‘ನೆಮ್ಮದಿ ಚಿಕಿತ್ಸಾ ರಂಗ 2021-22’ ಉದ್ಘಾಟಿಸಿದ ಪಾಲಿಕೆ ಮೇಯರ್
ದಾವಣಗೆರೆ,ಅ.6- ಕೋವಿಡ್-19ರ ಸಂಕಷ್ಟದ ಸಂದರ್ಭದಲ್ಲಿ ಪೌರ ಕಾರ್ಮಿಕರು ಆತ್ಮಸ್ಥೈರ್ಯದಿಂದ ಸಮಾಜಕ್ಕೆ ಸಲ್ಲಿಸಿದ ಸೇವೆ ಅನನ್ಯವಾದುದು ಎಂದು ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಪೌರ ಕಾರ್ಮಿಕರ ಸಮಾಜಸೇವಾ ಕಾರ್ಯವನ್ನು ಶ್ಲ್ಯಾಘಿಸಿದರು.
ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಹಾಗೂ ಮಹಾನಗರ ಪಾಲಿಕೆ ದಾವಣಗೆರೆ ಸಹಯೋಗದಲ್ಲಿ ನಗರದ ಆರ್.ಹೆಚ್. ಮಿನಿ ಛತ್ರದಲ್ಲಿ ಕೊರೊನಾ ಯೋಧರಿಗೆ `ನೆಮ್ಮದಿ ಚಿಕಿತ್ಸಾ ರಂಗ 2021-22′ ಮನೋರಂಜನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ಭೀತಿಯಿಂದ ಬಹುತೇಕ ಜನರು ಮನೆಯೊಳಗೆ ಇದ್ದರು. ಆದರೆ, ಯಾವುದೇ ಜೀವಭಯವಿಲ್ಲದೆ ಆತ್ಮಸ್ಥೈರ್ಯದಿಂದ ನಗರದ ಸ್ವಚ್ಛತೆ, ಜನಾರೋಗ್ಯದ ಜೊತೆ ಜನರ ರಕ್ಷಣೆಗೆ ನಿಂತವರು ಪೌರ ಕಾರ್ಮಿಕರು ಒತ್ತಡದ ನಡುವೆಯೂ ನಿತ್ಯ ಸೇವಾ ಕಾರ್ಯದಲ್ಲಿ ತೊಡಗಿದ್ದು, ಇಡೀ ಸಮಾಜ ನಿಮ್ಮೊಟ್ಟಿಗೆ ಇದೆ. ನಿಮ್ಮ ಈ ಸೇವಾ ಕಾರ್ಯ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.
ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಪೌರ ಕಾರ್ಮಿಕರ ಪಾದಪೂಜೆ ಮಾಡುವ ಮೂಲಕ ಅವರ ಶ್ರೇಷ್ಠ ಕಾರ್ಯಕ್ಕೆ ಅಭಿನಂದಿಸಿದ್ದಾರೆ. ದೇಶದಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮ ಯಶಸ್ವಿಯಾಗುತ್ತಿರುವುದೇ ನಿಮ್ಮಿಂದ ಎಂದ ವೀರೇಶ್ ಅವರು, ಕಾಯಕದ ಜೊತೆಗೆ ತಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೇವೆ ಇರಲಿ. ಅವರ ಸಮಸ್ಯೆಗಳು ಏನೇ ಇರಲಿ, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಮಾತನಾಡಿ, ಹುಟ್ಟಿದಾಗ ನೀಡುವ ಜನನ ಪ್ರಮಾಣ ಪತ್ರದಿಂದ ಹಿಡಿದು ಸತ್ತಾಗ ನೀಡುವ ಮರಣ ಪ್ರಮಾಣ ಪತ್ರ ವಿತರಣೆ, ನಗರ ಸ್ವಚ್ಛತೆ, ಜನರ ಆರೋಗ್ಯ, ಪರಿಸರ ಸಂರಕ್ಷಣೆ ಸೇರಿದಂತೆ ಇಡೀ ನಗರಾಭಿವೃದ್ಧಿಗಾಗಿ ಪಾಲಿಕೆ ಆಡಳಿತ ಕಾರ್ಯೋನ್ಮುಖವಾಗಿದೆ ಎಂದರು.
ಪಾಲಿಕೆ ಆಡಳಿತದೊಂದಿಗೆ ಪೌರ ಕಾರ್ಮಿಕರು ಸಲ್ಲಿಸುತ್ತಿರುವ ಸೇವೆ ಕೂಡ ಅಮೋಘವಾದುದು. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲೂ ಸಹ ನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ, ಜನರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಕಿವಿ, ಮೂಗು, ಗಂಟಲು ರೋಗ ತಜ್ಞ ಡಾ. ಎ.ಎಂ. ಶಿವಕುಮಾರ್ ಪೌರ ಕಾರ್ಮಿಕರ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ರಾಯಭಾರಿಗಳೂ, ಕಲಾವಿದರೂ ಆದ ಆರ್.ಟಿ. ಅರುಣ್ ಕುಮಾರ್ ಅವರು, ತಮ್ಮ ಹಾಸ್ಯ ಪ್ರತಿಭೆಯನ್ನು ಹೊರ ಸೂಸುವ ಮೂಲಕ ಸಭಿಕರನ್ನು ರಂಜಿಸಿದರು.
ಸಹಾಯಕ ನಿರ್ದೇಶಕ ಡಾ. ಸಂತೋಷ್, ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಹೆಚ್. ಅರಳಗುಪ್ಪಿ, ರಂಗ ನಿರ್ದೇಶಕ ಎಸ್.ಎಸ್. ಸಿದ್ಧರಾಜು ಹಾಗೂ ಪಾಲಿಕೆ ಸಿಬ್ಬಂದಿ ಹಾಜರಿದ್ದರು.
ಇದೇ ವೇಳೆ ಆಯ್ದ ಪೌರ ಕಾರ್ಮಿಕರಿಗೆ ಸ್ವಚ್ಛ ಭಾರತ ಮಿಷನ್ ನಿಂದ ಗೌರವ ಪ್ರಮಾಣ ಪತ್ರವನ್ನು ನೀಡಲಾಯಿತು.
ವೇದಿಕೆ ಕಾರ್ಯಕ್ರಮದ ನಂತರ ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ, ರಾಜಕೀಯ ವಸ್ತುಸ್ಥಿತಿ ಬಿಂಬಿಸುವ ವರಕವಿ ದ.ರಾ. ಬೇಂದ್ರ ವಿರಚಿತ `ಸಾಯೋ ಆಟ’ ಹಾಸ್ಯ ಪ್ರಧಾನ ನಾಟಕವನ್ನು ರಂಗಕರ್ಮಿ ಎಸ್.ಎಸ್. ಸಿದ್ಧರಾಜು ಮತ್ತು ತಂಡದವರು ಮನೋಜ್ಞವಾಗಿ ಪ್ರದರ್ಶಿಸಿದರು.