುಚ್ಚಿನ ನಡುವೆ ವ್ಯತ್ಯಾಸ ಇದೆ. 100 ಜನ ಮಾನಸಿಕ ರೋಗಿಗಳಲ್ಲಿ 10 ಜನರಿಗೆ ಮಾತ್ರ ಹುಚ್ಚಿರುತ್ತದೆ ಎಂದು ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಕೆ. ನಾಗರಾಜ ರಾವ್ ತಿಳಿಸಿದ್ದಾರೆ.
ಹುಚ್ಚಿಗೆ ಬಹುತೇಕ ಭಾರೀ ಜೈವಿಕ ಅಂಶಗಳೇ ಕಾರಣ. ಬಹಳಷ್ಟು ಪ್ರಕರಣಗಳಲ್ಲಿ ಔಷಧ ಹಾಗೂ ಚಿಕಿತ್ಸೆ ಮೂಲಕ ಹುಚ್ಚು ಗುಣಪಡಿಸಬಹುದು ಎಂದವರು ಹೇಳಿದರು.
ಆದರೆ, ಕೆಲ ವಿದ್ಯಾವಂತರು ಎನಿಸಿಕೊಂಡವರು ಮನೋವೈದ್ಯರಿಗಿಂತ ತಾವೇ ಹೆಚ್ಚು ತಿಳಿದವರು ಎಂಬಂತೆ ವರ್ತಿಸುತ್ತಾರೆ. ತಮ್ಮ ಬಳಿ ಬರುವ ವಿದ್ಯಾವಂತ ಮಾನಸಿಕ ರೋಗಿಗಳಲ್ಲಿ ಬಹಳ ಜನ ನಮಗೆ ಹೀಗೆಯೇ ಚಿಕಿತ್ಸೆ ಕೊಡಿ, ಗುಳಿಗೆ ಬೇಡ ಎಂದೆಲ್ಲ ಪಟ್ಟು ಹಿಡಿಯುತ್ತಾರೆ. ಇವರಿಗೆ ಚಿಕಿತ್ಸೆ ನೀಡುವುದೇ ಕಷ್ಟ ಎಂದವರು ತಮ್ಮ ಅನುಭವ ಹಂಚಿಕೊಂಡರು.
ಚಿಂತೆ ಇಲ್ಲದ ಮೆಂತ್ಯೆಯೇ ಇಲ್ಲ
ಭಗವಾನ್ ಬುದ್ಧ ಸಾವಿಲ್ಲದ ಮನೆಯ ಸಾಸಿವೆ ಸಿಗದು ಎಂದು ಹೇಳಿದ್ದ. ಅದೇ ರೀತಿ ಚಿಂತೆ ಇಲ್ಲದ ಮನೆಯ ಮೆಂತ್ಯೆಯೂ ಸಿಗದು ಎಂದು ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಕೆ. ನಾಗರಾಜ ರಾವ್ ಹೇಳಿದ್ದಾರೆ.
ಮಾನಸಿಕ ರೋಗಗಳನ್ನು ಐದು ಸಾವಿರ ವರ್ಷಗಳ ಹಿಂದೆಯೇ ಗುರುತಿಸಲಾಗಿದೆ. ಆಗಿನಿಂದಲೂ ಎಲ್ಲರ ಮನೆಯಲ್ಲೂ ಚಿಂತೆ ಮಾಡುವವರಿದ್ದಾರೆ. ಹೀಗಾಗಿ ಚಿಂತೆ ಹಾಗೂ ಒತ್ತಡಗಳು ಮಾನಸಿಕ ಅಸ್ವಸ್ಥತೆಗೆ ಕಾರಣವಲ್ಲ. ಒತ್ತಡ ಹಾಗೂ ಚಿಂತೆಗಳು ಮೊದಲೇ ಇದ್ದ ಮಾನಸಿಕ ರೋಗದ ತೀವ್ರತೆ ಹೆಚ್ಚಿಸಬಹುದಷ್ಟೇ ಎಂದು ಹೇಳಿದರು.
ಜೈವಿಕ, ಮಾನಸಿಕ ಹಾಗೂ ಸಾಮಾಜಿಕ ಕಾರಣಗಳಿಂದ ಬರುವ 200ರಷ್ಟು ಬೇರೆ ಬೇರೆ ಮಾನಸಿಕ ರೋಗಗಳನ್ನು ಗುರುತಿಸಲಾಗಿದ್ದು, ಇವಕ್ಕೆ ಚಿಕಿತ್ಸೆಗಳೂ ಇವೆ. ಜನರು ಮಾನಸಿಕ ರೋಗಗಳಿಗೆ ಹಿಂಜರಿಯದೇ ಚಿಕಿತ್ಸೆ ಪಡೆಯ ಬೇಕು ಎಂದವರು ಕಿವಿಮಾತು ಹೇಳಿದರು.
ದೇಹಕ್ಕೆ ಕಾಯಿಲೆ ಬಂದಾಗ ವೈದ್ಯರ ಬಳಿ ತೊರಿಸಿಕೊಳ್ಳುವಂತೆಯೇ, ಮಾನಸಿಕ ಅಸ್ವಸ್ಥತೆ ಎದುರಾಗಲೂ ಚಿಕಿತ್ಸೆ ಪಡೆಯಲು ಹಿಂಜರಿಯ ಬಾರದು ಎಂದವರು ಕಿವಿಮಾತು ಹೇಳಿದರು.
ಎಎಸ್ಪಿ ಎಂ. ರಾಜೀವ್ ಮಾತನಾಡಿ, ಧ್ಯಾನ, ಸಂಗೀತ ಹಾಗೂ ನಡಿಗೆಗಳಂತಹ ಚಟುವಟಿಕೆಗಳಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಜೆಎಂಸಿ ಪ್ರಾಂಶು ಪಾಲ ಡಾ. ಎಸ್.ಬಿ. ಮುರುಗೇಶ್ ಮಾತ ನಾಡಿ, ಸಾಮಾಜಿಕ ಕಳಂಕದಿಂದ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯಲು ಹಿಂಜರಿಯು ತ್ತಾರೆ. ಹೀಗಾಗಿ ಅಸ್ವಸ್ಥರ ಮನೆಯಲ್ಲೇ ಆಪ್ತಸಮಾಲೋಚನೆಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಮೂರ್ತಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ, ಅಭಿಯೋಜನ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಜಿ. ಕಲ್ಪನ ಮಾತನಾಡಿದರು. ಜೆ.ಜೆ.ಎಂ.ಸಿ.ಯ ಮನೋವೈದ್ಯಕೀಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಕೆ. ನಾಗರಾಜ ರಾವ್ ಉಪನ್ಯಾಸ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಪಿ.ಡಿ. ಮುರುಳೀಧರ ಉಪಸ್ಥಿತರಿದ್ದರು.