ದಾವಣಗೆರೆ, ಏ.20- ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಮಂಗಳವಾರವೂ ನಗರದ ವಿವಿಧೆಡೆ ಸಂಚರಿಸಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದರು.
ಮಾಸ್ಕ್ ಹಾಕದವರನ್ನು ಕಂಡ ಜಿಲ್ಲಾಧಿಕಾರಿ ಕೈ ಮುಗಿದು ಮಾಸ್ಕ್ ಧರಿಸುವಂತೆ ಮನವಿ ಮಾಡಿದರು. ಮಾಸ್ಕ್ ಹಾಕದ ಯುವಕನನ್ನು ಏನು ಮಾಡುತಿದ್ದೀ? ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ, ತಾನು ಬಾತಿಯ ತಪೋವನದಲ್ಲಿ ಅಭ್ಯಾಸ ಮಾಡುತ್ತಿರುವ ವೈದ್ಯ ವಿದ್ಯಾರ್ಥಿ ಎಂಬ ಯುವಕನ ಉತ್ತರಕ್ಕೆ, ನೀವೇ ಹೀಗೆ ಮಾಡಿದರೆ ಹೇಗೆ? ಮಾಸ್ಕ್ ಹಾಕಿಕೊಳ್ಳಿ ಎಂದರು.
ಕೊರೊನಾ ಮುಗಿದ ಮೇಲೆ ಎಗ್ ರೈಸ್ ತಿನ್ನು: ಬಾಲಕನೊಬ್ಬ ಎಗ್ ರೈಸ್ ಹೋಟೆಲ್‌ನಲ್ಲಿ ಇದ್ದದ್ದನ್ನು ಕಂಡ ಜಿಲ್ಲಾಧಿಕಾರಿ, ಇಲ್ಲಿ ಸ್ವಚ್ಛತೆ ಇಲ್ಲ ಕೊರೊನಾ ಮುಗಿದ ಮೇಲೆ ಎಗ್ ರೈಸ್ ತಿನ್ನು ಎಂದರು. ನಾನು ಯಾರು ಗೊತ್ತಾ? ಎಂಬ ಜಿಲ್ಲಾಧಿಕಾರಿ ಪ್ರಶ್ನೆಗೆ, ನೀವು ಡಿಸಿ ಸರ್ ಪೇಪರ್‌ನಲ್ಲಿ ನಿಮ್ಮನ್ನು ನೋಡಿದ್ದೇನೆ ಎಂದು ಬಾಲಕ ಉತ್ತರಿಸಿದ.
ಇದೇ ವೇಳೆ ಕೆಲ ಹೋಟೆಲ್‌ಗಳಲ್ಲಿ ಸ್ವಚ್ಛತೆ ಇಲ್ಲದ್ದನ್ನು ನೋಡಿದ ಜಿಲ್ಲಾಧಿಕಾರಿ, ಕೈಗಳಿಗೆ ಗ್ಲೌಸ್ ಬಳಸಿ ಆಹಾರ ಪದಾರ್ಥ ಸರಬರಾಜು ಮಾಡುವಂತೆ ಹೇಳಿದರು. ಬಾಯ್ಸ್ ಹಾಸ್ಟೆಲ್ ರಸ್ತೆಯಲ್ಲಿ ಅಡ್ಡವಾಗಿ ಪಾರ್ಕ್ ಮಾಡಿದ್ದ ಕಾರು ಯಾರದೆಂದು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ, ವೈದ್ಯರೊಬ್ಬರು ತನ್ನದೆಂದು ಹೇಳಿದ್ದು ಕಂಡ ಡಿಸಿ, ನೀವೇ ಹೀಗೆ ಅಡ್ಡವಾಗಿ ಕಾರು ನಿಲ್ಲಿಸಿದರೆ ತಪ್ಪಲ್ಲವೇ ಶೀಘ್ರವೇ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಎಂದು ಹೇಳಿದರು.
ಬಿಐಇಟಿ ರಸ್ತೆ ಬಳಿಯ ಸೂಪರ್ ಮಾರ್ಟ್ ಪ್ರವೇಶಿಸಿದ ಜಿಲ್ಲಾಧಿಕಾರಿ, ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್, ಥರ್ಮಾಮೀಟರ್ ಪರಿಶೀಲನೆ ಮಾಡುವವರು ಇಲ್ಲದ್ದನ್ನು ಕಂಡು, ಕೂಡಲೇ ಈ ಬಗ್ಗೆ ವ್ಯವಸ್ಥೆ ಮಾಡಿಕೊಳ್ಳಿ. ಇಲ್ಲದಿದ್ದರೆ ಮಾರ್ಟ್ ಮುಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ಅಲ್ಲಿದ್ದ ಪೋಷಕರಿಗೆ ಮಕ್ಕಳನ್ನು ಕರೆ ತರದಂತೆ ಹೇಳಿದರು.
ಬಿಐಇಟಿ ರಸ್ತೆಯಲ್ಲಿ ಬರುತ್ತಿದ್ದ ಸಾರಿಗೆ ಬಸ್ ಹತ್ತಿದ ಡಿಸಿ, ಬಸ್‌ನಲ್ಲಿ ಮಾಸ್ಕ್ ಹಾಕದೇ ಇದ್ದವರಿಗೆ ಮಾಸ್ಕ್ ನೀಡಿ, ಅಗತ್ಯವಿದ್ದರೆ ಮಾತ್ರ ಹೊರ ಬನ್ನಿ ಎಂದರು. `ಕೊರೊನಾ ಹೆಚ್ಚಾಗುತ್ತಿದೆ ಡಿಸಿ, ಎಸ್ಪಿ ಏನೂ ಮಾಡ್ತಿಲ್ಲ’ ಎಂದು ಕಮೆಂಟ್ ಮಾಡುತ್ತೀರಿ. ಹೊಡೆದರೆ ಹೊಡೀತಾರೆ ಅಂತೀರಿ, ಬೈದರೆ ಬೈತೀರಿ ಅಂತೀರಿ. ದಂಡ ಹಾಕಿದರೆ ಅದಕ್ಕೂ ಏನಾದರೂ ಅಂತೀರಿ. ನೀವು ಮಾತ್ರ ಮಾಸ್ಕ್ ಹಾಕದೆ ಓಡಾಡ್ತೀರಿ ಎಂದು ಜನತೆಗೆ ಬುದ್ಧಿವಾದ ಹೇಳಿದರು.
ನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್, ಕೆ.ಟಿ. ಗೋಪಾಲಗೌಡ, ರಾಘವೇಂದ್ರ ಚೌಹ್ವಾಣ್, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಮರುಳಸಿದ್ದಪ್ಪ ಇತರರು ಈ ಸಂದರ್ಭದಲ್ಲಿದ್ದರು.