ಶೈಕ್ಷಣಿಕ ಮುನ್ನುಡಿಯೇ ಉದ್ಯೋಗದ ಯಶಸ್ಸು…

ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳ ಗುರಿ ಏನಾಗಿದೆಯೆಂದರೆ ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಗಳಿಸುವುದು. ಈ ಒಳ್ಳೆಯ ಶಿಕ್ಷಣ ಮತ್ತು ಉತ್ತಮ  ಉದ್ಯೋಗವು ವಿದ್ಯಾರ್ಥಿಯ ಜೀವನದಲ್ಲಿ ಆತನಿಗಿರುವ ಗುರಿ, ಆಸಕ್ತಿ, ಪ್ರಯತ್ನ ಹಾಗೂ ಆತನ ಸಮರ್ಪಣಾ ಮನೋಭಾವಗಳ ಮೇಲೆ ನಿರ್ಧಾರವಾಗುತ್ತದೆ.  ವಿದ್ಯಾರ್ಥಿಗಳು ತಾನು ಮುಂದೇನಾಗಬೇಕು ಯಾವ ಉದ್ಯಮ ಆರಂಭಿಸಬೇಕೆಂದು ಆರಂಭದಲ್ಲಿ ನಿರ್ಧಾರ  ಮಾಡಿಕೊಂಡರೆ ಅದೇ ನಿಟ್ಟಿನಲ್ಲಿ ಶಿಕ್ಷಣ ಮತ್ತು ಕೌಶಲ್ಯಗಳ ತರಬೇತಿಗಳನ್ನು ಪಡೆದುಕೊಳ್ಳುವುದಕ್ಕೆ ಉತ್ತಮವಾದ ದಾರಿಯಾಗುತ್ತದೆ.

ಎಳೆಯ ವಯಸ್ಸಿನ ವಿದ್ಯಾರ್ಥಿಗಳು ಪ್ರೌಢಶಾಲಾ ಮಟ್ಟದಲ್ಲಿ ಓದುತ್ತಿರುವಾಗಲೇ ಪೋಷಕರ ಸಹಾಯದಿಂದ ಮುಂದಿನ ಜೀವನದ ಮುನ್ನೋಟಗಳನ್ನು ತಯಾರಿಸಿಕೊಳ್ಳಬಹುದು. ಉದಾಹರಣೆಗೆ ಒಬ್ಬ ವಿದ್ಯಾರ್ಥಿಯು ತಾನು ರೈಲ್ವೇ ಇಲಾಖೆಯಲ್ಲಿ ಲೋಕೋಪೈಲಟ್ / ರೈಲ್ವೇ ಚಾಲಕ  ಆಗುವ ಗುರಿಯನ್ನು ಹೊಂದಿದ್ದರೆ, ಅದಕ್ಕೆ ತಕ್ಕಂತೆ ಪ್ರಯತ್ನ ಪಡಬೇಕಾಗುತ್ತದೆ. ಇದು ಪಠ್ಯಕ್ರಮವನ್ನು ಅನುಸರಿಸದಿದ್ದರೂ, ದೈಹಿಕವಾಗಿ ಅದಕ್ಕೆ ಬೇಕಾದ ಎಲ್ಲಾ ಅರ್ಹತೆಗಳನ್ನು ಗಳಿಸಿಕೊಳ್ಳಲು ಸುಲಭವಾಗುತ್ತದೆ. ದೈಹಿಕ ಸಾಮರ್ಥ್ಯದ ಪರೀಕ್ಷೆಗಳಲ್ಲಿ ತೇರ್ಗಡೆಯಾದ ನಂತರ ಮುಂದಿನ ಹಂತಗಳಲ್ಲಿ ತೇರ್ಗಡೆಯಾಗುವುದು ಸುಲಭವಾಗುತ್ತದೆ. ಅದಕ್ಕಾಗಿ ಪ್ರೌಢಶಿಕ್ಷಣ ಅಥವಾ ಪ್ರಾಥಮಿಕ ಹಂತದಲ್ಲೇ ತಯಾರಿ ನಡೆಸುವುದು ಮುಖ್ಯವಾಗುತ್ತದೆ . ಆದ್ದರಿಂದ ಇಂತಹ ಗುರಿಗಳನ್ನು ಹೊಂದಿರುವ ವಿದ್ಯಾರ್ಥಿಗಳು ಶಾರೀರಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಹಾಗೆ ಪೊಲೀಸ್ ಕಾನ್‌ಸ್ಟೇಬಲ್, ಪಿಎಸ್‌ಐ ತರಹದ ಹುದ್ದೆಗಳ ಆಸೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಕೂಡ     ಈ ಹಂತದಿಂದಲೇ ಪ್ರಯತ್ನಪಟ್ಟರೆ ಮುಂದೊಂದು ದಿನ ಅದು ಸಾಕಾರವಾಗುತ್ತದೆ.

ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಪ್ರೌಢಶಿಕ್ಷಣ ಮುಗಿಸಿದ ನಂತರ ಪಿಯುಸಿ ವಿಭಾಗದ ಆಯ್ಕೆ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಬಹುತೇಕ ವಿದ್ಯಾರ್ಥಿಗಳು ತಮ್ಮ ಮುಂದಿನ ಉದ್ಯೋಗದ ಕ್ಷೇತ್ರ ಯಾವುದು ಎಂಬುದನ್ನು ನಿರ್ಧರಿಸುತ್ತಾರೆ. ಪಿಯುಸಿ ವಿಭಾಗದ ಆಯ್ಕೆ ನಿಮಗೆ ಆಸಕ್ತಿ ಇರುವ ವಿಷಯದಲ್ಲಿ ನಡೆಯಬೇಕೇ ಹೊರತು. ಕಲಾ ವಿಭಾಗ ಸುಲಭ ವಿಜ್ಞಾನ ಕಷ್ಟ, ವಾಣಿಜ್ಯ ವಿಭಾಗದಲ್ಲಿ ಎರಡನ್ನೂ ತೂಗಿಸಬಹುದು ಎಂಬ ನಂಬಿಕೆಯಿಂದ ಪಿಯುಸಿಯಲ್ಲಿ ವಿಷಯಗಳ ಆಯ್ಕೆಯನ್ನು ಮಾಡಬಾರದು. 

ನಿಮಗೆ ಗಣಿತ ವಿಷಯದಲ್ಲಿ ಸಾಕಷ್ಟು ಆಸಕ್ತಿ ಇದ್ದು ಉತ್ತಮ ಅಂಕಗಳನ್ನು ಪಡೆದಿದ್ದರೂ ಕೂಡ ಗಣಿತ ಎಂದರೆ ಕಷ್ಟ ಎನ್ನುವ ನಿಮ್ಮ ಸ್ನೇಹಿತರ ಮಾತುಗಳಿಂದ ನೀವು ಕಲಾ ವಿಷಯ ಅಥವಾ ವಾಣಿಜ್ಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಾರದು ಏಕೆಂದರೆ ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿದೆಯೇ ವಿನಃ ಸ್ನೇಹಿತರ ಅಥವಾ ಮತ್ತೊಬ್ಬರ ಕೈಯ್ಯಲ್ಲಿ ಇಲ್ಲ ಎನ್ನುವ ಜಾಣ್ಮೆ ನಿಮ್ಮಲ್ಲಿರಬೇಕು.  ಔದ್ಯೋಗಿಕ ಯಶಸ್ಸು ಆಸಕ್ತಿಯ ವಿಷಯದ ಆಯ್ಕೆ ಮತ್ತು ಪ್ರಯತ್ನದ ಮೂಲಕ ಮಾತ್ರ ಸಾಧ್ಯ.

ಆದ್ದರಿಂದ ವಿದ್ಯಾರ್ಥಿಗಳು ವಿಷಯವನ್ನು ಆಯ್ಕೆ ಮಾಡುವ ಸಮಯದಲ್ಲಿ ಸೂಕ್ತ ಮಾರ್ಗದ೭ರ್ಶಕರ ಮಾರ್ಗದರ್ಶನವನ್ನು ಪಡೆದು ಅವರೊಡನೆ ಚರ್ಚೆ  ನಡೆಸಿ, ಯಾವುದೇ ಒತ್ತಡಕ್ಕೆ ಒಳಗಾಗದೆ ಮುಕ್ತವಾಗಿ ನಿಮ್ಮಿಷ್ಟದ ಮುಂದಿನ ಭವಿಷ್ಯದ ದೃಷ್ಟಿಯಿಂದ ಯೋಚನೆ ಮಾಡಿ ವಿಷಯಗಳ ಆಯ್ಕೆಯನ್ನು ಮಾಡಿಕೊಂಡರೆ ಉತ್ತಮ ಅಂಕ ಗಳಿಸಲು ಸಾಧ್ಯ. ಹಾಗೆ ಉತ್ತಮ ಅಂಕಗಳಿಂದ ನಿಮ್ಮ ಭವಿಷ್ಯದ ಉದ್ಯೋಗ ನಿಮ್ಮದಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇನ್ನೂ ಪದವಿ ವ್ಯಾಸಂಗಕ್ಕೆ ಬಂದರೆ ಪದವಿ ವಿದ್ಯಾರ್ಥಿಗಳು ಸೆಮಿಸ್ಟರ್ ಅಂಕಗಳ ಮೇಲೆ ಹೆಚ್ಚು ಗಮನ ಹರಿಸುವುದು ಮುಖ್ಯ. ಇತ್ತೀಚೆಗೆ ಬಹುತೇಕ ಬಹುರಾಷ್ಟ್ರೀಯ ಕಂಪೆನಿಗಳು ಅಷ್ಟೇ ಏಕೆ ಸರ್ಕಾರಿ ಉದ್ಯೋಗದಲ್ಲಿ ಕೂಡ ಅಂಕಗಳನ್ನು ಮಾನದಂಡವಾಗಿ ಬಳಸುತ್ತಿದ್ದಾರೆ. ಹೆಚ್ಚು ಆಕಾಂಕ್ಷಿಗಳಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಕಡಿಮೆಗೊಳಿಸಲು ಅಂಕಗಳನ್ನು ಮಾನದಂಡವಾಗಿ ಬಳಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಹಾಗಾಗಿ ಪದವಿ ವಿದ್ಯಾರ್ಥಿಗಳು ಪದವಿಯಲ್ಲಿ ಹೆಚ್ಚು ಅಂಕ ಗಳಿಸುವುದರ ಕಡೆಗೆ ಯೋಚಿಸುವುದು ಸೂಕ್ತ. ಪದವಿಯ ನಂತರ ವಿದ್ಯಾರ್ಥಿಗಳಿಗೆ ಇರುವ ಆಯ್ಕೆಗಳು ಸಾಕಷ್ಟು. ಸೂಕ್ತವಾದ ಆಯ್ಕೆ ಮಾಡಿಕೊಂಡು ನಿರ್ದಿಷ್ಟವಾದ ಉದ್ಯೋಗವನ್ನು ಹೊಂದುವುದು ಬಹುಮುಖ್ಯ. ಪದವಿಯಲ್ಲಿ ವೃತ್ತಿಪರ ತರಬೇತಿ ಹೊಂದಿರುವವರು ಕ್ಯಾಂಪಸ್ ಆಯ್ಕೆ  ಆಗದೆ ಹೋದರೆ ಸಣ್ಣ ಅಥವಾ ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ಕೆಲಸ ಆರಂಭಿಸಿ, ಅನುಭವ ಪಡೆದುಕೊಳ್ಳಿ. ನಂತರ ನಿಮ್ಮದೇ ಆದ ಸ್ವಂತ ಉದ್ಯಮವನ್ನು ಆರಂಭಿಸುವುದು ಸೂಕ್ತ. 

ಪದವಿ ನಂತರ ಒಂದಿಷ್ಟು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆಯುವಲ್ಲಿ ಮುಂದಾಗುತ್ತಾರೆ, ಇದು ಒಳ್ಳೆಯ ನಿರ್ಧಾರ. ಇದರಿಂದ ಅವರಿಗೆ ಅವರು ಬಯಸಿದ ಉದ್ಯೋಗ  ಪಡೆಯಲು ಅನುಕೂಲವಾಗುತ್ತದೆ.

ಇನ್ನೂ ಸಾರ್ವಜನಿಕ ಸೇವೆಯ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ತಮ್ಮ ಪದವಿಯ ಅಂತಿಮ ಸೆಮಿಸ್ಟರ್‌ನ ಹಂತದಲ್ಲೇ ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿಕೊಳ್ಳಬೇಕು ಸಂಬಂಧಿಸಿದ ಅಧ್ಯಯನ ಸಾಮಗ್ರಿಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿಕೊಂಡು ಅವುಗಳನ್ನು ಜೋಡಿಸಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ನಿಮ್ಮ ಮೇಲೆ ನೀವು ನಂಬಿಕೆ ಇಟ್ಟು ಸ್ವಯಂ ಅಧ್ಯಯನದಿಂದ ನಾನು ಸಿವಿಲ್ ಸೇವೆ ಪರೀಕ್ಷೆಗಳನ್ನು ತೇರ್ಗಡೆ ಹೊಂದುತ್ತೇನೆ ಎಂಬ ನಂಬಿಕೆ ನಿಮ್ಮಲ್ಲಿದ್ದರೆ ಯಾವುದೇ ತರಬೇತಿಯ ಅವಶ್ಯಕತೆ ಇರುವುದಿಲ್ಲ.  ಆದರೂ  ಕೆಲವೊಂದು ವಿಷಯಕ್ಕೆ ಸಂಬಂಧಪಟ್ಟಂತೆ ತರಬೇತಿಯ ಅವಶ್ಯಕತೆ ಇದ್ದಲ್ಲಿ, ನೀವು ಸಮೀಪದ ತರಬೇತಿ ಸಂಸ್ಥೆಗಳ ಮೂಲಕ ತರಬೇತಿ ಪಡೆದುಕೊಂಡು ನಿಮ್ಮ ಕನಸಿನ  ಉದ್ಯೋಗವನ್ನು ಪಡೆದುಕೊಳ್ಳಬಹುದು.  ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರತಿ ವರ್ಷ ಪ್ರೊಬೇಷನರಿ ಅಧಿಕಾರಿ, ಸಹಾಯಕರು, ವಿಶೇಷಾಧಿಕಾರಿಗಳು ಹೀಗೆ ಹಲವಾರು ಹುದ್ದೆಗಳ ನೇಮಕಾತಿ ನಡೆಯುತ್ತಿರುತ್ತದೆ. ಇವುಗಳಿಗೆ ಸತತವಾಗಿ ಅರ್ಜಿಗಳನ್ನು ಸಲ್ಲಿಸಿ ಪರೀಕ್ಷೆಗಳನ್ನು ಬರೆಯುತ್ತಿದ್ದರೆ ಮುಂದೊಂದು ದಿನ ಫಲಿತಾಂಶ ನಿಮ್ಮದಾಗುತ್ತದೆ. ಹಾಗಾಗಿ ಯಾವುದೇ ಮುಜುಗರವಿಲ್ಲದೆ ಪ್ರಯತ್ನಗಳ ನಂತರ ಸುಮ್ಮನಿರದೆ ಸತತ ಪ್ರಯತ್ನ ಪಟ್ಟರೆ ನೀವು ಸರ್ಕಾರಿ ಸೇವೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಬಹುದು. ವಿದ್ಯಾರ್ಥಿಗಳು ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು  ಅದಕ್ಕೆ ಇರುವ ಪಠ್ಯ ಕ್ರಮಗಳು ಹಾಗೂ ತಮ್ಮಲ್ಲಿರುವ ಸಾಮರ್ಥ್ಯದ ಬಗ್ಗೆ ಅರಿತುಕೊಂಡು ಅರ್ಜಿ ಸಲ್ಲಿಸಿ, ಅದಕ್ಕೆ ತಕ್ಕಂತೆ ಪರಿಶ್ರಮ ಪಟ್ಟರೆ ಉದ್ಯೋಗ ನಿಮ್ಮದಾಗಬಹುದು.

ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಉದ್ಯೋಗದ ಯಶಸ್ಸಿನ ಮುನ್ನೋಟ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವಾಗಲೇ ತಾವು ಏನಾಗಬೇಕು ಎಂಬುದನ್ನು ಅರಿತುಕೊಂಡು ಗುರಿ ನಿರ್ಧರಿಸಿಕೊಂಡರೆ ಅದಕ್ಕೆ ತಕ್ಕಂತೆ ಶಿಕ್ಷಣದಲ್ಲಿ ಮಾರ್ಪಾಡು ಮಾಡುತ್ತಾ ಶಿಕ್ಷಣವನ್ನು ಪಡೆಯಬಹುದು. ಆಗ ನೀವು ಮುಂದೆ ಮಾಡಬಹುದಾದ ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಇದರಿಂದ ಸಮಾಜದಲ್ಲಿ ನೀವು ಗೌರವಯುತವಾಗಿ ಬಾಳಲು ಸಾಧ್ಯ. ಪ್ರತಿಯೊಂದಕ್ಕೂ ಶಿಕ್ಷಣದ ಅವಶ್ಯಕತೆ ತುಂಬಾ ಇದೆ.

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಹೇಳುವಂತೆ  “ನಿಮ್ಮ ಹಣೆಬರಹದ ಸೃಷ್ಟಿಕರ್ತರು ನೀವೇ”  ಎಂಬ ಮಾತನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಮನಸ್ಸಿನಲ್ಲಿ ಇಟ್ಟುಕೊಂಡು   ಶಿಕ್ಷಣವನ್ನು ಪಡೆದರೆ, ಮುಂದಿನ ಅವರ ಹಣೆಬರಹ ಅವರು ಬಯಸಿದಂತಾಗುತ್ತದೆ.


ವೆಂಕಟೇಶ್ ಬಾಬು ಎಸ್.
ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ .
[email protected]

error: Content is protected !!