ಹರಿಹರ, ಅ.7- ನಗರದ ಯುಜಿಡಿ (ಎಸ್ಟಿಪಿ) ವಾಟರ್ ಪ್ಲಾಂಟ್ನ ನೀರು ಜಮೀನಿನಲ್ಲಿ ಹರಿದು ಹೋಗುತ್ತಿರುವುದರಿಂದ ಬೆಳೆದ ಫಸಲು ಹಾಳಾಗುತ್ತಿದ್ದು, ನೀರು ಬೇರೆಡೆಗೆ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ನಗರಸಭೆಯ ಅಧಿಕಾರಿಗಳ ಬಳಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹಳೇ ಮೈಸೂರು ಕಿರ್ಲೋಸ್ಕರ್ ಕಂಪನಿಯ ಹಿಂಭಾಗದ ಜಮೀನಿನಲ್ಲಿ ನಗರದಲ್ಲಿನ ಯುಜಿಡಿ ನೀರು ಶೇಖರಣೆ ಮಾಡಿ ಶುದ್ದೀಕರಿಸಿ, ಸಾಗಿಸಲು ಎಸ್ಟಿಪಿ ಪ್ಲಾಂಟ್ ನಿರ್ಮಾಣ ಮಾಡಿದ್ದು, ಇಲ್ಲಿಗೆ ಹರಿದು ಬರುವ ನೀರು ಟ್ಯಾಂಕ್ ತುಂಬಿದ ನಂತರದಲ್ಲಿ ಪಕ್ಕದ ಜಮೀನಿನಲ್ಲಿ ಹರಿದು ಹೋಗುವುದರಿಂದ ಭತ್ತದ ಫಸಲಿಗೆ ಹಾನಿ ಯಾಗಿದೆ. ರೈತರು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಆಕ್ರೋಶಗೊಂಡ ಸ್ಥಳೀಯ ರೈತರು ಪ್ಲಾಂಟ್ ಸ್ಥಳಕ್ಕೆ ನಗರಸಭೆ ಅಧಿಕಾರಿಗಳನ್ನು ಕರೆಸಿ, ಜಮೀನಿನಲ್ಲಿ ಹರಿದು ಹೋಗುತ್ತಿರುವ ನೀರನ್ನು ತೋರಿಸುವ ಮೂಲಕ ಸೂಕ್ತ ವ್ಯವಸ್ಥೆ ಮಾಡದೇ ಹೋದಲ್ಲಿ ನಿಮ್ಮ ವಾಹನಗಳನ್ನು ಇಲ್ಲಿಂದ ತೆರಳಲು ಬಿಡುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದರು.
ನಗರಸಭೆ ಎಇಇ ಬಿರಾದಾರ್ ಮಾತನಾಡಿ, ಈಗಾಗಲೇ ಇಲ್ಲಿನ ನೀರು ಹರಿದು ಹೋಗಲು ಸುಮಾರು 400 ಮೀಟರ್ ಉದ್ದನೆಯ ಪೈಪ್ ಅಳವಡಿಸಲು 24 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಸಿದ್ಧತೆ ಮಾಡಲಾಗಿದೆ. ಮಳೆ ನಿಂತು ಬಿಸಿಲು ಬಿದ್ದ ತಕ್ಷಣವೇ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದು ಹೇಳಿದರು.
ರೈತರಾದ ಬೆಣ್ಣೆ ರೇವಣಸಿದ್ದಪ್ಪ, ಬೆಣ್ಣೆ ರಾಜಶೇಖರ್, ಬೆಣ್ಣೆ ಸಿದ್ದಪ್ಪ ಇತರರು ಮಾತನಾಡಿ, ಇಲ್ಲಿಂದ ಹರಿದು ಬರುವ ಕಲ್ಮಶ ನೀರು ಟ್ಯಾಂಕ್ ತುಂಬಿದ ನಂತರ ಸುಮಾರು 35 ಎಕರೆ ಜಮೀನಿನಲ್ಲಿ ಹರಿದು ಭತ್ತದ ಫಸಲಿಗೆ ಹಾನಿಮಾಡುತ್ತಿದೆ. ಮಳೆ ಕಾರಣ ನೀರು ನಮ್ಮಗಳ ಜಮೀನಿಗೆ ಹರಿದು ಹಾನಿಯುಂಟು ಮಾಡಿದೆ. ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸಿದ ಕಾರಣ ಸ್ಥಳಕ್ಕೆ ಕರೆಸಿ ಅವರಿಗೆ ಮನದಟ್ಟು ಮಾಡಲಾಯಿತು. ಮಾತಿಗೆ ಮಾತು ಬೆಳೆದು ಆಕ್ರೋಶ ವ್ಯಕ್ತಪಡಿಸಿದ್ದೇವೇ ಹೊರತು ಉದ್ದೇಶ ಪೂರ್ವಕವಾಗಿ ಅಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಜಿ. ನಂಜಪ್ಪ, ಪೂಜಾರ್ ಈರಣ್ಣ, ಸುರೇಶ್ ಚಂದಾಪೂರ್, ಬೆಣ್ಣೆ ಬಾಬು, ನಿಜಲಿಂಗಪ್ಪ, ನಾಗರಾಜ್, ನಗರಸಭೆ ವಾಟರ್ ಇಂಜಿನಿಯರ್ ಮಂಜುನಾಥ್ ಇನ್ನಿತರರಿದ್ದರು.