ಹರಿಹರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸಹಿ ಸಂಗ್ರಹ ಅಭಿಯಾನದಲ್ಲಿ ಶಾಸಕ ಎಸ್. ರಾಮಪ್ಪ
ಮಲೇಬೆನ್ನೂರು, ಜು.11- ಸಂಸದ ಜಿ.ಎಂ. ಸಿದ್ದೇಶ್ವರ ಅವರು ದಾವಣಗೆರೆ ನಗರಕ್ಕೆ ಮಾತ್ರ ಸೀಮಿತವಾಗಬಾರದು, ಹರಿಹರದ ಅಭಿವೃದ್ಧಿಗೂ ಗಮನ ಹರಿಸಬೇಕು ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ಪಟ್ಟಣದ ಮುಖ್ಯ ವೃತ್ತದಲ್ಲಿ ಹರಿಹರ ನಗರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವಂತೆ ಒತ್ತಾಯಿಸಿ ಇಂದು ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಾವಣಗೆರೆಯಲ್ಲಿ ಈಗಾಗಲೇ 2 ಮೆಡಿಕಲ್ ಕಾಲೇಜುಗಳು ಇವೆ. ಹರಿಹರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡುವಂತೆ ಹೋರಾಟ ನಡೆಯುತ್ತಿರುವ ಈ ಸಂದರ್ಭದಲ್ಲಿ ನೀವು ದಾವಣಗೆರೆಯಲ್ಲೇ ಮೆಡಿಕಲ್ ಪ್ರಾರಂಭಿಸುವುದಾಗಿ ಹೇಳಿಕೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಸಂಸದರನ್ನು ಶಾಸಕ ರಾಮಪ್ಪ ಪ್ರಶ್ನಿಸಿದರು.
ಹರಿಹರ ನಗರದ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿ 20 ಎಕರೆ ಜಾಗ ಇದ್ದು, ಇಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಿದರೆ ಆಸ್ಪತ್ರೆಯು ಅಭಿವೃದ್ಧಿ ಹೊಂದುತ್ತದೆ. ಜೊತೆಗೆ ಹರಿಹರ ತಾಲ್ಲೂಕಿನ ಅಭಿವೃದ್ಧಿಗೂ ನೆರವಾಗಲಿದೆ ಎಂದ ಶಾಸಕರು, ನೀವು ಹರಿಹರ ಆಸ್ಪತ್ರೆಗೆ ಆಮ್ಲಜನಕ ಉತ್ಪಾದನಾ ಘಟಕ ನೀಡಿರುವುದಕ್ಕೆ ನಾವು ನಿಮ್ಮನ್ನು ಅಭಿನಂದಿಸುತ್ತೇವೆ. ಆದರೆ ಮೆಡಿಕಲ್ ಕಾಲೇಜನ್ನು ನೀವು ಹರಿಹರಕ್ಕೆ ಬಿಟ್ಟು ದಾವಣಗೆರೆಗೆ ಮಂಜೂರು ಮಾಡಿಸಿದರೆ ನಿಮ್ಮ ವಿರುದ್ಧ ತಾಲ್ಲೂಕಿನ ಜನರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶೀಘ್ರದಲ್ಲೇ ತಾಲ್ಲೂಕಿನ ಮಠಾಧೀಶರ ನೇತೃತ್ವದಲ್ಲಿ ಸರ್ವ ಪಕ್ಷ ನಿಯೋಗ ಸಿಎಂ ಭೇಟಿ ಮಾಡುವುದಾಗಿ ರಾಮಪ್ಪ ತಿಳಿಸಿದರು.
ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಕೂಡಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ, ಹರಿಹರದ ಅಭಿವೃದ್ಧಿ ದೃಷ್ಟಿಯಿಂದ ಜನರ ಭಾವನೆಗಳಿಗೆ ದಕ್ಕೆ ಉಂಟುಮಾಡಬೇಡಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಕಿವಿಮಾತು ಹೇಳಿದರು.
ಅಭಿವೃದ್ಧಿ ಕೇಂದ್ರೀಕೃತವಾಗದೆ ಹಂಚಿಕೆ ಆಗಬೇಕು. ನೀವು ಕೇವಲ ದಾವಣಗೆರೆಗೆ ಸೀಮಿತವಲ್ಲ, 8 ಕ್ಷೇತ್ರಗಳ ಅಭಿವೃದ್ಧಿಗೂ ಒತ್ತು ನೀಡಬೇಕು. ದಾವಣಗೆರೆ ನಂತರ ಹರಿಹರ ಬೆಳೆಯುತ್ತಿರುವ ನಗರವಾಗಿದ್ದು, ಅದಕ್ಕೆ ನೀವು ಕೈ ಜೋಡಿಸಬೇಕು. ತಾಲ್ಲೂಕಿನ ಜನರ ಅಪೇಕ್ಷೆಯಂತೆ ಸರ್ಕಾರಿ ಮೆಡಿಕಲ್ ಕಾಲೇಜನ್ನು ಹರಿಹರಕ್ಕೆ ಮಂಜೂರು ಮಾಡಿಸಲು ಗಮನ ಹರಿಸಿ ಎಂದು ಸಂಸದರಿಗೆ ಕಿವಿಮಾತು ಹೇಳಿದರು.
ಕೇವಲ ಟೀಕೆಗಾಗಿ ಟೀಕೆ ಮಾಡಲ್ಲ. ನೀವು ಮಾಡುವ ಒಳ್ಳೆಯ ಕೆಲಸಗಳನ್ನೂ ಸ್ವಾಗತಿಸುತ್ತೇವೆ. ಹರಿಹರಕ್ಕೆ ತಮ್ಮ ತಂದೆ-ತಾಯಿ ಸ್ಮರಣಾರ್ಥ ಸಂಸದರು ಆಮ್ಲಜನಕ ಘಟಕ ನೀಡಿರುವುದಕ್ಕೆ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆಂದು ಶಿವಶಂಕರ್ ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಮಲೇಬೆನ್ನೂರು ಶಾಖೆ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್ ಅವರು ಮಾತನಾಡಿ, ವೈದ್ಯಕೀಯ ವ್ಯವಸ್ಥೆಯಲ್ಲಿ ದಾವಣಗೆರೆ ನಗರ ಸಾಕಷ್ಟು ಮುಂದಿದೆ. ಹರಿಹರ ನಗರಕ್ಕೆ ಅದೇ ರೀತಿ ಸೌಲಭ್ಯ ಕಲ್ಪಿಸಿ ಎಂದು ಮನವಿ ಮಾಡಿದರು.
1976 ರಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಪ್ರಾರಂಭಿಸುವಂತೆ ಪ್ರತಿಭಟನೆ ಮಾಡಿ 2 ದಿನ ಜೈಲಿನಲ್ಲಿದ್ದೆವು. ಸರ್ಕಾರ ಈಗಲಾದರೂ ಎಲ್ಲಾ ಜಿಲ್ಲೆಗಳಿಗೆ ಸರ್ಕಾರಿ ಕಾಲೇಜ್ ನೀಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಚಂದ್ರಶೇಖರ್ ಹೇಳಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿ, ಈ ಹೋರಾಟಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.ಉದ್ಯಮಿ ವೈ. ವಿರೂಪಾಕ್ಷಪ್ಪ, ಕನ್ನಡ ಸಂಘದ ಜ್ಯೋತಿ ನಾಗಭೂಷಣ್ ಮಾತನಾಡಿದರು.
ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ನಂದಿಗಾವಿ ಶ್ರೀನಿವಾಸ್, ಹರಿಹರ ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ತಾ.ಪಂ. ಮಾಜಿ ಅಧ್ಯಕ್ಷ ಎಂ.ಬಿ. ರೋಷನ್, ಎಸ್.ಜಿ. ಪರಮೇಶ್ವರಪ್ಪ, ಆದಾಪುರದ ವೀರಭದ್ರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ತಾ. ಜೆಡಿಎಸ್ ಮಾಜಿ ಅಧ್ಯಕ್ಷ ಬಂಡೇರ ತಿಮ್ಮಣ್ಣ, ಮುಖಂಡರಾದ ತಳಸದ ರೇವಣಪ್ಪ, ಎಂ. ಕರಿಬಸಯ್ಯ, ಬಿ.ವೀರಯ್ಯ, ತಳಸದ ಬಸವರಾಜ್, ಕುಂಬಳೂರಿನ ಶಂಕರಗೌಡ, ಮಾಗಾನಹಳ್ಳಿ ವಾಸು, ಕೆ.ಪಿ. ಗಂಗಾಧರ್, ಎ. ಆರೀಫ್ ಅಲಿ, ಸೈಯದ್ ಜಾಕೀರ್, ಎಂ.ಬಿ. ಫೈಜು, ದಾದಾವಲಿ, ಭೋವಿಕುಮಾರ್, ಪಿ.ಎಸ್. ನಿಜಲಿಂಗಪ್ಪ, ರಾಮರೆಡ್ಡಿ, ಶಿಕ್ಷಕ ದಂಡಿ ತಿಪ್ಪೇಸ್ವಾಮಿ, ನಂದಿತಾವರೆಯ ಬಿ.ಟಿ. ಬಸವರಾಜ್, ಕೊಮಾರನಹಳ್ಳಿಯ ಎಂ.ಆರ್. ಬಸವರಾಜ್, ಪಿ.ಎಸ್. ಶಿವು, ಪಿ.ಆರ್. ಕುಮಾರ್, ಯೂನೂಸ್, ಗಜೇಂದ್ರಸ್ವಾಮಿ, ಫಾಜಿಲ್, ಅಕ್ಬರ್ ಅಲಿ, ಹಾಲಿವಾಣದ ರೇವಣಸಿದ್ದಪ್ಪ, ಬಿಜೆಪಿಯ ಐರಣಿ ಅಣ್ಣಪ್ಪ, ಸುಬ್ಬಿ ರಾಜಪ್ಪ, ಬಿ. ಸುರೇಶ್, ಬಿ. ಮಂಜುನಾಥ್, ಪಿ.ಆರ್. ರಾಜು, ಜಿ.ಪಿ. ಹನುಮಗೌಡ, ಕುಂಬಳೂರು ನಿರಂಜನ್, ಕಜ್ಜರಿ ಹರೀಶ್, ಕೊಮಾರನಹಳ್ಳಿಯ ಸುನೀಲ್, ಜೆಡಿಎಸ್ನ ಎಂ.ಬಿ. ಗುಲ್ಜಾರ್, ಎಂ.ಆರ್. ಮಹಾದೇವಪ್ಪ, ಹೊಸಳ್ಳಿ ಕರಿಬಸಪ್ಪ, ಜಿಗಳಿಯ ಎಕ್ಕೆಗೊಂದಿ ರುದ್ರಗೌಡ, ಎಂ.ಪಿ. ಜಯಣ್ಣ, ಕೊಕ್ಕನೂರಿನ ಆಂಜನೇಯ ಪಾಟೀಲ್, ಮಧು, ಅಕ್ಬರ್, ನಾಸೀರ್, ಅಜ್ಜು, ನಂದಿಗಾವಿ ಶ್ರೀನಿವಾಸ್ ಬಳಗದ ದೊಡ್ಮನಿ ಬಸವರಾಜ್, ಹರಳಹಳ್ಳಿ ಮಂಜು, ಪ್ರಶಾಂತ್, ಹರಿಹರ ಮಂಜು, ಮುದೇನೂರು ಭರತ್, ಪತ್ರಕರ್ತರಾದ ನಟರಾಜನ್, ಸದಾನಂದ್, ಜಿಗಳಿ ಪ್ರಕಾಶ್ ಮತ್ತು ಇತರರು ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿದ್ದರು.