ಕೊರೊನಾ ಸೋಲಿಸಿ – ದೇಶವನ್ನು ಗೆಲ್ಲಿಸಿ….

ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಮಾಹಾಮಾರಿ ಜನತೆಗೆ ದೈಹಿಕ, ಮಾನಸಿಕ, ಆರ್ಥಿಕ ಆಘಾತವನ್ನು ಉಂಟುಮಾಡುತ್ತಾ  ಶರವೇಗದಲ್ಲಿ ಸಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಕಾಯಿಲೆಗಳು ಹೊಸದಾಗಿ ಕಂಡುಬಂದರೂ, ಕೊರೊನಾ  ಸೋಂಕಿನಷ್ಟು ಪ್ರಬಲವಾಗಿ ಕಂಡು ಬರಲಿಲ್ಲ. ಭಾರತ ದೇಶದಲ್ಲಿ ಇದರ ವಿರುದ್ಧ ಹೋರಾಡಲು ಸಕಲ ಪ್ರಯತ್ನ ಸತತವಾಗಿ ನಡೆಯುತ್ತಿರುವುದು ಹೆಮ್ಮೆಪಡುವ ವಿಷಯ. ಅದರಲ್ಲೂ ವೈದ್ಯರು, ಅವರಿಗೆ ಬೆಂಬಲವಾಗಿ ನಿಂತಿರುವ ಶುಶ್ರೂಷಕರು, ಇತರೆ ಸಿಬ್ಬಂದಿ, ಎಲ್ಲಾ ಪೊಲೀಸ್ ಸಿಬ್ಬಂದಿ, ಪೌರಾಡಳಿತ ವಿಭಾಗದ ಸಿಬ್ಬಂದಿ ಇವರ ನಿಸ್ವಾರ್ಥ ಸೇವೆ ಹೆಮ್ಮೆಯ ವಿಷಯ. ಇನ್ನೊಂದೆಡೆ ಕಷ್ಟದಲ್ಲಿರುವವರಿಗೆ ಸಹಾಯಹಸ್ತ ನೀಡುವವರ ಸಂಖ್ಯೆಯಂತೂ ಅಪಾರ ಅಂದರೆ ಊಹೆಗೂ ನಿಲುಕದ್ದು.

ದೃಶ್ಯ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮದವರೂ ಹಗಲಿರುಳು ಜನರಿಗೆ ಈ ವ್ಯಾಧಿಯಿಂದ ಆಗುವ ಪರಿಣಾಮಗಳ ಬಗ್ಗೆ ತಿಳುವಳಿಕೆಯನ್ನು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಉತ್ತಮ ತಿಳುವಳಿಕೆ ನೀಡುತ್ತಿದ್ದಾರೆ. ಈ ಕಾರ್ಯದಲ್ಲಿ ಆಕಾಶವಾಣಿ, ದೂರಸಂಪರ್ಕ ಇಲಾಖೆಗಳು ಸಕ್ರಿಯವಾಗಿ ಪಾಲ್ಗೊಂಡು ದೇಶದಲ್ಲಿ ಎಲ್ಲಾ ಭಾಗಗಳಲ್ಲಿಯೂ ಅರಿವು ಮೂಡಿಸುತ್ತಿವೆ. 

ಭಾರತ ಒಂದು ಸಾಂಸ್ಕೃತಿಕ ದೇಶವಷ್ಟೇ ಅಲ್ಲ, ಇದು ಕೊಡುಗೈ ದಾನಿಗಳ ಸಾಗರ ಎಂದೇ ಹೇಳಬಹುದು. ಪ್ರಖ್ಯಾತ ವ್ಯಕ್ತಿಗಳು, ಶ್ರೀಮಂತರಲ್ಲದೆ ಜನ ಸಾಮಾನ್ಯರೂ, ತಾವೇ ಕಷ್ಟದಲ್ಲಿದ್ದರೂ ತಮ್ಮ ಕೈಲಾದ ಮಟ್ಟಿಗೆ ಕೊಡುಗೆ ನೀಡಿ ಈ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಆರ್ಥಿಕ ಮತ್ತು ಮಾನಸಿಕ ಬೆಂಬಲವನ್ನು ನೀಡುತ್ತಿರುವುದು ವಿಶ್ವಕ್ಕೇ ಮಾದರಿಯಾಗಿದೆ. ಎಲ್ಲಾ ಪ್ರಾಕಾರದ ಸಂಗೀತ ಕಲಾವಿದರು, ಕಿರಿ-ಹಿರಿ ತೆರೆಯ ಕಲಾವಿದರೂ, ಕ್ರೀಡಾಪಟುಗಳು, ಪ್ರತಿಭಾವಂತ ವ್ಯಕ್ತಿಗಳು ಸ್ಪೂರ್ತಿದಾಯಕ ಸಂದೇಶಗಳನ್ನು ನೀಡುತ್ತಾ, ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಭಾವನಾತ್ಮಕವಾಗಿ ಖುಷಿ ಪಡುವ ವಿಷಯ.

ಕೊರೊನಾ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ಸಮರ್ಪಿಸಿಕೊಂಡು ಹಗಲಿರುಳು ನಮ್ಮನ್ನು ರಕ್ಷಿಸಲು ಹೋರಾಟ ಮಾಡುತ್ತಿರುವ ಕೊರೊನಾ ಯೋಧರಿಗೆ ಸಹಕಾರ ನೀಡುವುದು ಧರ್ಮ. ಇವರುಗಳು ಧೈರ್ಯಗೆಡದೆ ತಮ್ಮ ಕುಟುಂಬ ವರ್ಗದವರಿಂದ ದೂರ ಉಳಿದು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಆಗಬಹುದಾದ ತೊಂದರೆ ಬಗ್ಗೆ ಚಿಂತೆ ಮಾಡದೇ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಇವರಿಗೆ ಎಷ್ಟು  ಕೃತಜ್ಞರಾಗಿದ್ದರೂ ಸಾಲದು. 

ಈ ವೀರರು ಕಾಯಿಲೆಯಿಂದ ಗುಣಮುಖರಾದವರನ್ನು ಚಪ್ಪಾಳೆ ತಟ್ಟುತ್ತಾ ಹೃದಯಪೂರ್ವಕ ಬೀಳ್ಕೊಡುಗೆ ನೀಡುವುದು ಮಾನವೀಯತೆಯ ಉತ್ತುಂಗ ಎಂದು ಹೇಳಿದರೆ ತಪ್ಪಾಗಲಾರದು. ಈ ಕಾರ್ಯವನ್ನು ನಿರ್ವಹಿಸು ವವರಲ್ಲಿ ಎಲ್ಲಾ ವರ್ಗದ, ಜಾತಿಯ ಮತ್ತು ಧರ್ಮದ ವರು ಇದ್ದಾರೆ. ಅವರವರ ಮನೆಯಲ್ಲಿ ಅವರು ಬಹು ಮುಖ್ಯವಾದ ವ್ಯಕ್ತಿ (ವಿ.ಐ.ಪಿ.) ಎನ್ನುವುದನ್ನು ಮರೆಯಬಾರದು. ಇವರ ಬಗ್ಗೆ ಕೇವಲ ಅನುಕಂಪ, ಶಹಬ್ಬಾಸ್‌ಗಿರಿ ಸಾಲದು, ಕರ್ತವ್ಯದ ಸಮಯದಲ್ಲಿ ಅನೇಕರು ದೈಹಿಕ, ಮಾನಸಿಕ ಆಘಾತಗಳನ್ನು ಅನುಭವಿಸುತ್ತಿರುವುದನ್ನು ವೈಯಕ್ತಿಕವಾಗಿ ಹಾಗೂ ಮಾಧ್ಯಮಗಳ ಮೂಲಕ ತಿಳಿಯುತ್ತಿದ್ದೇವೆ. ಕಣ್ಣಿಗೆ ಕಾಣುವ ದೇವರು ಎನ್ನುವ ಅವರಿಗೆ ಇಂತಹ ಪ್ರಸಂಗಗಳು ಬರುವುದು ಖಂಡಿತವಾಗಿಯೂ ಪ್ರಮಾದ.

ಸಾರ್ವಜನಿಕ ಸ್ಥಳಗಳಲ್ಲಿ ಪರಿಸರವನ್ನು ಹಾನಿಮಾಡುವ ಅಭ್ಯಾಸಗಳನ್ನು ಮಾಡಬಾರದು. ಕಂಡಕಂಡಲ್ಲಿ ಉಗುಳುವುದು, ಮೂಗು ಬಾಯಿ ಮುಚ್ಚದೆ ಕೆಮ್ಮುವುದು, ಮೂಗು ಸ್ವಚ್ಛ ಮಾಡಿಕೊಳ್ಳುವುದು, ಹಸ್ತಲಾಘವ ನೀಡುವುದು, ಮೂತ್ರ ವಿಸರ್ಜನೆ ಮಾಡುವುದು ಮಹಾ ಅಪರಾಧ. ಮಾಸ್ಕ್ (ಮುಖಮುಚ್ಚಿಗೆ) ಧರಿಸದಿರುವುದು ಸಲ್ಲದು. ಇವನ್ನು ಕೇವಲ ಕಾನೂನಿನಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಉಪಯೋಗಿಸುವುದು ಕಂಡು ಬರುತ್ತದೆ. ಅಂತಹ ಸಮಯದಲ್ಲೂ ಅವಸರದಿಂದ ಸರಿಯಾಗಿ ಧರಿಸುವುದಿಲ್ಲ. ಮಾಸ್ಕ್‌ ಧರಿಸುವುದು ಉತ್ತಮ ರಕ್ಷೆಯೇ ಹೊರತು ಶಿಕ್ಷೆ ಅಲ್ಲ. ಇದರಲ್ಲಿ ತಮ್ಮನ್ನಲ್ಲದೇ ಇತರರಿಗೂ ರಕ್ಷಣೆ ನೀಡಬಹುದು. ನಮ್ಮ ಊರುಗಳನ್ನು ಸ್ವಚ್ಛಮಾಡುವ ಕಾರ್ಮಿಕರ ರಕ್ಷಣೆ ನಮ್ಮ ಜವಾಬ್ದಾರಿ. ಸಾಮಾಜಿಕ ಅಂತರವನ್ನು ಅನುಸರಿಸುವುದು ಸುಲಭದ ಕೆಲಸ. ಇದರಿಂದ ಯಾರೂ ಏನನ್ನೂ ಕಳೆದುಕೊಳ್ಳುವುದಿಲ್ಲ. ಇದರ ಪಾಲನೆ ಇಂದಿನ ಸಂದರ್ಭದಲ್ಲಿ ಅತ್ಯಗತ್ಯ. ಇದು ಅನಿವಾರ್ಯವೇ ಹೊರತು ಹೇರಿಕೆ ಅಲ್ಲ.

ಕೊರೊನಾ ರೋಗದಿಂದ ಅನೇಕರು ಬಹಳ ತೊಂದರೆಗಳನ್ನು ಅನುಭವಿಸಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಇದನ್ನು ಕಳಂಕ ಎಂದೇ ಅನೇಕರು ಭಾವಿಸಿದ್ದಾರೆ. ಇದಕ್ಕೆ ಹೆದರಿ ಕಾಯಿಲೆ ಬಗ್ಗೆ ಅನುಮಾನವಿದ್ದರೂ ಪರೀಕ್ಷೆಗಳಿಗೆ ಒಳಗಾಗದೇ ತಪ್ಪಿಸಿಕೊಳ್ಳುವವರೂ ಇದ್ದಾರೆ. ಇದು ಕಳಂಕ ಎಂದು ಭಾವಿಸಿದರೆ ರೋಗವುಳ್ಳ ಅನೇಕ ವ್ಯಕ್ತಿಗಳು ಸದ್ದಿಲ್ಲದೆ ಹೋದಲ್ಲೆಲ್ಲಾ ಕಾಯಿಲೆಯನ್ನು ಹರಡುತ್ತಾರೆ.

ಶಂಕಿತರು, ಸೋಂಕಿತರಿಗೆ ಚಿಕಿತ್ಸೆ ತೆಗೆದುಕೊಳ್ಳಲು ಪ್ರೋತ್ಸಾಹ ನೀಡುವುದು, ಅದು ತೀವ್ರ  ಸ್ವರೂಪಕ್ಕೆ ಹೋಗದಂತೆ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವುದು ಬಹಳ ಅವಶ್ಯಕ. ಇದರಿಂದ ಮಹಾಮಾರಿಯನ್ನು ಮಣಿಸಬಹುದು. ಇದು ನಾವು ನಮ್ಮ ಸಮಾಜಕ್ಕೆ ಕೊಡಬಹುದಾದ ಅಮೂಲ್ಯವಾದ ಕಾಣಿಕೆ ಅಲ್ಲವೇ?

ನಮ್ಮ ಜೀವನ ಶೈಲಿಯನ್ನು ಸಕಾರಾತ್ಮಕವಾಗಿ ಬದಲಿಸುವುದು, ಪರಿಸರದ ಬಗ್ಗೆ ಕಾಳಜಿ ತೋರಿಸುವುದು, ಸ್ವಚ್ಛತೆ ಕಾಪಾಡುವುದು ಇವುಗಳಿಂದ ಕೇವಲ ಕೊರೊನಾ ಅಲ್ಲದೇ ಅನೇಕ ರೋಗಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಎಲ್ಲಾ ಕೆಲಸಗಳನ್ನು ಸರ್ಕಾರ, ಸೇವಾ ಸಂಸ್ಥೆಯವರೇ ಮಾಡಬೇಕು ಎನ್ನುವುದಕ್ಕಿಂತ ಇದು ನನ್ನ ಊರು, ನನ್ನ ದೇಶ ಎಂಬ ಅಭಿಮಾನದಿಂದ ಅವರಿಗೆ ಕೈ ಜೋಡಿಸಬೇಕು. ಇವೆಲ್ಲವನ್ನು ಪಾಲಿಸುವಲ್ಲಿ ನಿಗಾ ವಹಿಸದಿದ್ದರೆ ಪರಿಣಾಮಗಳು ಘೋರ.

ಕೊರೊನಾ ಸೋಲಿಸಿ - ದೇಶವನ್ನು ಗೆಲ್ಲಿಸಿ.... - Janathavani
– ಡಾ|| ಕೆ. ರವೀಂದ್ರ,
ಪ್ರಾಧ್ಯಾಪಕರು
ಚರ್ಮರೋಗ ವಿಭಾಗ,
ಜೆಜೆಎಂ ವೈದ್ಯಕೀಯ ವಿದ್ಯಾಲಯ.
ದಾವಣಗೆರೆ.

error: Content is protected !!