ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ನೆರವು

ದಾವಣಗೆರೆ, ಜು. 11- ಕೋವಿಡ್ ಲಾಕ್‍ಡೌನ್ ಪರಿಣಾಮವಾಗಿ ಆರ್ಥಿಕವಾಗಿ ನಷ್ಟ ಅನುಭವಿಸಿದ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರವು ಅವರ ಖಾತೆಗೆ ನೇರವಾಗಿ 2 ಸಾವಿರ ರೂ. ಜಮಾ ಮಾಡಲಾಗುತ್ತಿದೆ. ಕಾರ್ಮಿಕರು ಇದೇ ದಿನಾಂಕ 31ರ ಒಳಗಾಗಿ ಆನ್‍ಲೈನ್‍ನಲ್ಲಿ ಸೇವಾಸಿಂಧು ಪೋರ್ಟಲ್‍ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು  ಎಂದು ಸಂಸದ ಜಿ.ಎಂ ಸಿದ್ದೇಶ್ವರ ತಿಳಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿಯಲ್ಲಿ ನೋಂದಾಯಿಸಿರುವ ಕಟ್ಟಡ ಕಾರ್ಮಿಕರಿಗೆ ಮಂಡಳಿಯಿಂದ ಮೊನ್ನೆ ಆಯೋಜಿ ಸಲಾಗಿದ್ದ ಫುಡ್‍ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 1 ಲಕ್ಷ ಕಾರ್ಮಿಕರಿದ್ದು, ಇದುವರೆಗೆ 67,538 ಜನರಿಗೆ ಅವರ ಖಾತೆಗೆ ನೇರವಾಗಿ  2 ಸಾವಿರ ರೂ. ಜಮಾ ಮಾಡಲಾಗಿದೆ. ಉಳಿದವರಿಗೆ 10 ದಿನದ ಒಳಗಾಗಿ ಹಣ ಜಮಾ ಮಾಡಲಾಗುವುದು. ಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಾಗುವ ಹಿತದೃಷ್ಟಿಯಿಂದ 900 ರೂ. ಮೊತ್ತದ ಆಹಾರ ಪದಾರ್ಥಗಳನ್ನು ಕಾರ್ಮಿಕ ಕಾರ್ಡ್ ಇದ್ದವರಿಗೆ ಮಾತ್ರ ವಿತರಣೆ ಮಾಡಲಾಗುತ್ತಿದೆ ಎಂದರು.

ಶಾಸಕ ಪ್ರೊ.ಲಿಂಗಣ್ಣ ಮಾತನಾಡಿ, ಕೋವಿಡ್ ಸಂಕಷ್ಟ ಸಮಯದಲ್ಲಿ ಕಾರ್ಮಿಕರು ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂದು ಸರ್ಕಾರವು ಆಹಾರ ಧಾನ್ಯಗಳ ಕಿಟ್‍ಗಳನ್ನು ಕಟ್ಟಡ ಕಾರ್ಮಿಕರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು. 

ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ, ಕಾರ್ಮಿಕ ಕಲ್ಯಾಣ ಮಂಡಳಿಯ ಅಧ್ಯಕ್ಷ ಸಾಂಗ್ಲಿ ದೇವೆಂದ್ರಪ್ಪ, ಕಾರ್ಮಿಕರು ಉಪಸ್ಥಿತರಿದ್ದರು.

error: Content is protected !!