ರಮಾಬಾಯಿ ಅಂಬೇಡ್ಕರ್ ಜಯಂತಿ ಅಂಗವಾಗಿ ವಿಚಾರ ಸಂಕಿರಣದಲ್ಲಿ ಅರುಣ್ ಕುಮಾರ್ ಪ್ರತಿಪಾದನೆ
ದಾವಣಗೆರೆ, ಫೆ.17- ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕಿನ ಬೆಳವಣಿಗೆಗೆ ಅರ್ಥಪೂರ್ಣ ಕೊಡುಗೆ ನೀಡಿದ ಅವರ ಪತ್ನಿ ರಮಾಬಾಯಿ ಧೀಮಂತ ಮಹಿಳೆಯಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬ ಭಾರತೀಯ ಮಹಿಳೆಯರು ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್ ಕುಮಾರ್ ತಿಳಿಸಿದರು.
ಅವರು, ಇಂದು ನಗರದ ಎಸ್ಎಂ ಕೃಷ್ಣ ನಗರದ ಬಾಬು ಜಗಜೀವನರಾಂ ಭವನದಲ್ಲಿ ಸಂಜೀವಿನಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಂಸ್ಥೆ, ಸ್ಲಂ ಜನಾಂದೋಲನ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ರಮಾಬಾಯಿ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ ಅವರು ಬದುಕು ಕಳೆದುಕೊಂ ಡವರ ಮರು ಬದುಕಿಗಾಗಿ ನಿರಂತರ ಸಂಘರ್ಷ ಮಾಡಿದರು. ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳ ಬದುಕಿನ ಎಲ್ಲಾ ಸಾಧನೆಗಳಿಗೆ ರಮಾಬಾಯಿ ಅವರು ಬಹು ದೊಡ್ಡ ಶಕ್ತಿಯಾಗಿ ಬೆಂಬಲಕ್ಕೆ ನಿಂತಿದ್ದರು. ಯಶಸ್ವೀ ಹೋರಾಟದ ಹಿಂದೆ ಪತ್ನಿ ರಮಾಬಾಯಿ ಅಂಬೇಡ್ಕರ್ ಅವರ ಪಾತ್ರ ಹಿರಿದು. ತಮ್ಮ ಬದುಕಿನಲ್ಲಿ ಯಾವತ್ತು ಸುಖವನ್ನು ಬಯಸದೆ ಪರರ ಏಳಿಗೆ ಸುಖದಲ್ಲಿ ಸಂತೋಷದಲ್ಲಿ ಬದುಕು ಸವೆಸಿದರು ಎಂದು ಸ್ಮರಿಸಿದರು.
ಎಸ್.ಎಸ್.ಎಂ.ವಿ. ಶಿಕ್ಷಣ ಮಹಾವಿದ್ಯಾಲಯದ ಅನಿತಾ ದೊಡ್ಡಗೌಡರ್ ಮಾತನಾಡಿ, ತಮ್ಮ ಒಂಬತ್ತನೆ ವಯಸ್ಸಿನಲ್ಲಿ 15 ವರ್ಷದ ಅಂಬೇಡ್ಕರ್ ಅವರನ್ನು 1906 ರಲ್ಲಿ ಮದುವೆಯಾದರು. ಅಂಬೇಡ್ಕರ್ ಅವರ ಸಂಪೂರ್ಣ ಶಿಕ್ಷಣ ಹೋರಾಟ ಸಾಧನೆಗಳಿಗೆ ರಮಬಾಯಿ ಬೆನ್ನಲುಬಾಗಿ ನಿಂತರು. ಜೀವನದ ಉದ್ದಕ್ಕೂ ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಾ ಅಂಬೇಡ್ಕರ ಸಾಧನೆಗೆ ಕೈ ಜೋಡಿಸಿದ ರಮಾಬಾಯಿ ಚಿಕ್ಕವಯಸ್ಸಿನಲ್ಲಿ 1935ರಲ್ಲಿ ಮರಣ ಹೊಂದಿದರು. ತಮ್ಮ ಜೀವತಾವಧಿಯಲ್ಲಿ ಶೋಷಿತರ ಶಿಕ್ಷಣ, ಸಂಘಟನೆ ಹೋರಾಟಗಳಿಗೆ ಜೀವನ ಸಮರ್ಪಿಸಿದರು. ರಮಾಬಾಯಿ ಅವರ ಆದರ್ಶದಂತೆ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅದರ ಮಹತ್ವ ತಿಳಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕಿ ಬೇಬಿ ಸುನಿತಾ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ರಾಜ್ಯ ಸಂಚಾಲಕಿ ಚಂದ್ರಮ್ಮ, ಎಸ್.ಎಲ್. ಆನಂದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ದಲಿತ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷ ಸಿ. ಬಸವರಾಜ್, ಸಂಜೀವಿನಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಂಸ್ಥೆಯ ಅಧ್ಯಕ್ಷ ಹೆಚ್. ಬಸವರಾಜ್, ಸ್ಲಂ ಜನಾಂದೋಲನದ ರೇಣುಕಾ ಯಲ್ಲಮ್ಮ, ಮಹಮದ್ ಶಬ್ಬೀರ್ ಸಾಬ್, ರಂಗಭೂಮಿ ಕಲಾವಿದ ವೀರಯ್ಯ ಸೇರಿದಂತೆ ಇತರರು ಇದ್ದರು. ಹೆಗ್ಗೆರೆ ರಂಗಪ್ಪ ಮತ್ತು ಐರಣಿ ಚಂದ್ರು ಸಂಗಡಿಗರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.