ಆ ಮಾವಿನ ಗಿಡದಂತೆ ನಾವೂ ಈಗ ಮೈ ಕೊಡವಿ ನಿಲ್ಲಬೇಕಿದೆ‌

ನಮ್ಮ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಇತರೆಲ್ಲಾ ಗಿಡಮರಗಳ ಜೊತೆಗೆ ನೂರಾರು ಮಾವಿನ ಗಿಡಗಳನ್ನೂ ಬೆಳೆಸಿದ್ದೇವೆ. ಸುತ್ತಮುತ್ತ ಮರ ಗಿಡಗಳು ಹೆಚ್ಚಿದ್ದಷ್ಟೂ ಸ್ವಚ್ಛ ಉಸಿರು ಸಿಗುತ್ತದೆ. ಜೀವ ಆರೋಗ್ಯದಿಂದಿರುತ್ತದೆ ಅನ್ನೋ  ವಿಷಯ ಹೊಸದೇನಲ್ಲ. ಜೀವಪರ ಜಗತ್ತು ರೂಪುಗೊಳ್ಳಬೇಕೆಂದರೆ, ನಾವು ಭೂಮಿಯ ಹಸಿರನ್ನು ಹೆಚ್ಚು ಮಾಡಬೇಕು. ಈ ಕಾಯಕ  ಎಂದಿಗಿಂತ ಈಗ ಮುಖ್ಯವಾಗಿದೆ ಅಂತ ನಾನು ಭಾವಿಸಿದ್ದೇನೆ. ಶ್ರೀಪೀಠದ ಆವರಣದಲ್ಲಿ ಮಾವಿನ ಗಿಡ ನೆಟ್ಟು ಬೆಳೆಸುವ ಹೊತ್ತಲ್ಲಿ ಒಂದು ಜೀವಪರ ಘಟನೆ ನಡೆಯಿತು. ಆ ಘಟನೆಗೂ ಇವತ್ತಿನ ಮಾನವನ ಸ್ಥಿತಿಗೂ ಸಂಬಂಧವಿದೆ. ಹಾಗಾಗಿ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.  

ಸುಮಾರು ಮೂರು ವರ್ಷ ವಯಸ್ಸಿನ ಹಲವು ಮಾವಿನ ಗಿಡಗಳನ್ನ ನಾವು ಶ್ರೀಪೀಠದ ಆವರಣದಲ್ಲಿ ತಂದು ನೆಟ್ಟೆವು. ಹಾಗೆ ನೆಟ್ಟು ಬೆಳೆಸುವಾಗ ಒಂದು ಮಾವಿನ ಗಿಡ ರಸ್ತೆಗೆ ಅಡ್ಡ ಬಂದಿದ್ದರಿಂದಾಗಿ ಬೇರೆಡೆಗೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಉಂಟಾಯ್ತು. ಸ್ಥಳಾಂತರಿಸಿದ ಮೇಲೆ ಆ ಮಾವಿನ ಗಿಡ ಭಾಗಶಃ ಒಣಗುತ್ತಿದ್ದದ್ದು ನನಗೆ ದೊಡ್ಡ ಚಿಂತೆಯಾಗಿತ್ತು. ಪ್ರೀತಿಯಿಂದ, ಅಕ್ಕರೆಯಿಂದ ಬೆಳೆಸಿದ ಗಿಡವಾಗಲೀ, ಮಗುವಾಗಲೀ ಇನ್ನಿಲ್ಲವಾದರೆ ಆಗುವ ದುಃಖ ಅಷ್ಟಿಷ್ಟಲ್ಲ. ಆದ್ರೂ ನಾನು ಆ ಒಣಗುತ್ತಿದ್ದ ಮಾವಿನ ಗಿಡವನ್ನ ದಿನಾ ಗಮನಿಸುತ್ತಿದ್ದೆ. ಪ್ರೀತಿಯಿಂದ ನೀರೆರೆಯುತ್ತಿದ್ದೆ. ರೆಂಬೆಕೊಂಬೆಗಳಲ್ಲಿದ್ದ ಎಲೆಗಳೆಲ್ಲಾ ಒಣಗಿ ನಿಂತಿದ್ದರೂ ಆ ಗಿಡಕ್ಕೆ ಬದುಕುವ ತಾಕತ್ತಿದೆ ಅಂತ ನನಗಾದ್ರೂ ಅನಿಸುತ್ತಿತ್ತು. 

ಒಂದಿನ ಬೆಳಗ್ಗೆ ಎಲ್ಲಾ ಮಾವಿನ ಗಿಡಗಳನ್ನೂ ಅಕ್ಕರೆಯಿಂದ ಮಾತಾಡಿಸುತ್ತಾ ಮೈದಡವುತ್ತಾ ಹೋಗುತ್ತಿದ್ದಾಗ ಒಣಗಿದ ಮಾವಿನ ಗಿಡದ ಮೈಯನ್ನೂ ಪ್ರೀತಿಯಿಂದ ನೇವರಿಸಿದೆ. ಅದರ ನೋವು ನನಗೆ ಅರ್ಥವಾಗುತ್ತಿತ್ತು. ನನ್ನ ಪ್ರೀತಿ ಅದರ ಎದೆಗೆ ತಾಕುತ್ತಿತ್ತು. ನಮ್ಮಿಬ್ಬರದು ಮೌನ ಸಂಭಾಷಣೆ. ಎಡೆಬಿಡದ ಚಟುವಟಿಕೆಗಳ ನಡುವೆಯೂ ದಿನಾ ನಾನು ಒಣಗುತ್ತಿದ್ದ ಮಾವಿನ ಗಿಡಕ್ಕೆ ಪ್ರೀತಿ ಮತ್ತು ಅಕ್ಕರೆಯನ್ನ ಕೊಡಲು ಮರೆಯಲಿಲ್ಲ.

ಏನಾಶ್ಚರ್ಯ, ಒಂದಿನ ಒಣಗಿದ ಮಾವಿನ ಗಿಡದ ಬುಡದಿಂದ ಮೇಲೆ ಸಣ್ಣದೊಂದು ಚಿಗುರು ಕಾಣಿಸಿತು. ಹೋದ ಜೀವ ಬಂದಂಗಾಗಿತ್ತು. ಅವತ್ತು ನನ್ನ ಖುಷಿಗೆ ಪಾರವೇ ಇರಲಿಲ್ಲ. ಅದರ ಬುಡದಲ್ಲಿ ಕೂತು ಸಣ್ಣ ಮಗುವಿನ ಮೈ ದಡವುವಂತೆ ಅದರ ಮೈ ದಡವಿದೆ, ತಬ್ಬಿಕೊಂಡೆ, ಮಾತಾಡಿಸಿದೆ. ಒಂದು ವಾರದಲ್ಲಿ ಒಣಗಿದ ಮಾವಿನ ಗಿಡದ ಬುಡ ಹಸಿರಿನಿಂದ ನಳನಳಿಸುತ್ತಿತ್ತು.

ಯಾಕೆ ಹೇಳಿದೆನೆಂದರೆ ಮನುಷ್ಯನ ಬದುಕನ್ನೂ ಈಗ ಕೊರೊನಾ ವೈರಸ್ ಸ್ಥಿತ್ಯಂತರಗೊಳಿಸಿದೆ, ಥೇಟ್ ಮಾವಿನ ಗಿಡದಂತೆ. ಹಾಗಂತ ಧೃತಿಗೆಡಬೇಕಿಲ್ಲ. ಹೇಗೆ ಇನ್ನೇನು ಸತ್ತೆ ಅಂತ ಸೊರಗುತ್ತಿದ್ದ ಮಾವಿನ ಗಿಡ ನೆಲದ ಆಳಕ್ಕೆ ಬೇರೂರಿ ಮತ್ತೆ ಚಿಗುರಿ ನಿಂತಿತೋ ಹಾಗೆ ಮನುಕುಲವೂ ಮೈ ಕೊಡವಿಕೊಂಡು ನಿಲ್ಲಬೇಕಿದೆ. 

ಅದು ಮನುಷ್ಯನಿಗೆ ಸಾಧ್ಯವಿದೆ.

ಅಂದಹಾಗೆ ಇವತ್ತು ‘ವಿಶ್ವ ಭೂ ದಿನ’. ದುರಂತ ಅಂದ್ರೆ ನಾವು ಭೂಮಿಯನ್ನ ಅಪಾರವಾಗಿ ಕಲುಷಿತ ಗೊಳಿಸಿದ್ದೇವೆ. ಜಾಗತಿಕ ತಾಪಮಾನ ಹೆಚ್ಚಾಗ್ತಿದೆ. ಭೂಮಿ ನಿಧಾನಕ್ಕೆ ಉಸಿರುಗಟ್ಟುತ್ತಿದೆ. ಕ್ಷಣಕ್ಷಣವೂ ಭೂಮಿಯನ್ನ ನಾಶ ಮಾಡ್ತಿರೋದ್ರಿಂದ ಇನ್ನೊಂದಿಷ್ಟು ವರ್ಷಗಳಲ್ಲಿ ಈ ಭೂಮಿ ಮನುಷ್ಯನ ವಾಸಕ್ಕೆ ಯೋಗ್ಯವಾಗಿ ಉಳಿಯಲಾರದೇನೋ ಅಂತ  ಗ್ರೇಟ್ ಸೈಂಟಿಸ್ಟ್ ಗಳೆಲ್ಲಾ ಆತಂಕಪಟ್ಟಿದ್ದಾರೆ. ಗ್ರೆಟಾ ಥನ್ ಬರ್ಗ್ ಅನ್ನೋ ಹುಡುಗಿ, `ಈ ಭೂಮಿಯೆಂಬ ಭಾಗ್ಯವನ್ನ ಉಳಿಸಲು ಏನಾದ್ರೂ ಮಾಡಿ’ ಅಂತ ಜಗತ್ತಿನ ದೇಶಗಳ ನಾಯಕರ ಕುತ್ತಿಗೆ ಪಟ್ಟಿ ಹಿಡಿದು ಕೇಳುತ್ತಿದ್ದಾಳೆ. ಅವಳ ದನಿ ಜಗತ್ತಿನ ಎಲ್ಲಾ ಪರಿಸರಾಸಕ್ತ ಜನರ ದನಿಯಾಗಿದೆ. ಈ ಎರಡೂ ಸಂಕಷ್ಟಗಳ ನಡುವೆ ನನ್ನದೊಂದು ಮನವಿ. ಲಾಕ್‌ಡೌನ್‌ನಲ್ಲಿ ನಿಮ್ಮ ಮನೆಯ ಸುತ್ತಮುತ್ತಲಿನವರಿಗೆ ಆಸರೆಯಾಗಿ ನಿಲ್ಲಿ. 

ಸುತ್ತಮುತ್ತ ಒಂದಾದರೂ ಗಿಡ ನೆಡಿ.

ಎರಡೂ ದೇಶ ಸೇವೆಯೇ. ಈಶ ಸೇವೆಯೇ. ಶ್ವಾಸ ಸೇವೆಯೇ. ಮುಂದೆ ಅವು ನಮ್ಮ ಮಕ್ಕಳನ್ನು ಪೊರೆಯುತ್ತವೆ.


ಶ್ರೀ ವಚನಾನಂದ ಸ್ವಾಮೀಜಿ
ಪಂಚಮಸಾಲಿ ಜಗದ್ಗುರು ಪೀಠ, ಹರಿಹರ.

error: Content is protected !!