ಈರ : ಎಷ್ಟಾತಪಾ ಕೊಟ್ರ ನಮ್ಮೂರ ಕೋವಿಡ್ ಸ್ಕೋರು?
ಕೊಟ್ರ: ಇವತ್ತು ಸಿಂಗಲ್ ರನ್ನು. ಆದರೆ, ಒಂದು ವಿಕೆಟ್ಟು ಬಿದ್ದತಿ ಅಂತಾ ಸುದ್ದಿ ಐತಿ ನೋಡು.
ಈರ: ಬೇಸರದ ವಿಷಯ. ಸದ್ಯ ರನ್ ರೇಟ್ ಕಡಿಮೆ ಆಗಿದ್ದು ಸಮಾಧಾನ ತಂದತಿ.
ಕೊಟ್ರ: ನಾವು ಬರೇ ಡಿಫೆನ್ಸ್ ಆಡ್ಕ್ಯಂತಾ ಇರಬೇಕು. ರನ್ನು ಹೊಡಿಬಾರ್ದು ವಿಕೆಟ್ಟೂ ಬೀಳಬಾರದು. ಇದನ್ನು ಮೇಂಟೇನ್ ಮಾಡಬೇಕು ನೋಡು.
ಈರ: ಎಲ್ಲಿವರೆಗೂ?
ಕೊಟ್ರ: ಕೊರೊನಾ ಇನ್ನಿಂಗ್ಸ್ ಮುಗಿಯಾವರೆಗೂ! ವಾರ ಆಗಬಹುದು..ತಿಂಗಳಾಗ ಬಹುದು….ವರ್ಷಗಳೇ ಕಳೆಯಬಹುದು.
ಈರ : ಇದೊಳ್ಳೇ ವಿಚಿತ್ರ ಪೇಚಿನ ಮ್ಯಾಚ್ ನೋಡಪಾ! ಕೊರೊನಾ ಬೌಲಿಂಗಿಗೆ ಓವರ್ಗಳ ಮಿತಿನೇ ಇಲ್ಲ.
ಕೊಟ್ರ : ಅದೂ ಸೀದಾ ಮನುಷ್ಯನ ಶ್ವಾಸಕೋಶದ ಮೇಲೇ ಬೌನ್ಸರ್ ಒಗಿತತಿ. ತಪ್ಪಿಸಿಕೊಂಡೋನು ಸೀದಾ ಪೆವಿಲಿಯನ್ಗೆ ವಾಪಾಸು ಆಗಬಹುದು ಪುಣ್ಯವಂತ. ಹೊಡತಾ ತಿಂದೋನು ಚೇತರಿಸಿಕೆಂಡರೆ ಸ್ಟ್ರೆಚರ್ ಮ್ಯಾಲೆ ಪೆವಿಲಿಯನ್ಗೆ ಹಾಕ್ಯಂಡು ಬರಬಹುದು ಅದೃಷ್ಟವಂತ. ಇನ್ನು ಬೋಲ್ಡ್ ಆದೋನು ಕೇರ್ ಆಫ್ ಭಗವಂತ!
ಈರ :ಸಾಕು. ಈ ಕೋವಿಡ್ ವಿಷಯ ಬಿಡು. ಕುಡುಕರ ವಿಷಯ ಏನು ಹೇಳ್ತತಿ?
ಕೊಟ್ರ: ತಮ್ಮಾ ಬೆಂಗಳೂರು ಮುಂತಾದ ಕಡೆ ಕುಡುಕರು ಕಿಲೋ ಮೀಟರ್ ಗಟ್ಟಲೇ ಕ್ಯೂನಾಗೆ ನಿಂತಾರೆ. ಹೆಂಗಸರು-ಗಂಡಸರು ಭೇದ ಇಲ್ಲ. ಕಾಮನ್ ಕ್ಯೂ. ಮಂಗಳೂರಿನಾಗೆ ನೋಡಿದ್ರೆ ಬರೇ ಲೇಡಿಸ್ ಕ್ಯೂ ಕಾಣ್ತಾ ಇತ್ತು. ಹೆಂಗಸರೇ ಸ್ಟ್ರಾಂಗು ಗುರು. ಕೆಲವು ಊರಾಗೆ ತೀರ್ಥ ಸಿಕ್ಕಿದ್ದಕ್ಕೆ ಉರುಳು ಸೇವೆ ಮಾಡ್ಯಾರೆ. ಒಬ್ಬನಿಗೆ ನಿಶೆ ನೆತ್ತಿಗೇರಿ ಕತ್ತಿ ಹಿಡಿದು ಇನ್ನೊಬ್ಬನ್ನ ಮ್ಯಾಲೇನೆ ಕಳಿಸ್ಯಾನ. ಇದನ್ನೆಲ್ಲಾ ನೋಡಿದ್ರೆ ಕೋವಿಡ್ ನಿಯಂತ್ರಣಕ್ಕಿಂತ ಸರ್ಕಾರಕ್ಕೆ ಕುಡುಕರ ನಿಯಂತ್ರಣನೇ ಕಷ್ಟ ಆಗಬಹುದು.
ಈರ: ಹೇ ತಲೆನೋವಿನ ಪರಿಸ್ಥಿತಿ. ಹೋಗ್ಲೀ ಇದರಿಂದ ಬೊಕ್ಕಸಕ್ಕೆ ಆದಾಯ ಏನಾದ್ರೂ ಆಗುತ್ತೆ ಅಂತಿಯಾ?
ಕೊಟ್ರ: ಲೇ! ಬೆಂಗಳೂರಿನ ಲೆವೆಲ್ಲಿ ರೋಡಿನಾಗಿರೋ ಟಾನಿಕ್ ವೈನ್ ಶಾಪ್ ಒಂದರಲ್ಲಿಯೇ ಒಂದೇ ದಿನಕ್ಕೆ ಆಗಿರೋ ವ್ಯಾಪಾರ ನಾಲ್ಕು ಕೋಟಿ ರೂಪಾಯಿ! ಭಾರತ ಬಡ ದೇಶ ಅಂದುಕೊಂಡೋರು ಬಾಯಿ ಬಡ್ಕಬೇಕು.
ಈರ: ಹೊಗ್ಗೋ ಇವನ. ಅದು ಸರಿ ಈ ಕಿಲೋಮೀಟರ್ ಉದ್ದನೆಯ ಕ್ಯೂನಾಗೆ ಅಷ್ಟೊತ್ತು ನಿಂತೋರಿಗೆ ಅವರ ಸರತಿ ಬರುವುದರ ಒಳಗೆ ಟೈಮು ಆತು ಅಂತಾ ಅಂಗಡಿ ಕ್ಲೋಸ್ ಮಾಡಿದರೆ ಏನು ಮಾಡ್ತಾರೆ?
ಕೊಟ್ರ: ಲೇ ಇಂತಾ ವಿಷಯದಾಗೆ ಜನಾ ಬಾಳ ಬುದ್ಧಿ ಓಡಿಸ್ತಾರೆ. ಕೆಲವರು ಚಾಪೆ ದಿಂಬಿನ ಜೊತೆಗೇ ಬಂದಾರೆ. ರಾತ್ರಿ ಆಗತ್ಲೂ ಅಲ್ಲಿಯೇ ಸೈಡ್ ಹಚ್ಚಿ ಮಲಗಿ ಬೆಳಗಿನ ಜಾವನೇ ಕ್ಯೂ ಹಚ್ಚೋಕೆ ರೆಡಿ ಇದಾರೆ.
ಕೊಟ್ರ: ಅಲ್ಲಾ ಡಿಮಾನಿಟೈಸೇಷನ್ ಆದಾಗ ಒಳಗೆ ಬಚ್ಚಿಟ್ಟ ಹಣಾನ ಬ್ಯಾಂಕಿಗೆ ಕಟ್ಟೋಕೆ ಕ್ಯೂ ನಿಲ್ಲೋಕೆ ನಾಚಿಕೊಳ್ಳುತ್ತಿದ್ದರು ಮಂದಿ. ಈಗ ಯಾವ ಸಂಕೋಚ ಇಲ್ಲದೇ ನಿಂತು ಕೊಂಡಾರೆ ಅಂದ್ರೇ ಈ ಎಣ್ಣೆಯ ಎಫೆಕ್ಟ್ ಎಂತಹದ್ದು ಇರಬೇಕು!?
ಕೊಟ್ರ: ಬೇರೆ ಊರಿನ ಪರಿಸ್ಥಿತಿ ಹಿಂಗಾದರೆ, ನಮ್ಮೂರಿನ ಕುಡುಕರು ಶೋಕಾಚರಣೆ ಮಾಡ್ತಾ ಇದಾರೆ.
ಈರ: ಹೌದು! ಇಲ್ಲಿ ಇನ್ನೂ ಎರಡು ದಿನ ಎಣ್ಣೆ ಅಂಗಡಿ ಬಂದ್ ಅಂತೆ!?
ಕೊಟ್ರ: ಅದೇ ದೊಡ್ಡ ನಿರಾಸೆ ಆಗಿ ಬಿಟ್ಟತಿ. ಶೌಚಾಲಯಕ್ಕೆ ಅವಸರಾದರೆ ತಡಕೊಂತಾರೋ ಏನೋ. ಈ ಔಷಧಾಲಯ ಓಪನ್ ಆಗೋವರೆಗೂ ನಮ್ಮ ಜನಕ್ಕೆ ತಡೆಯೋಕೆ ಆಗ್ತಾ ಇಲ್ಲಾ!
ಈರ: ಹಂಗಾರೇ ನಮ್ಮ ಕುಕ್ಕರಳ್ಳಿ ಎಣ್ಣೆ ಕಾಶಿ ಪರಿಸ್ಥಿತಿ ಏನು?
ಕೊಟ್ರ: ಸಿಟ್ಟಾಗಿ ಮನಸ್ಸಿನಲ್ಲೇ ಗ್ಲಾಸಿನಾಗೇ ಮುಳಿಗಿರೋ ಕನಸು ಕಾಣ್ತಾ ಇದಾನೆ. ತಲೆ ಕೆಟ್ಟು ನನಗೆ ಫೋನ್ ಮಾಡಿ ಒಂದು ಹಳೆಯ ಗಾದೆ ಮಾತನ್ನು ಹೊಸ ಟೈಪ್ ಹೇಳಿದಾ!
ಈರ: ಏನಂತಾ?
ಕೊಟ್ರ: ಕೈಗೆ ಬಂದ ಬಾಟ್ಲಿ ಬಾಯಿಗೆ ಬರಲಿಲ್ಲ!
ಆರ್.ಟಿ. ಅರುಣ್ಕುಮಾರ್
[email protected]