ಇಂದಿನಿಂದ ರಾತ್ರಿ ಕರ್ಫ್ಯೂ

ಮೇ 4ರವರೆಗೆ ರಾಜ್ಯಾದ್ಯಂತ ನಿರ್ಬಂಧ ಜಾರಿ

ಬೆಂಗಳೂರು, ಏ. 20 – ರಾಜ್ಯದಲ್ಲಿ ಕೊರೊನಾ ಉಲ್ಬಣಿಸುತ್ತಿರುವಂತೆಯೇ, ರಾಜ್ಯ ಸರ್ಕಾರ ರಾತ್ರಿ ಕರ್ಪ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಹೇರಿ ಆದೇಶ ಹೊರಡಿಸಿದೆ. ಇಂದು ಬುಧವಾರ ರಾತ್ರಿ 9 ಗಂಟೆಯಿಂದ ಮೇ 4ರವರೆಗೆ ನಿರ್ಬಂಧಗಳು ಜಾರಿಯಲ್ಲಿರಲಿವೆ.

ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಪಾಲ ವಜೂಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕರೆಯಲಾಗಿದ್ದ ಸರ್ವ ಪಕ್ಷಗಳ ನಾಯಕರ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವಾರದ ದಿನಗಳಲ್ಲಿ ಪ್ರತಿದಿನ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

ಆದರೆ, ರಾತ್ರಿ ಕಾರ್ಯನಿರ್ವಹಣೆ ಅಗತ್ಯವಿರುವ ಕೈಗಾರಿಕೆಗಳಿಗೆ ರಾತ್ರಿ ಕರ್ಫ್ಯೂದಿಂದ ವಿನಾಯಿತಿ ಇದೆ. ಟೆಲಿಕಾಂ, ವೈದ್ಯಕೀಯ ಸೇವೆ ಮತ್ತಿತರೆ ಸೇವೆಗಳಿಗೆ ನಿರ್ಬಂಧ ಇಲ್ಲ. ಸರಕು ಸಾಗಣೆ ಮೇಲೆ ನಿರ್ಬಂಧವಿಲ್ಲ. ದೂರ ಪ್ರಯಾಣದ ಬಸ್, ರೈಲು ಹಾಗೂ ವಿಮಾನಯಾನಕ್ಕೆ ಅನುಮತಿ ಇದೆ. ಇಂತಹ ಪ್ರಯಾಣಕ್ಕೆ ನೆರವಾಗಲು ಆಟೋ ಮತ್ತಿತರೆ ಸಾರಿಗೆಗೂ ಅವಕಾಶವಿದೆ.

ವಾರಾಂತ್ಯದ ಕರ್ಫ್ಯೂ ವೇಳೆ ತುರ್ತು ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು, 24 ಗಂಟೆ ಕಾರ್ಯ ನಿರ್ವಹಣೆ ಅತ್ಯವಿರುವ ಕೈಗಾರಿಕೆಗಳು, ದಿನಸಿ ಅಂಗಡಿಗಳು, ಅಗತ್ಯ ಸರಕುಗಳ ಅಂಗಡಿಗಳು, ಹೋಟೆಲ್‌ಗಳ ಪಾರ್ಸಲ್ ಸೇವೆ, ದೂರ ಪ್ರಯಾಣದ ಬಸ್, ರೈಲು ಹಾಗೂ ವಿಮಾನಗಳ ಸೇವೆಗೆ ಅವಕಾಶ ಇದೆ.

ಇವುಗಳ ಮೇಲೆ ನಿಷೇಧ : ಕರ್ಫ್ಯೂ ಜೊತೆಗೆ ಹಲವಾರು ಚಟುವಟಿಕೆಗಳ ಮೇಲೆ ನಿಷೇಧ ಹೇರಲಾಗಿದೆ. ಅದರಂತೆ ಶಾಲಾ – ಕಾಲೇಜು, ಶಿಕ್ಷಣ ಸಂಸ್ಥೆಗಳು ಬಂದ್ ಆಗಿರುತ್ತವೆ. (ಆನ್‌ಲೈನ್ ಹಾಗೂ ದೂರ ಶಿಕ್ಷಣಕ್ಕೆ ಅನುಮತಿ ಇದೆ)

ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಯೋಗ, ಸ್ಪಾ, ಕ್ರೀಡಾ ಚಟುವಟಿಕೆ, ಸ್ಟೇಡಿಯಂ, ಈಜುಕೊಳ, ಮನರಂಜನೆ ಪಾರ್ಕ್, ಆಡಿಟೋರಿಯಂ ಬಂದ್ ಆಗಲಿವೆ. ಎಲ್ಲ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತಿತರೆ ಸಮಾವೇಶಗಳು ನಿಷಿದ್ಧ.

ಧಾರ್ಮಿಕ ಸ್ಥಳಗಳು ಸಾರ್ವಜನಿಕರಿಗೆ ಬಂದ್ ಆಗಿರುತ್ತವೆ. ಆದರೆ, ಪೂಜಾ ವಿಧಿಗಳು ಮುಂದುವರೆಯಲಿವೆ. ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಇರಲಿದೆ.

ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಹೇರಿಕೆ ಮಾಡುವಂತೆ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ, ಲಾಕ್‌ಡೌನ್‌ಗೆ ರಾಜ್ಯ ಸರ್ಕಾರ ಒಲವು ತೋರಿಲ್ಲ. ಅಲ್ಲದೇ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೂ ಸಹ ಲಾಕ್‌ಡೌನ್ ಕಡೆಯ ಅಸ್ತ್ರವಾಗಬೇಕು ಎಂದು ಹೇಳಿರುವುದು ಗಮನಾರ್ಹವಾಗಿದೆ.

error: Content is protected !!