ಯೂರಿಯಾ ರಸಗೊಬ್ಬರ ಕಾರ್ಖಾನೆ ಸಂಸದರ ಸುಳ್ಳುಗಳ ಸರಮಾಲೆ

ಮಾನ್ಯರೇ,

ನಾಲ್ಕು ಬಾರಿ ದಾವಣಗೆರೆ ಸಂಸದರಾಗಿರುವ ಜಿ.ಎಂ.ಸಿದ್ದೇಶ್ವರ ಅವರು ಜಿಲ್ಲೆಗೆ ಕೇಂದ್ರದಿಂದ ಯಾವುದೇ ಹೊಸ ಕಾರ್ಖಾನೆಗಳನ್ನು ಸ್ಥಾಪಿಸಿ, ಉದ್ಯೋಗ ಸೃಷ್ಟಿ ಮಾಡದೇ ಕೇವಲ ಆಶ್ವಾಸನೆಗಳಲ್ಲೇ ತಮ್ಮ ಅಧಿಕಾರವಧಿಯನ್ನು ಸವೆಸುತ್ತಿದ್ದಾರೆ.

ಇದಕ್ಕೆ ಮತ್ತೊಂದು ಉದಾಹರಣೆ ಯೂರಿಯಾ ರಸಗೊಬ್ಬರ ಕಾರ್ಖಾನೆ, ದೇಶ ದಲ್ಲಿ ಯಾವುದೇ ರಸಗೊಬ್ಬರ ಕಾರ್ಖಾನೆ ಸಮುದ್ರದ ದಡಗಳಲ್ಲಿ ಸ್ಥಾಪಿತವಾಗುತ್ತದೆ. ಏಕೆಂದರೆ ರಸಗೊಬ್ಬರ ಕಾರ್ಖಾನೆಯಿಂದ ಹೊರಬರುವ  ವಿಷಪೂರಿತ ತ್ಯಾಜ್ಯವು ಬಹಳ ಅಪಾಯಕಾರಿ ಯಾಗಿರುವುದರಿಂದ ಸಮುದ್ರದಂಡೆಯ ಹೊರತಾಗಿ ಬೇರೆ ಕಡೆ ಸ್ಥಾಪಿಸುವುದಿಲ್ಲ. 

ಆದರೂ ಸಹ ನಮ್ಮ ಸಂಸದರು ಜಿಲ್ಲೆಯ ಹೊಳೆಯ ದಂಡೆಯಲ್ಲಿ ಯೂರಿಯಾ ರಸಗೊಬ್ಬರ ಕಾರ್ಖಾನೆ ಸ್ಥಾಪಿಸುವ ಬಗ್ಗೆ ಕಳೆದ ಸುಮಾರು ವರ್ಷಗಳಿಂದ ಹೇಳಿಕೆ ನೀಡುತ್ತಾ ಬರುತ್ತಿದ್ದು, ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ.

ರಸಗೊಬ್ಬರ ಕಾರ್ಖಾನೆಯ ವಿಷಪೂರಿತ ತ್ಯಾಜ್ಯವನ್ನು ಹೊಳೆಗೆ ಬಿಟ್ಟರೆ ಸುಮಾರು 75 ರಿಂದ 100 ಕಿಲೋಮೀಟರ್‌ವರೆಗೆ ಆ ನೀರು ದನ ಕರುಗಳಿಗೆ, ಜನಸಾಮಾನ್ಯರಿಗೆ ಬಳಸಲು ಯೋಗ್ಯವಾಗಿರುವುದಿಲ್ಲ. ಆದರೂ ಸಹ ಕಾರ್ಖಾನೆ ಸ್ಥಾಪಿಸುವ ಹೇಳಿಕೆ ನೀಡುತ್ತಾ ಚುನಾವಣೆಗಳನ್ನು ನಡೆಸುವ ಸಂಸದರು, ಆದಷ್ಟು ಬೇಗ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಜನಸಾಮಾನ್ಯರಿಗೆ ತಮ್ಮ ಆಶ್ವಾಸನೆಗಳ ಮೇಲೆ ನಂಬಿಕೆ ಬರುವಂತೆ ಮಾಡಬೇಕಾಗಿದೆ. ಯಾಕೆಂದರೆ ನಿಮ್ಮ ಹೇಳಿಕೆಗಳು ಕೇವಲ ಚುನಾವಣೆಗೆ ಸೀಮಿತವೋ ಅಥವಾ ವಿದ್ಯಾವಂತ ನಿರುದ್ಯೋಗಿಗಳ ಭವಿಷ್ಯದ ಏಳಿಗೆಗೂ ಅನುಕೂಲವಾಗುತ್ತದೆಯೋ ಎಂಬುದು ಜಿಲ್ಲೆಯ ಜನರಿಗೆ ತಿಳಿಯಬೇಕಾಗಿದೆ.

ಒಮ್ಮೆ ಯೂರಿಯಾ ರಸಗೊಬ್ಬರ ಕಾರ್ಖಾನೆ, ಮತ್ತೊಮ್ಮೆ ಎಥೆನಾಲ್ ಕಾರ್ಖಾನೆ, ಮಗದೊಮ್ಮೆ ವಿಮಾನ ನಿಲ್ದಾಣ, ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು 2500 ಎಕರೆ ಭೂಮಿ ಗುರುತಿಸಲು ಅಧಿಕಾರಿಗಳಿಗೆ ಸಲಹೆ ಈ ರೀತಿ ಪ್ರತಿ ಬಾರಿಯೂ ಒಂದೊಂದು. ರೀತಿಯ ಆಶ್ವಾಸನೆಗಳನ್ನು ನೀಡುತ್ತಾ, ವಿದ್ಯಾವಂತ ನಿರುದ್ಯೋಗಿಗಳಿಗೆ ಆಕಾಶ ತೋರಿಸುವ ಕೆಲಸ ಬಿಟ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.


– ಕೆ.ಎಲ್.ಹರೀಶ್ ಬಸಾಪುರ.

error: Content is protected !!