ಕುಂದುವಾಡ ಕೆರೆ ಪ್ರದೇಶಕ್ಕೆ ಜೀವವೈವಿಧ್ಯ ಮಂಡಳಿ ತಂಡದ ಭೇಟಿ
ದಾವಣಗೆರೆ, ಏ.22 – ಕುಂದುವಾಡ ಕೆರೆ ಅಭಿವೃದ್ಧಿ ಯೋಜನೆಯಿಂದ ಕೆರೆ ಪರಿಸರದ ಜೀವ ಸಂಕುಲ ಆಪತ್ತಿಗೆ ಸಿಲುಕಿದೆ ಎಂಬ ವ್ಯಾಪಕ ಸಾರ್ವಜನಿಕ ಆಕ್ಷೇಪಗಳ ಹಿನ್ನೆಲೆಯಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ನೇತೃತ್ವದ ತಂಡ ಕುಂದುವಾಡ ಕೆರೆ ಪ್ರದೇಶಕ್ಕೆ ನಿನ್ನೆ ಭೇಟಿ ನೀಡಿ ಪರಿಸರ ಪರಿಸ್ಥಿತಿ ವೀಕ್ಷಣೆ ಮಾಡಿ ವರದಿ ಸಲ್ಲಿಸಿದ್ದಾರೆ.
ದಿನದಿಂದ ದಿನಕ್ಕೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಿಟ್ಟಿನಲ್ಲಿ ಸಾರ್ವಜನಿಕ ಸಭೆ ಏರ್ಪಡಿಸದೆ. ತಂಡವು ಅರಣ್ಯ ಅಧಿಕಾರಿಗಳು, ಮಹಾನಗರಪಾಲಿಕೆ, ಸ್ಮಾರ್ಟ್ ಸಿಟಿ ಅಧಿಕಾರಿ ಗಳೊಂದಿಗೆ ಕೆರೆ ವೀಕ್ಷಣೆ ಮಾಡಲಾಯಿತು. ಕೆರೆ ಅಭಿವೃದ್ಧಿ ಯೋಜನೆ ಜಾರಿ ಮಾಡುವ ಪೂರ್ವ ದಲ್ಲಿ ಪರಿಸರ ಅಧಿಕಾರಿ, ಜೀವವೈವಿಧ್ಯ ಸಮಿತಿ, ಜಿಲ್ಲಾ ಅರಣ್ಯಾಧಿಕಾರಿಗಳ ಅಭಿಪ್ರಾಯ ಪಡೆದಿಲ್ಲ ಎಂದು ಜೀವವೈವಿಧ್ಯ ಮಂಡಳಿ ತಂಡ ತಿಳಿಸಿದೆ.
ಕುಂದುವಾಡ ಕೆರೆ ಅಭಿವೃದ್ಧಿ ಯೋಜನೆ ಅರ್ಧದಷ್ಟು ಜಾರಿ ಆಗಿದೆ. ಕುಂದವಾಡ ಕೆರೆ ಪಾರಂಪರಿಕವಾಗಿ ಹಾಗೂ ನೈಸರ್ಗಿಕವಾಗಿ ರುವ ಕೆರೆಯಾಗಿದ್ದು, ಚಾನೆಲ್ನಿಂದ ನೀರು ತುಂಬಿಸಿ ವಿತರಿಸುವ ಕೃತಕ ಜಲಾಶಯ ಎಂದು ಪರಿಗಣಿಸಬಾರದು. ಇಲ್ಲಿ ಅಪಾರ ಜೌಗು ಪ್ರದೇಶವಿದೆ. ಆದ್ದರಿಂದ ಕೆರೆ ಸುತ್ತಲ ಪ್ರದೇಶದಲ್ಲಿ ವ್ಯಾಪಕ ವನೀಕರಣ ಯೋಜನೆ ಜಾರಿ ಮಾಡಬೇಕು ಹಾಗೂ ಕುಬ್ಜ ಗಿಡಗಳನ್ನು ನೆಡಬೇಕು. ಕೆರೆದಂಡೆಯ ಹೊರಗಿನ ಇಳಿಜಾರು ಪ್ರದೇಶದಲ್ಲಿ ಹುಲ್ಲು ಬೆಳೆಸಬೇಕು ಎಂದು ಸಲಹೆ ನೀಡಿತು.
ಕೆರೆ ದಂಡೆ ಪ್ರದೇಶದಲ್ಲಿ ಕಾಂಕ್ರೀಟ್ ಕಾಮಗಾರಿ ಕಡಿಮೆ ಮಾಡಬೇಕು. ಕೆರೆ ದಂಡೆ ಬಲಪಡಿಸುವ ಹೆಸರಲ್ಲಿ ಕೆರೆಯ ಪಾತ್ರವನ್ನು ಕಿರಿದಾಗಿಸಲಾಗಿದೆ ಎಂಬ ಅಂಶವನ್ನು ತಂಡ ಗಮನಿಸಿದೆ. ಕುಡಿಯುವ ನೀರಿನ ಉದ್ದೇಶ ಮುಖ್ಯವಾಗಿರುವುದರಿಂದ ಇಲ್ಲಿ ಬೋಟಿಂಗ್ ಇತ್ಯಾದಿ ಸೇರಿದಂತೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಲ್ಲದು. ನಿಯಮಿತ ಅವಧಿಯಲ್ಲಿ ಮಾತ್ರ ಕೆರೆ ದಂಡೆಯಲ್ಲಿ ವಾಕಿಂಗ್ಗೆ ಅವ ಕಾಶ ಕಲ್ಪಿಸಬೇಕು. ಪಕ್ಷಿಗಳು, ಜಲಚರಗಳು ಮೊದಲಿ ನಂತೆ ಜೀವಿಸಲು ಪ್ರಶಾಂತ, ನೈಸ ರ್ಗಿಕ ವಾತಾವರಣ ನಿರ್ಮಿಸಬೇಕು. ಈಗಾಗಲೇ ದಾವಣಗೆರೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಜೀವವೈವಿಧ್ಯ ಕಾಯಿದೆ, ವನ್ಯಜೀವಿ ಕಾಯಿದೆ ಅಡಿ ಆಗಿರುವ ಲೋಪದೋಷಗಳನ್ನು ಪಟ್ಟಿ ಮಾಡಿದ್ದನ್ನು ತಂಡ ಎತ್ತಿ ಹೇಳಿದೆ.
ಪರಿಸರ ಪ್ರೇಮಿ ಡಾ. ಶಿಶುಪಾಲ ವ್ಯಾಕುಲತೆ
ಕೈಗೊಂಡಿರುವ ಅಭಿವೃದ್ಧಿ ಯೋಜನೆಯಿಂದಾಗಿ ಕುಂದುವಾಡ ಕೆರೆಯು ಪರಿಸರದ ಜೀವ ಸಂಕುಲ ಆಪತ್ತಿಗೆ ಸಿಲುಕಿರುವ ಬಗ್ಗೆ ತಾವು ಕಳೆದ ನಾಲ್ಕು ತಿಂಗಳ ಹಿಂದೆಯೇ ಸಂಬಂಧಪಟ್ಟವರಿಗೆ ಮತ್ತು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದರೂ ಈವರೆಗೂ ಯಾರೂ ಗಮನ ಹರಿಸದಿರುವ ಬಗ್ಗೆ ಪರಿಸರ ಪ್ರೇಮಿಯೂ ಆಗಿರುವ ದಾವಣಗೆರೆ ವಿಶ್ವವಿದ್ಯಾನಿಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಸ್. ಶಿಶುಪಾಲ ಅವರು ವ್ಯಾಕುಲತೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ `ಜನತಾವಾಣಿ’ಯೊಂದಿಗೆ ಮಾತನಾಡಿದ ಅವರು, ಇದೀಗ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ನೇತೃತ್ವದ ತಂಡ ಕುಂದುವಾಡ ಕೆರೆ ಪ್ರದೇಶಕ್ಕೆ ಭೇಟಿ ನೀಡಿ, ಪರಿಸರ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿ, ಜೀವ ವೈವಿಧ್ಯ ಪುನಶ್ಚೇತನಕ್ಕೆ ಸೂಚನೆ ನೀಡಿದ್ದು, ಇದು `ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು’ ಎನ್ನುವ ಗಾದೆಯಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕುಂದುವಾಡ ಕೆರೆ ಅಭಿವೃದ್ಧಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿದ ನಂತರ ನಿರಂತರ ಕೆರೆ ಪರಿಸರ ರಕ್ಷಣೆ ಮತ್ತು ಅಭಿವೃದ್ಧಿಗೆ ವಿಶೇಷ ನಿರ್ವಹಣಾ ಸಮಿತಿ ರಚಿಸಬೇಕು ಮತ್ತು ಅದಕ್ಕಾಗಿ ಅಗತ್ಯ ಅನುದಾನ ನೀಡುವ ಬಗ್ಗೆ ಕೆರೆ ಅಭಿವೃದ್ಧಿ ಯೋಜನೆಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಈ ಸಂದರ್ಭದಲ್ಲಿ ಜೀವವೈವಿಧ್ಯ ಮಂಡಳಿ ತಂಡ ಶಿಫಾರಸು ಮಾಡಿದೆ.
ಈ ಕುರಿತು ಮಹಾನಗರಪಾಲಿಕೆ ಜೀವವೈವಿಧ್ಯ ಸಮಿತಿ ಸಭೆ ನಡೆಸಿ, ಸ್ಮಾರ್ಟ್ಸಿಟಿ ಯೋಜನೆ ಯವರು, ಉಪ ಅರಣ್ಯ ಸಂರಕ್ಷಣಾಧಿಕಾರಿ (ಟೆರಿಟೋರಿ ಯಲ್) ಜಿಲ್ಲಾ ಪರಿಸರ ಅಧಿಕಾರಿಗಳನ್ನು ಆಹ್ವಾನಿಸಬೇಕು. ಜೀವವೈವಿಧ್ಯ ಮಂಡಳಿ ಸೂಚಿಸಿರುವ ಶಿಫಾರಸ್ಸು ಹಾಗೂ ಮಹಾನಗರಪಾಲಿಕೆ ಜೀವವೈವಿಧ್ಯ ಸಮಿತಿ ಸಭೆ ನೀಡುವ ಸಲಹೆಗಳನ್ನು ಆಧರಿಸಿ, ಕೆರೆ ಅಭಿವೃದ್ಧಿ ಯೋಜನೆಯನ್ನು ಪರಿಸರ ಸ್ನೇಹಿ ಯೋಜನೆಯನ್ನಾಗಿ ಮಾರ್ಪಡಿಸಬೇಕು. ಈವರೆಗೆ ಆಗಿರುವ ಜೀವವೈವಿಧ್ಯ-ವನ್ಯಜೀವಿ ಕಾಯಿದೆ ಲೋಪಗಳನ್ನು ಸರಿಪಡಿಸಲು ಸ್ಮಾರ್ಟ್ಸಿಟಿ ಯೋಜನೆಯವರು ಕೆರೆ ಅಭಿವೃದ್ಧಿ ಯೋಜನೆಯಲ್ಲಿ ಅವಶ್ಯ ಬದಲಾವಣೆ ಮಾಡಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ತಂಡ ತಿಳಿಸಿದೆ ಎಂದು ಮಂಡಳಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.