ದಾವಣಗೆರೆ, ಮೇ 8- ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕೋವಿಡ್-19 ವೈರಸ್ ಸೋಂಕಿನ ವಿರುದ್ಧ ಹಗಲಿರುಳೆನ್ನದೆ ಹೋರಾಡುತ್ತಿರುವ ಜಿಲ್ಲಾ ವೈದ್ಯರು, ನರ್ಸ್ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ವತಿಯಿಂದ ಹೂ ಮಳೆ ಸುರಿಸಿ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತಾ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಗೌರವ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸುಮಾರು ಎರಡು ತಿಂಗಳಿನಿಂದ ಹಗಲು ರಾತ್ರಿ ಎಂದು ಲೆಕ್ಕಿಸದೆ ಕೆಲಸ ಮಾಡುತ್ತಿರುವವರಿಗೆ ಬಲ ಹಾಗೂ ಚೈತನ್ಯ ತುಂಬಲು ಈ ಗೌರವ ಹಮ್ಮಿಕೊಳ್ಳ ಲಾಗಿದೆ ಎಂದರು.
ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಕರ್ತವ್ಯ ಗಳನ್ನು ತುಂಬಾ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ನಿರ್ವಹಿಸತ್ತಿದ್ದಾರೆ ಎಂದು ಪ್ರಶಂಸಿಸಿದ ಅವರು, ಎಂತಹ ಪರಿಸ್ಥಿತಿ ಬಂದರೂ ನಾವು ನಿಭಾಯಿಸುತ್ತೇವೆ. ನಾವು ನಿಮ್ಮ ಜೊತೆಗಿದ್ದೇವೆ. ಯಾರೂ ಧೃತಿಗೆಡಬಾರದು ಎಂದು ಆರೋಗ್ಯ ಅಧಿಕಾರಿಗಳಿಗೆ ಹುರಿದುಂಬಿಸಿದರು.
ಮೇಯರ್ ಬಿ.ಜಿ.ಅಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿನ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗದುಕೊಂಡು ಪ್ರತಿದಿನ ಸಭೆ ನಡೆಸುವ ಮೂಲಕ ಒಂದು ಹಂತದಲ್ಲಿ ಜಿಲ್ಲೆಯಲ್ಲಿ ಕೊರೊನಾ ಓಡಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಮತ್ತೆ ಯಾವುದೋ ಸಂದರ್ಭದಲ್ಲಿ ಎಡವಲಾಯಿತೋ ಅಥವಾ ನಮ್ಮ ಅದೃಷ್ಟ ಹಿಂದೆ ಸರಿಯಿತೋ ಗೊತ್ತಿಲ್ಲ. ಕೊರೊನಾ ಮತ್ತೆ ಬಂದಿದೆ. ಇದೊಂದು ಯುದ್ದವಾಗಿದ್ದು, ಎದುರಿಸಲು ಸನ್ನದ್ಧರಾಗಿದ್ದೇವೆ ಎಂದರು.
ಮಹಾಭಾರತ ನಡೆದಂತಹ ಕಾಲದಲ್ಲಿ ಕೌರವರನ್ನು ಸಂಹಾರ ಮಾಡಲು ಕೃಷ್ಣ ಸಾರಥಿಯಾಗಿ ಬಂದಂತೆ ಇಂದು ದೇಶದಲ್ಲಿ ಕೊರೊನಾ ವೈರಸ್ ಓಡಿಸಲು ವೈದ್ಯರು, ನರ್ಸ್ಗಳು, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸಾರಥಿಯಾಗಿದ್ದಾರೆ. ಇದೊಂದು ಸವಾಲಾಗಿ ಸ್ವೀಕರಿಸಿ ಕೊರೊನಾ ಮುಕ್ತಗೊಳಿಸುವ ಮೂಲಕ ದಾವಣಗೆರೆ ಮಾದರಿ ಜಿಲ್ಲೆಯಾಗಿಸೋಣ. ಜಿಲ್ಲಾಡಳಿತದ ಜೊತೆಗೆ ಮಹಾನಗರಪಾಲಿಕೆ ಕೂಡ ನಿಮ್ಮೊಂದಿಗೆ ಸದಾ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೈದ್ಯರ ಸ್ಟೆಫಂಡ್ ಬಂದಿಲ್ಲ ಎಂಬುದರ ಬಗ್ಗೆ ಮಾಹಿತಿ ಬಂದಿದೆ. ಜೊತೆಗೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಸರಿಯಾದ ಊಟ ಸಿಗುತ್ತಿಲ್ಲ ಹಾಗೂ ವಿಶ್ರಾಂತಿಗಾಗಿ ಗುಂಡಿ ಕಲ್ಯಾಣ ಮಂಟಪ ವ್ಯವಸ್ಥೆ ಮಾಡಿಸುವ ಕುರಿತು ಕೇಳಿಕೊಂಡಿದ್ದಾರೆ. ಈ ಬಗ್ಗೆ ಕೂಡಲೇ ಜಿಲ್ಲಾಡಳಿತದೊಂದಿಗೆ ಸೇರಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಎಎಸ್ಪಿ ರಾಜೀವ್ ಮಾತನಾಡಿ, ಇದೊಂದು ಯುದ್ದದ ಸಂದರ್ಭವಾಗಿದೆ. ಇದಕ್ಕೆ ಸನ್ನದ್ಧರಾಗೋಣ. ಇದಕ್ಕಾಗಿ ಜಿಲ್ಲೆಯ ನಾಗರಿಕರು ಸಹಕರಿಸಬೇಕು. ಕೊರೊನಾ ಬಂದಾಗ ನೋಡೊಣಾ ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ ಇದೊಂದು ಕಣ್ಣಿಗೆ ಕಾಣಲಾರದ ವೈರಸ್. ಹಾಗಾಗಿ ನಮ್ಮ ರಕ್ಷಣೆಯಲ್ಲಿ ನಾವಿರಬೇಕು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗರಾಜ ಮಾತನಾಡಿ, ಚೈತನ್ಯ ತುಂಬಲು ಗೌರವ ಸಲ್ಲಿಸಿದ್ದಾರೆ. ಇದಕ್ಕೆ ತುಂಬಾ ಅಭಿನಂದನೆ ಸಲ್ಲಿಸುತ್ತೇವೆ. ನಮಗೆ ಎಲ್ಲ ರೀತಿಯ ಬೆಂಬಲ ನೀಡುತ್ತಾ ಹೋದರೆ ಖಂಡಿತವಾಗಿಯೂ ಕೂಡ ಮಹಾಮಾರಿ ಕೊರೊನಾ ಹಿಮ್ಮೆಟ್ಟಿಸುವ ವಿಶ್ವಾಸ ನಮ್ಮಲಿದೆ. ಇಷ್ಟು ದಿನ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಯಾವಾಗಲೂ ನಮ್ಮ ಜೊತೆಯಲ್ಲಿ ಇದ್ದು, ಪ್ರೋತ್ಸಾಹ ನೀಡಿದ್ದೀರ. ಅದೇ ರೀತಿ ಇನ್ನೂ ಹೆಚ್ಚಿನ ಬೆಂಬಲ ನಮಗೆ ನೀಡಬೇಕು ಎಂದು ಮನವಿ ಮಾಡಿದರು.