ಪಿಂಚಣಿಯಿಂದ ಪ್ಲಾಸ್ಟಿಕ್ ವರೆಗೆ ದೂರುಗಳು

ಚನ್ನಗಿರಿ ತಾಲ್ಲೂಕಿನಿಂದ ಬಂದಿದ್ದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ತ್ಯಾವಣಿಗೆ ಹಾಗೂ ಕೆರೆಬಿಳಚಿಗಳಿಂದ ದಾವಣಗೆರೆಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಜನಸ್ಪಂದನದ ವೇಳೆ ಮನವಿ ಸಲ್ಲಿಸುತ್ತಿದ್ದಾರೆ.


ದಾವಣಗೆರೆ, ಫೆ. 18 – ಬಹುತೇಕ ಒಂದು ವರ್ಷದಿಂದ ನಿಂತಿದ್ದ ಜಿಲ್ಲಾಧಿಕಾರಿಗಳ ಜನಸ್ಪಂದನ ಸಭೆ ಗುರುವಾರದಿಂದ ಪುನರಾರಂಭವಾಗಿದ್ದು, ಮೊದಲ ದಿನ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ 50ಕ್ಕೂ ಹೆಚ್ಚು ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ. ಸರ್ಕಾರಿ ಜಾಗದ ಒತ್ತುವರಿಯಿಂದ ಹಿಡಿದು ಪಿಂಚಣಿ ತೊಂದರೆ, ಬಸ್ ಸಮಸ್ಯೆಗಳವರೆಗೆ ಹತ್ತು ಹಲವು ವಿಷಯಗಳ ಬಗ್ಗೆ ಜನರು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದಾರೆ.

ಆರಂಭದಲ್ಲಿ ಚನ್ನಗಿರಿ ತಾಲ್ಲೂಕಿನಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ತ್ಯಾವಣಿಗೆ ಹಾಗೂ ಕೆರೆಬಿಳಚಿಗಳಿಂದ ದಾವಣಗೆರೆಗೆ ಬರಲು ಬೆಳಿಗ್ಗೆ ಹಾಗೂ ಸಂಜೆ ವೇಳೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡರು. ನಾಳೆಯಿಂದಲೇ ಬಸ್‌ಗೆ ವ್ಯವಸ್ಥೆ ಮಾಡುವಂತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾರ್‌ಗೆ ಜಿಲ್ಲಾಧಿಕಾರಿ ಬೀಳಗಿ ಸೂಚಿಸಿದರು.

ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ 15 ವರ್ಷಗಳಿಂದ ಇದ್ದ ಅಂಚೆ ಕಚೇರಿ ಶಾಖೆಯನ್ನು ಇದ್ದಕ್ಕಿದ್ದಂತೆ ಬಂದ್ ಮಾಡಲಾಗಿದೆ. ಎಂ.ಸಿ.ಸಿ. ಎ ಬ್ಲಾಕ್‌ನಲ್ಲಿ ಹತ್ತು ಹಾಗೂ 11ನೇ ಕ್ರಾಸ್‌ಗಳಲ್ಲಿ ರಸ್ತೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಸಿದ್ದಣ್ಣ ಮನವಿ ಮಾಡಿಕೊಂಡರು.

ಅರ್ಜಿ ಸ್ವೀಕರಿಸುತ್ತಿಲ್ಲ :  ದಾವಣಗೆರೆ ತಹಶೀಲ್ದಾರ್ ಕಚೇರಿಯಲ್ಲಿ ವೃದ್ಧಾಪ್ಯ ವೇತನ, ಅಂಗವಿಕಲ ಮತ್ತು ವಿಧವಾ ವೇತನ ಅರ್ಜಿಗಳನ್ನು ತೆಗೆದುಕೊಳ್ಳದೇ ವಾಪಸ್ ಕಳುಹಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ ದೂರಿದರು. ತಹಶೀಲ್ದಾರ್ ಗಿರೀಶ್ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಜೊತೆಗೆ, ಜನರ ಸಮಸ್ಯೆಗಳ ಬಗ್ಗೆ ಖುದ್ದು ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿ ಬೀಳಗಿ ಸೂಚಿಸಿದರು.

ನಿಲ್ಲದ ಪ್ಲಾಸ್ಟಿಕ್ ರಾಶಿ : ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ರಾಜಾರೋಷವಾಗಿ ನಡೆಯುತ್ತಿದೆ. ಕಸದ ರಾಶಿ ಜೊತೆ ಅರ್ಧದಷ್ಟು ಪ್ಲಾಸ್ಟಿಕ್ ಸೇರಿ ಚರಂಡಿಗಳು ಕಟ್ಟುತ್ತಿವೆ ಜಿಲ್ಲೆಯಾದ್ಯಂತ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್ ಎಸ್.ದೇವರಮನೆ ಮನವಿ ಮಾಡಿಕೊಂಡರು. 

ಸಕಾಲ ಪಾಲಿಸದ ಇಲಾಖೆಗಳು

ಹಲವಾರು ಇಲಾಖೆಗಳು ಸಕಾಲದಡಿ ಅರ್ಜಿ ಸ್ವೀಕರಿಸುತ್ತಿಲ್ಲ. ಬಾಕಿ ಇರುವ ಸಕಾಲ ಅರ್ಜಿಗಳನ್ನು ತ್ವರಿತವಾಗಿ ಬಗೆಹರಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಣ ಇಲಾಖೆ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಅಬಕಾರಿ, ಅರಣ್ಯ, ಜಲ ಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಕಾಲದಡಿಯಲ್ಲಿ ಅರ್ಜಿ ಸ್ವೀಕಾರ ಆಗುತ್ತಿಲ್ಲ ಎಂದವರು ಹೇಳಿದ್ದಾರೆ.

ಅರ್ಜಿ ಸ್ವೀಕರಿಸುತ್ತಿಲ್ಲ :  ದಾವಣಗೆರೆ ತಹಶೀಲ್ದಾರ್ ಕಚೇರಿಯಲ್ಲಿ ವೃದ್ಧಾಪ್ಯ ವೇತನ, ಅಂಗವಿಕಲ ಮತ್ತು ವಿಧವಾ ವೇತನ ಅರ್ಜಿಗಳನ್ನು ತೆಗೆದುಕೊಳ್ಳದೇ ವಾಪಸ್ ಕಳುಹಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ ದೂರಿದರು. ತಹಶೀಲ್ದಾರ್ ಗಿರೀಶ್ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಜೊತೆಗೆ, ಜನರ ಸಮಸ್ಯೆಗಳ ಬಗ್ಗೆ ಖುದ್ದು ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿ ಬೀಳಗಿ ಸೂಚಿಸಿದರು.

ನಿಲ್ಲದ ಪ್ಲಾಸ್ಟಿಕ್ ರಾಶಿ : ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ರಾಜಾರೋಷವಾಗಿ ನಡೆಯುತ್ತಿದೆ. ಕಸದ ರಾಶಿ ಜೊತೆ ಅರ್ಧದಷ್ಟು ಪ್ಲಾಸ್ಟಿಕ್ ಸೇರಿ ಚರಂಡಿಗಳು ಕಟ್ಟುತ್ತಿವೆ ಜಿಲ್ಲೆಯಾದ್ಯಂತ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್ ಎಸ್.ದೇವರಮನೆ ಮನವಿ ಮಾಡಿಕೊಂಡರು. 

ಸ್ಮಾರ್ಟ್ ದೂರು : ಸ್ಮಾರ್ಟ್‍ಸಿಟಿ ಲಿಮಿಟೆಡ್ ವತಿಯಿಂದ ನಗರದಲ್ಲಿ ಫೇಸ್-1 ಕಾಮಗಾರಿಯಲ್ಲಿ ಸಾಕಷ್ಟು ಅಕ್ರಮ ನಡೆಸಲಾಗಿದೆ. ಕಡಿಮೆ ಬೆಲೆಯ ಗಿಡಗಳನ್ನು ಹೆಚ್ಚಿನ ಬೆಲೆಗೆ ಟೆಂಡರ್ ಮೂಲಕ ಖರೀದಿಸಿ ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿವೆ. ಟೆಂಡರ್‍ದಾರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಬೆಳಕೇರಿ ಮನವಿ ಮಾಡಿದ್ದಾರೆ.

ರಾಜಕಾಲುವೆ ಒತ್ತುವರಿ : ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಅರ್ಜಿ ಸಲ್ಲಿಸಿ, ರಾಜಕಾಲುವೆ ಮತ್ತು ನೈಸರ್ಗಿಕ ಹಳ್ಳವನ್ನು ಕೆಲವರು ನಿವೇಶನ ಮಾಡಿಕೊಂಡಿದ್ದಾರೆ, ಇದು ತಿಳಿದೂ ಪಾಲಿಕೆಯವರು ಡೋರ್ ಸಂಖ್ಯೆ ನೀಡಿದ್ದು, ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ಅಂಗನವಾಡಿ ಒತ್ತುವರಿ : ಜಗಳೂರು ತಾಲ್ಲೂಕಿನ ಮುಸ್ಟೂರು ಗ್ರಾಮದಲ್ಲಿ ಅಂಗನವಾಡಿ ಕಟ್ಟಡಕ್ಕೆ ಸೇರಿದ ಜಾಗದಲ್ಲಿ ಮಲ್ಲಪ್ಪ ಮತ್ತು ಪ್ರದೀಪ ಎಂಬುವವರು ಮನೆದೇವರ ದೇವಸ್ಥಾನ ಕಟ್ಟಿದ್ದು, ದೇವಸ್ಥಾನ ತೆರವುಗೊಳಿಸಬೇಕೆಂದು ಗ್ರಾಮದ ನಿಂಗಪ್ಪ ಮನವಿ ನೀಡಿದರು.

ಶಾಲೆಗೆ ಜಾಗ ಕೊಡಿ : ಹೊನ್ನಾಳಿನ ತಾಲ್ಲೂಕಿನ ಹೊಳೆಮಾದಾಪುರದಲ್ಲಿ ಶಾಲೆಗೆಂದು ಮೀಸಲಿಡಲಾದ ಸರ್ಕಾರಿ ಜಮೀನನ್ನು ಕೆಲವರು ಖಾಸಗಿ ಕಟ್ಟಡ ಕಟ್ಟಲು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಈ ಭೂಮಿಯನ್ನು ಖಾಸಗಿಗೆ ಬಿಡದೇ ಸರ್ಕಾರಿ ಜಾಗ ಎಂದು ಇ ಸ್ವತ್ತು ಮಾಡಬೇಕು. ಜೊತೆ ಶಾಲೆಗೆ ಮೀಸಲಿಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.

ಮದ್ಯದಂಗಡಿಗೆ ಸರ್ಕಾರಿ ಜಾಗ : ಶಿರಮಗೊಂಡನಹಳ್ಳಿ ಮೂಲ ಸರ್ವೇ ನಂ. 56 ಪ್ರಸ್ತುತ ರಿಸರ್ವೇ ನಂ.133 ರಲ್ಲಿ ಸರ್ಕಾರಿ ಭೂಮಿ ಎಂದು ಪಹಣಿಯಲ್ಲಿದ್ದು, ಈ ಜಾಗವನ್ನು ಅಬಕಾರಿ ಅಧಿಕಾರಿಗಳು ಮದ್ಯದಂಗಡಿ ನಡೆಸಲು ಪರವಾನಗಿ ನೀಡಿದ್ದು, ಇದರಲ್ಲಿ ನಾಲ್ಕು ಎಕರೆ ಜಾಗ ಸರ್ಕಾರದ್ದಾಗಿದ್ದು ಇದನ್ನು ತೆರವುಗೊಳಿಸಬೇಕೆಂದು ಪವನ್‍ರಾಜ್ ಪವಾರ್ ಎಂಬುವವರು ಮನವಿ ಸಲ್ಲಿಸಿದರು.

ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ : ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಅಂಬೇಡ್ಕರ್ ವೃತ್ತದಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸಬೇಕು. ತುರ್ತಾಗಿ ಕಾಮಗಾರಿ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಬಸವರಾಜ್ ಮನವಿ ಮಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಡಿಹೆಚ್‍ಓ ಡಾ.ನಾಗರಾಜ್, ಸ್ಮಾರ್ಟ್‍ಸಿಟಿ ಎಂಡಿ ರವೀಂದ್ರ ಮಲ್ಲಾಪುರ, ಎಸ್‍ಎಲ್‍ಓ ರೇಷ್ಮಾ ಹಾನಗಲ್, ಎಸಿ ಪ್ರೊಬೇಷನರ್ ದುರ್ಗಾಶ್ರೀ, ತಹಶೀಲ್ದಾರ್ ಗಿರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಡಿಡಿ ವಿಜಯಕುಮಾರ್, ಸಮಾಜ ಕಲ್ಯಾಣ ಇಲಾಖೆ ಡಿಡಿ ಕೌಸರ್ ರೇಷ್ಮಾ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Click here to change this text

error: Content is protected !!