ಕೂಡ್ಲಿಗಿ, ಏ.18- ನ್ಯಾಯಸಮ್ಮತ ಬೇಡಿಕೆ ಗಳ ಈಡೇರಿಕೆಗೆ ಒತ್ತಾಯಿಸಿ, ಮುಷ್ಕರ ನಡೆ ಸುತ್ತಿರುವ ಸಾರಿಗೆ ನೌಕರರ ಮೇಲೆ ದಬ್ಬಾಳಿಕೆ ಮಾಡದಿರುವಂತೆ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯು ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕೂಡ್ಲಿಗಿ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ.
ಕೂಡ್ಲಿಗಿ ಘಟಕದ ಅಧಿಕಾರಿಗಳು ಸಾರಿಗೆ ಕಾರ್ಮಿಕರಲ್ಲಿ ಭಯ ಹುಟ್ಟಿಸಿ ಕರ್ತವ್ಯಕ್ಕೆ ಕರೆತರುತ್ತಿದ್ದು, ಕುಟುಂಬ ವರ್ಗದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ದೂರಿದ್ದಾರೆ.
ಬಲವಂತವಾಗಿ ಹೆದರಿಸಿ, ಬೆದರಿಸಿ ಕೆಲಸ ಮಾಡಿಸಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ. ಅಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಕೂಡ್ಲಿಗಿ ಘಟಕದ ಕೆಲ ನೌಕರರನ್ನು ಬೀದರ್, ಕಲಬುರಗಿ, ರಾಯಚೂರು ಮತ್ತಿತರೆಡೆ ವರ್ಗಾವಣೆ ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಿಗಳು ಸರ್ವಾಧಿಕಾರ ಧೋರಣೆ ತಾಳಿದ್ದು, ನೌಕರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ಧನಗೌಡ, ಪ.ಪಂ. ಸದಸ್ಯರಾದ ಕಾವಲಿ ಶಿವಪ್ಪ ನಾಯಕ, ಗಂಗಾ, ಕುಮಾರಸ್ವಾಮಿ, ಕಂಪ್ಯೂಟರ್ ರಾಘವೇಂದ್ರ, ಡಿ.ಹೆಚ್. ದುರುಗೇಶ್, ನಲ್ಲಮುತ್ತಿ ದುರುಗೇಶ್ ಮತ್ತಿತರರು ಆರೋಪಿಸಿದ್ದಾರೆ.
ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಮುಂದುವರೆದರೆ, ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.