ಎಸ್.ಎ. ಶ್ರೀನಿವಾಸ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಕೊರೊನಾ ವಿರುದ್ಧದ ಹೋರಾಟದಲ್ಲಿ ಜನತೆಯೇ ನೇತೃತ್ವ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಇದೇನು ಜನರ ಬಗ್ಗೆ ಆಡಿರುವ ಮೆಚ್ಚುಗೆಯ ಮಾತೋ? ಎಚ್ಚರಿಕೆಯ ಮಾತೋ?
ಏಕೆಂದರೆ ಕೊರೊನಾ ವೈರಸ್ ಹೊಸತು, ಅದನ್ನು ಎದುರಿಸಲು ತೆಗೆದು ಕೊಳ್ಳುತ್ತಿರುವ ಕ್ರಮಗಳೂ ಹೊಸವು ಹಾಗೂ ಲಾಕ್ಡೌನ್ ಹೇರಿಕೆ ಮತ್ತು ಅದರಿಂದ ಹೊರ ಬರಲು ವಿವಿಧ ದೇಶಗಳು ತೆಗೆದು ಕೊಳ್ಳುತ್ತಿರುವ ಕ್ರಮಗಳೂ ಹೊಸತೇ ಆಗಿದೆ.
ಇಂತಹ ಸಂದರ್ಭದಲ್ಲಿ ಸರ್ಕಾರದ ಎದುರು ಯಾವುದೇ ಸಿದ್ಧ ಸೂತ್ರ ಇಲ್ಲ. ಸಾಮಾಜಿಕ ಅಂತರ ಒಂದೇ ವೈರಸ್ ವಿರುದ್ಧ ಪರಿಣಾಮಕಾರಿ ಮಂತ್ರ. ಈ ಸಾಮಾಜಿಕ ಅಂತರ ಜಾರಿಗೆ ತರಲು ಸರ್ಕಾರ, ಪೊಲೀಸ್ ಪಡೆ ಸೇರಿದಂತೆ ಯಾರಿಂದಲೂ ಸಾಧ್ಯವಿಲ್ಲ. ಅದು ಸಾಧ್ಯವಿರುವುದು ಜನರಿಗೆ ಮಾತ್ರ.
ಹೀಗಾಗಿಯೇ ಪ್ರಧಾನಿ ಕೊರೊನಾ ವಿರುದ್ಧದ ಅಭಿಯಾನದಲ್ಲಿ ಜನರೇ ನೇತೃತ್ವ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ನಾಳೆ ಅಭಿಯಾನ ಸಫಲವಾದರೂ, ವಿಫಲ ವಾದರೂ ಅದರ ಹೊಣೆ ಜನರದ್ದೇ ಆಗಿದೆ. ಈ ಹಿಂದೆ ಏನಾದರೂ ಅವಘಡ ಸಂಭವಿಸಿದಾಗ, ಇಲ್ಲದಿದ್ದರೆ ವೈಫಲ್ಯ ಉಂಟಾದಾಗ ಯಾರನ್ನಾದರೂ ದೂರಬಹುದಿತ್ತು. ಆದರೆ, ಕೊರೊನಾ ವೈಫಲ್ಯ ಇಲ್ಲವೇ ಸಾಫಲ್ಯಕ್ಕೆ ಯಾರು ಕಾರಣ ಎನ್ನುವುದಾದರೆ ಎಲ್ಲರೂ ಕನ್ನಡಿ ಮುಂದೆ ನಿಂತು ನೋಡಿಕೊಳ್ಳಬೇಕಷ್ಟೇ.
ಎರಡು ಬಾರಿ ಹೇರಿಕೆ ಮಾಡಿರುವ ಲಾಕ್ಡೌನ್ ಅನ್ನು ಮತ್ತಷ್ಟು ವಿಸ್ತರಿಸಬೇಕು ಎಂಬ ಆಲಾಪಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.
ಆದರೆ, ಈಗಿರುವ ಪ್ರಶ್ನೆ ಎಂದರೆ ಲಾಕ್ಡೌನ್ ಅವಧಿ ವಿಸ್ತರಿಸಿದರೂ ಫಲಿತಾಂಶ ಈಗಿನದಕ್ಕಿಂತ ಬೇರೆ ಏನೂ ಆಗಿರುವುದಿಲ್ಲ. ಆಡಳಿತ ಈಗಾಗಲೇ ಗರಿಷ್ಠ ಬಲ ಪ್ರಯೋಗ ಮಾಡಿ ಆಗಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇಡೀ ವಿಶ್ವದಲ್ಲೇ ಅತ್ಯಂತ ಪ್ರಬಲ ಲಾಕ್ಡೌನ್ ಜಾರಿಗೆ ತಂದಿರುವುದು ಭಾರತ. ಈಗ ಮತ್ತಷ್ಟು ಬಿಗಿಯ ನಿರೀಕ್ಷೆ ಇಟ್ಟುಕೊಳ್ಳಬೇಡಿ.
ಇನ್ನೊಂದು ಸುತ್ತಿನ ಲಾಕ್ಡೌನ್ ಹೇರಿದರೆ ಆ ವೇಳೆಗೆ ಮಳೆಗಾಲ ಬರುತ್ತದೆ. ಮಳೆಗಾಲ ಎಂದರೆ ಫ್ಲೂ (ಕೆಮ್ಮು, ಜ್ವರ) ಅವಧಿ. ವೈರಸ್ ಹರಡಲು ಬೇಸಿಗೆಗಿಂತ ಉತ್ತಮ ಕಾಲ. ಆ ಅವಧಿಯಲ್ಲಿ ಲಾಕ್ಡೌನ್ ಸಡಿಲಿಕೆ ಈಗಿನದಕ್ಕಿಂತ ಕಷ್ಟಗಳನ್ನೇ ತರಬಹುದು.
ಎಲ್ಲಕ್ಕಿಂತ ಹೆಚ್ಚಾಗಿ ಲಾಕ್ಡೌನ್ ಸರ್ಕಾರಿ ನಿಯಂತ್ರಣವಾದರೆ, ಸಾಮಾಜಿಕ ಅಂತರ ಜನತಾ ನಿಯಂತ್ರಣ. ಒಂದಲ್ಲಾ ಒಂದು ದಿನ ನಾವೆಲ್ಲ ಜನತಾ ನಿಯಂತ್ರಣವನ್ನು ಒರೆಗೆ ಹಚ್ಚದೇ ಬೇರೆ ವಿಧಿಯೇ ಇಲ್ಲ. ದೇಶ ಹಾಗೂ ಜನತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ‘ವಿಟಮಿನ್ ಎಂ’, ಜನರಿಗೆ ಮನಿ (ಹಣ) ಹಾಗೂ ದೇಶಕ್ಕೆ ಮಾರ್ಕೆಟ್ (ಮಾರುಕಟ್ಟೆ). ಇವಿಲ್ಲದೇ ಉಳಿದೆಲ್ಲವೂ ನಿರರ್ಥಕ.
ದೇಶದ ಸಾಕಷ್ಟು ಜನರು ಸರ್ಕಾರ, ದೇಶ ನಮಗೇನು ಕೊಟ್ಟಿದೆ ಎಂದು ಕೇಳುತ್ತಲೇ ಬಂದಿ ದ್ದೇವೆ. ಮೂಲಭೂತ ಹಕ್ಕುಗಳನ್ನು ಕೇಳುತ್ತಲೇ ಬಂದಿದ್ದೇವೆ. ಈಗ ಕರ್ತವ್ಯ ತೋರುವ ಸಮಯ ಬಂದಿದೆ. ಅದೂ ನಮ್ಮಿಂದ, ನಮಗಾಗಿ, ನಮ ಗೋಸ್ಕರ. ಈ ಸಂದರ್ಭದಲ್ಲಿ ಜನರು ಕರ್ತವ್ಯ ಪ್ರಜ್ಞೆ ಮೆರೆದರೆ ಮಾತ್ರ ಸಂಕಷ್ಟದಿಂದ ಪಾರಾಗಿ ಬರಲು ಸಾಧ್ಯ.
ಸ್ವೀಡನ್ನ ಜನತಾ ಜವಾಬ್ದಾರಿಯ ಮಾದರಿ
ವಿಶ್ವದ ಬಹುತೇಕ ದೇಶಗಳು ಕೊರೊನಾ ತಡೆಯಲು ಕಠಿಣ ಲಾಕ್ಡೌನ್ಗೆ ಮೊರೆ ಹೋಗಿದ್ದವು. ಸರ್ಕಾರಿ ಯಂತ್ರದ ಮೂಲಕ ನಿರ್ಬಂಧ ಹೇರಲಾಗಿತ್ತು. ಆದರೆ, ಸ್ವೀಡನ್ ಭಿನ್ನ ಹಾದಿ ಹಿಡಿದಿತ್ತು. ಅಲ್ಲಿನ ಶಾಲೆ, ಕಾಲೇಜು, ಕಚೇರಿಗಳು ಅಷ್ಟೇ ಏಕೆ ಜಿಮ್ಗಳೂ ಸಹ ತೆರೆದಿದ್ದವು. ಹೀಗೆ ಸ್ವೀಡನ್ ಸಂಪೂರ್ಣ ರಿಲ್ಯಾಕ್ಸ್ (ನಿರಾಳ) ಆಗಿದ್ದರೂ, ಅಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣದಲ್ಲಿದೆ.!
ಕಾರಣ ಅಲ್ಲಿನ ಸರ್ಕಾರ ಜನರನ್ನು ನಂಬಿದ್ದು ಹಾಗೂ ಜನರು ಸರ್ಕಾರದ ಸೂಚನೆಗಳನ್ನು ಪಾಲಿಸಿದ್ದು. ಸ್ವೀಡನ್ ಸರ್ಕಾರ ತನ್ನ ಜನರ ಮೇಲೆಯೇ ಕೊರೊನಾ ನಿಯಂತ್ರಣದ ಹೊಣೆ ಹೇರಿತ್ತು. ನೀವು ಬುದ್ಧಿವಂತರಿದ್ದೀರಿ ಹೊಣೆಗಾರಿಕೆಯಿಂದ ವರ್ತಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಿಮ್ಮದೇ ಜವಾಬ್ದಾರಿ ಎಂದು ಹೇಳಿತ್ತು.
ಈಗ ಫಲಿತಾಂಶ ವಿಶ್ವದೆಲ್ಲೆಡೆಗಿಂತ ಭಿನ್ನವಾಗಿದೆ. ಸ್ವೀಡನ್ನಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣದಲ್ಲಿವೆ. ಸ್ವೀಡನ್ ಉಡಾಫೆಯ ಧೋರಣೆ ತೋರಿದೆ ಎಂಬ ಟೀಕೆ ಈ ಹಿಂದೆ ವ್ಯಕ್ತವಾಗಿತ್ತು. ಇದನ್ನು ತಳ್ಳಿ ಹಾಕಿರುವ ಅಲ್ಲಿನ ಉಪ ಪ್ರಧಾನಿ ಇಸಬೆಲ್ಲಾ ಲೊವಿನ್, ಕಠಿಣ ಕ್ರಮಗಳು ದೀರ್ಘಾವಧಿಯಲ್ಲಿ ಕೆಲಸ ಮಾಡುವುದಿಲ್ಲ. ಒಂದು ಹಂತದಲ್ಲಿ ಜನರು ತಿರುಗಿ ಬೀಳುತ್ತಾರೆ. ಇದೇನು 100 ಮೀಟರ್ ಓಟವಲ್ಲ, ಸುದೀರ್ಘ ಮ್ಯಾರಥಾನ್ ಎಂದು ಮೊದಲೇ ಅರ್ಥ ಮಾಡಿಕೊಂಡಿದ್ದೆವು ಎಂದಿದ್ದಾರೆ.
ವೈರಸ್ಗೆ ಲಸಿಕೆ ಕಂಡು ಹಿಡಿಯುವವರೆಗೆ ಈ ಹೋರಾಟ ಮುಂದುವರೆಯಬೇಕಿದೆ. ಅಲ್ಲಿಯವರೆಗೂ ನಿಯಂತ್ರಣಗಳನ್ನು ಹೇರುತ್ತಾ ಜನರನ್ನು ಹೈರಾಣ ಮಾಡಲಾಗದು. ಹೀಗಾಗಿ ಜನತೆಯ ಸಹಭಾಗಿತ್ವ ಪಡೆದು ಮುನ್ನಡೆದಿದ್ದೇವೆ ಎಂದಿದ್ದಾರೆ.