ಮೌಲ್ಯಗಳನ್ನು ಬಿತ್ತಿ ಬೆಳೆಯುವವರು ಬೇಕಿದೆ : ಸಾಣೇಹಳ್ಳಿ ಶ್ರೀ

ದಾವಣಗೆರೆ, ಅ. 8- ಪ್ರಸ್ತುತ ದಿನಗಳಲ್ಲಿ ಹಣವನ್ನು ಬಿತ್ತಿ ಹಣವನ್ನು ಬೆಳೆಯುವವರ ಬದಲಾಗಿ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಿ ಮೌಲ್ಯಗಳನ್ನು ಬೆಳೆಯುವಂತವರು ಬೇಕಾಗಿದ್ದಾರೆ ಎಂದು ಸಾಣೇಹಳ್ಳಿಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ `ಉದಕದೊಳಗಿನ ಕಿಚ್ಚು’ ಸಿನಿಮಾದ ಪೋಸ್ಟರ್ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಪ್ರತಿ ದಿನವೂ ಲಕ್ಷಾಂತರ ರೂ. ತೆರಿಗೆ ಕಟ್ಟುವ ಶ್ರೀಮಂತರು ನಮ್ಮೊಂದಿಗಿದ್ದಾರೆ. ಆದರೆ ಅವರು ಸಮಾಜದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಬೆಳೆಸುವ, ಜನರಲ್ಲಿ ನೈತಿಕ ಪ್ರಜ್ಞೆ ಜಾಗೃ ತಗೊಳಿಸುವ, ಸುಂದರ ಸಮಾಜ ನಿರ್ಮಿಸಲು ಹಣವನ್ನು ಸದ್ವಿನಿಯೋಗಿಸುತ್ತಿಲ್ಲ ಎಂದರು.

ಯಾರು ಹಣದ ಹಿಂದೆ ಓಡುತ್ತಾರೋ ಅವರಿಗೆ ಸಾಹಿತ್ಯ, ಸಂಗೀತ, ಕಲೆ, ಧರ್ಮದ ಮೌಲ್ಯಗಳು ಬೇಕಾಗಿರು ವುದಿಲ್ಲ. ಮೌಲ್ಯಗಳನ್ನು ಬೆಳೆಸುವ ಕೆಲಸ ನಮ್ಮದಲ್ಲ ಎಂದು ಹೊಣೆ ಗಾರಿಕೆಯಿಂದ ಜಾರಿಗೊಳ್ಳದೆ, ನಮ್ಮದೂ ಹೊಣೆಗಾರಿಕೆ ಇದೆ ಎಂದು ಎಲ್ಲರೂ ಅರ್ಥ ಮಾಡಿಕೊಂಡಾಗ ಸಂಪಾ ದನೆಯ ಒಂದಿಷ್ಟು ಹಣ ವಿನಿಯೋಗಿಸಲು ಅವಕಾಶ ಒದಗಿ  ಬರುತ್ತದೆ ಎಂದರು.

ದಯವೇ ಧರ್ಮದ ಮೂಲ ಎಂದು ಒಂದು ಕಡೆ ಹೇಳುವ ಜನರು ಮತ್ತೊಂದು ಕಡೆ ಭಯವನ್ನೇ ಧರ್ಮದ ಮೂಲ ಮಾಡಿಕೊಳ್ಳು ವುದನ್ನು ಕಾಣುತ್ತಿದ್ದೇವೆ. ವೈದಿಕ ಪರಂಪರೆ ನಮ್ಮನ್ನು ಯಾವ ದಿಕ್ಕಿನ ಕಡೆ ಕೊಂಡೊಯ್ಯುತ್ತಿದೆ ಎಂಬ ಅರಿವಿದ್ದರೂ ಮತ್ತೆ ಮತ್ತೆ ಜನರು ಅದೇ ಪರಂಪರೆಯನ್ನು ಅಪ್ಪಿಕೊಳ್ಳುತ್ತಿದ್ದಾರೆ. ಅಂತವರಿಗೆ ಮಾರ್ಗದರ್ಶನ ಮಾಡುವುದೇ ಈ  ಚಿತ್ರತಂಡದ ಉದ್ದೇಶವಾಗಿದೆ ಎಂದರು.

ಚಲನಚಿತ್ರಕ್ಕೂ ಸ್ವಾಮೀಜಿಗಳಿಗೂ ಏನು ಸಂಬಂಧ ಎಂದು ಭಕ್ತರಿಗೆ ಆಶ್ಚರ್ಯವಾಗಬಹುದು. ಆದರೆ ಬಸವ ತತ್ವಕ್ಕೂ ಸ್ವಾಮೀಜಿಗಳಿಗೂ ಸಂಬಂಧವಿದೆ. ಬಸವ ತತ್ವಗಳನ್ನು ಯಾರು ಯಾವ ಮಾಧ್ಯಮಗಳ ಮೂಲಕ ಜನರ ಮನಸ್ಸಿಗೆ ತಟ್ಟುವ ಹಾಗೆ ಮಾಡುತ್ತಾರೋ ಅವರೆಲ್ಲರೂ ನಮಗೆ ಬೇಕಾದವರೇ ಎಂದು ಶ್ರೀಗಳು ಸ್ಪಷ್ಟಪಡಿಸಿದರು.

ಹಿರಿಯ ತರಳಬಾಳು ಜಗದ್ಗುರು ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು  ಸ್ವಾತಂತ್ರ್ಯ ಪೂರ್ವದಲ್ಲಿಯೇ ಎಲ್ಲಾ ವರ್ಗದ ಜನರನ್ನೂ ಪ್ರೀತಿಸುತ್ತಿದ್ದರು. ಅದರಲ್ಲೂ ರಂಗ ಭೂಮಿ ಬಗ್ಗೆ ವಿಶೇಷ ಒಲವು ಹೊಂದಿದ್ದರು. ನಾಟಕಕಾರರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ರಂಗಭೂಮಿ ಮಾಧ್ಯಮವನ್ನು ತತ್ವ ಪ್ರಚಾರಕ್ಕಾಗಿ ಸಮರ್ಥವಾಗಿ ಸದ್ಭಳಕೆ ಮಾಡಿಕೊಂಡರು ಎಂದು ಸ್ಮರಿಸಿದರು.

ಹನ್ನೆರಡನೇ ಶತಮಾನದಲ್ಲಿ ಶೋಷಿತ ವರ್ಗ ತಲೆ ಎತ್ತಿ ಬದುಕುವಂತೆ ಬಸವಣ್ಣನವರು ಮಾಡಿದ್ದರು. ಇಂದು ಮತ್ತೆ ಆ ಕೆಲಸವನ್ನು ಮಾಡಬೇಕೆಂಬ ಉತ್ಸಾಹ ಚಿತ್ರದ ನಿರ್ದೇಶಕರು ಹಾಗೂ ತಂಡದವರಲ್ಲಿದೆ. ದಲಿತ ಮಹಿಳೆಯೊಬ್ಬಳು ಹೇಗೆ ಶಿಕ್ಷಣ ಪಡೆದು ಸಮಾಜಲ್ಲಿ ತಲೆ ಎತ್ತಿ ಬದುಕುವ ವಾತಾವರಣ ನಿರ್ಮಾಣವಾಗುತ್ತದೆ. ಸಮಾಜ ಅವಳನ್ನು ಹೇಗೆ ಕಾಣುತ್ತದೆ? ಎಂಬ ವಿಚಾರಗಳನ್ನು ಸರಳವಾಗಿ ನಿರೂಪಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಈ ಕಿಚ್ಚು ಸಮಾಜದಲ್ಲಿನ ಎಲ್ಲಾ ರೀತಿಯ ಅನಿಷ್ಟಗಳನ್ನು ವಿರೋಧಿಸುವ ವಾತಾವರಣ ನಿರ್ಮಾಣವಾಗಿ ಸಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿ ಎಂದು ಆಶಿಸಿದರು.

ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷರೂ, ಹಿರಿಯ ರಂಗ ಸಂಘಟಕರೂ ಆದ ಶ್ರೀನಿವಾಸ ಜಿ.ಕಪ್ಪಣ್ಣ ಅವರು ವಚನ ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, `ಉಳ್ಳವರು ಶಿವಾಲಯವ ಮಾಡುವರು’ ಎನ್ನುವ ಹಾಗೆ ಇಂದು ಹಣ ಉಳ್ಳವರು ಮಲ್ಟಿ ಸ್ಟಾರ್ ಸಿನಿಮಾಗಳನ್ನು ಮಾಡುತ್ತಾರೆ. ಭಾಷೆ, ಸಂಸ್ಕೃತಿ ನಾಶ ಮಾಡುತ್ತಿದ್ದಾರೆ. ಹಣ ಇಲ್ಲದವರು ಸಮಾಜಕ್ಕೊಂದು ಸಂದೇಶ ಕೊಡಬೇಕೆಂಬ ಆದರ್ಶ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ಅಂತವರಲ್ಲಿ ನರೇಶ್ ಸಹ ಒಬ್ಬರು ಎಂದರು.

ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಮಾತನಾಡುತ್ತಾ, ಬುದ್ಧ, ಬಸವ ಹಾಗೂ ಗಾಂಧೀಜಿ ಈ ದೇಶಕ್ಕೆ ದಾರಿದೀಪ. ನಮ್ಮ ಬದುಕನ್ನು ಸುಂದರವಾಗಿಸುವ ಇವರನ್ನು ಮತ್ತೆ ನೆನಪಿಸುವ ಕೆಲಸವನ್ನು ನಾಟಕಗಳು, ಸಿನಿಮಾಗಳು ಮಾಡುತ್ತಿವೆ ಎಂದರು.

ಕಳಬೇಡ, ಕೊಲಬೇಡ ಎಂದು ವಚನಗಳ ಮೂಲಕ ಸರಳವಾಗಿಯೇ ಜನರನ್ನು ತಿದ್ದುವ ಕೆಲಸವನ್ನು ಬಸವಣ್ಣ ಮಾಡಿದ್ದರು. ಇಂದು ಬಸವಣ್ಣನವರನ್ನೇ ಪ್ರಧಾನವಾಗಿಟ್ಟುಕೊಂಡು ಅವರ ತತ್ವ, ಸಿದ್ಧಾಂತಗಳನ್ನು ಸಿನಿಮಾ ಮೂಲಕ ತಿಳಿಸುವ ಕೆಲಸ ಮಾಡಲು ಹೊರಟಿರುವುದು ಉತ್ತಮ ಕೆಲಸ ಎಂದರು.

ನಿವೃತ್ತ ಪ್ರಾಚಾರ್ಯ ನಾ.ಲೋಕೇಶ್ ಒಡೆಯರ್ ಮಾತನಾಡುತ್ತಾ ಭ್ರಷ್ಟಾಚಾರ, ಜಾತೀಯತೆ ಇತರೆ ಅನಿಷ್ಟಗಳ ನಡುವೆ ಉಸಿರುಗಟ್ಟಿಸುವ ವಾತಾವರಣದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ 12ನೇ ಶತಮಾನದ ಶಿವಶರಣರ ಆದರ್ಶಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಾಗ ಸಮ ಸಮಾಜ ಕಟ್ಟಲು ಸಾಧ್ಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಪ್ರೊ.ಎಸ್. ಹಾಲಪ್ಪ, ಫಾ. ಬಿ. ರಾಜಶೇಖರ್, ವಿಜಯಕುಮಾರ ಸೋನಾರೆ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ಉಪಸ್ಥಿತರಿದ್ದರು.

ನಿರ್ದೇಶಕ ಡಿಂಗ್ರಿ ನರೇಶ್  ಪ್ರಾಸ್ತಾವಿಕವಾಗಿ ಮಾತನಾಡಿ, ಕೊನೆಯಲ್ಲಿ ವಂದಿಸಿದರು. ಯಶಾದಿನೇಶ್ ಸಂಗಡಿಗರು ವಚನ ಗೀತೆ ಹಾಡಿದರು.

error: Content is protected !!