ದಾವಣಗೆರೆ ಭಾಗಶಃ ಬಂದ್

ಬಿಕೋ ಎನ್ನುತ್ತಿರುವ ದಾವಣಗೆರೆಯ ಮಂಡಿಪೇಟೆ ರಸ್ತೆ

ದಾವಣಗೆರೆ, ಏ.21- ನಗರದಲ್ಲಿ ನೈಟ್ ಕರ್ಫ್ಯೂ ಮುಗಿಸಿ ಗುರುವಾರ ಮುಂಜಾನೆ ವ್ಯಾಪಾರ-ವಹಿವಾಟು ಶುಭಾರಂಭ ಮಾಡಿದ ವ್ಯಾಪಾರಿಗಳು ಮಧ್ಯಾಹ್ನವಾಗುತ್ತಲೇ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿ ಎನ್ನುತ್ತಿದ್ದ ಘೋಷಣೆಗೆ ದಂಗಾದರು.

ಬಟ್ಟೆ ಅಂಗಡಿ, ಚಿನ್ನಾಭರಣದ ಮಳಿಗೆಗಳು, ಜೆರಾಕ್ಸ್, ಎಲೆಕ್ಟ್ರಿಕಲ್ ಹಾಗಾೂ ಎಲೆಕ್ಟ್ರಾನಿಕ್  ಶಾಪ್, ಪುಸ್ತಕದ ಅಂಗಡಿ, ಕನ್ನಡಕದ ಅಂಗಡಿ, ಮೊಬೈಲ್ ಅಂಗಡಿಗಳು ಸೇರಿದಂತೆ ಎಲ್ಲಾ ಮಳಿಗೆಗಳು ಶೆಟರ್ ಎಳೆಯಲಾರಂಭಿಸಿದರು.  ಪೊಲೀಸರ ಸೂಚನೆ ಮೀರಿಯೂ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿ ಬಂದ್ ಮಾಡಿಸಿದರು. ಪರಿಣಾಮ ಮಧ್ಯಾಹ್ನದ ವೇಳೆಗೆ ನಗರ ಭಾಗಶಃ ಬಂದ್ ಆಗಿತ್ತು.

ಯಾವ ಅಂಗಡಿ ತೆರೆಯಬೇಕು? ಯಾವ ವ್ಯಾಪಾರಕ್ಕೆ ಸರ್ಕಾರ ಅನುಮತಿ ನೀಡಿದೆ? ಎಂಬ ಸ್ಪಷ್ಟ ಚಿತ್ರಣ ಸಿಗದೆ ವ್ಯಾಪಾರಿಗಳು ಅಕ್ಷರಷಃ ಕಂಗಾಲಾಗಿದ್ದರು. ಅಕ್ಕ-ಪಕ್ಕದ ಅಂಗಡಿಗಳ ಮಾಲೀಕರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸ್ಪಷ್ಟವಾಗಿ ತಿಳಿಸದೇ ಇದ್ದದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು. ಡಿಪೇಟೆಯಲ್ಲಿ ಶೇ.75ರಷ್ಟು ಮಳಿಗೆಗಳು ಬಾಗಿಲು ಮುಚ್ಚಿದ್ದವು. ಜನಸಂಖ್ಯೆಯೂ ವಿರಳವಾಗಿತ್ತು.

ಮಧ್ಯಾಹ್ನದ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ಸರ್ಕಾರದ ನೂತನ ಮಾರ್ಗಸೂಚಿಗಳನ್ನು ನೋಡಿ ವ್ಯಾಪಾರಕ್ಕೆ ಅವಕಾಶವಿದ್ದವರು ಬಾಗಿಲು ತೆರೆದು ವ್ಯಾಪಾರ ಆರಂಭಿಸಿದರು. ಕೆಲ ಅಂಗಡಿ ಮಾಲೀಕರು ಪೊಲೀಸರು ಮತ್ತೆ ಬಂದರೆ ನೋಡೋಣ ಎಂದು ವಹಿವಾಟು ನಡೆಸಲಾರಂಭಿಸಿದರು. ಸಂಜೆ ಕೆಲವೆಡೆ ಪೊಲೀಸರೇ ನಿಮ್ಮ ಅಂಗಡಿಗಳನ್ನು ತೆರೆಯಬಹುದೆಂದು ಸೂಚಿಸುತ್ತಿದ್ದುದು ಕಂಡು ಬಂತು.

ಸಂಜೆ ವೇಳೆಗೆ ಮೊಬೈಲ್ ಅಂಗಡಿಗಳು,  ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ಅಂಗಡಿಗಳು, ಹಾರ್ಡ್‌ವೇರ್ ಅಂಗಡಿಗಳು, ತಾಡಪಾಲು, ಮೋಟಾರ್ ಮತ್ತಿತರೆ ಕೃಷಿಗೆ ಸಂಬಂಧಿಸಿದ ಅಂಗಡಿಗಳ ಮಳಿಗೆಗಳು ತೆರೆದಿದ್ದವು.

ಬಸ್-ಆಟೋ ಚಾಲಕರಿಗೆ ತಹಶೀಲ್ದಾರ್ ತರಾಟೆ: ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದೆ  ಬೇತೂರು ರಸ್ತೆಯಲ್ಲಿ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ತಡೆದು ಚಾಲಕ ನಿರ್ವಾಹಕರನ್ನು ತಹಶೀಲ್ದಾರ್ ಗಿರೀಶ್ ತರಾಟೆಗೆ ತೆಗೆದುಕೊಂಡರು. ಆಟೋದಲ್ಲೂ ಸಹ ಐದಾರು ಜನರನ್ನು ಕೊಂಡು ಹೋಗುತ್ತಿದ್ದವರನ್ನು ಗಮನಿಸಿ, ಪ್ರಯಾಣಿಕರನ್ನು ಇಳಿಸಿ ದಂಡ ವಿಧಿಸಿ ಜಾಗೃತಿ ಮೂಡಿಸಿದರು.

ಬೆಳಿಗ್ಗೆ ತೆರೆದಿದ್ದ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಬಟ್ಟೆ ಅಂಗಡಿಯನ್ನೂ ಪೊಲೀಸರು ಬಂದ್ ಮಾಡಿಸಿದರು. ಬೆಳಗ್ಗೆ ಡೆಂಟಲ್ ಕಾಲೇಜ್ ರಸ್ತೆಯಲ್ಲಿದ್ದ ಬಿಎಸ್‍ಸಿ ಮಳಿಗೆಗೆ ಎಸ್ಪಿ ಹನುಮಂತರಾಯ ಆಗಮಿಸಿ ಬಂದ್ ಮಾಡುವಂತೆ ಸೂಚಿಸಿದರು.

error: Content is protected !!