ಸಂಗೀತ ಕಲಿಕೆ ಚಾಲನೆಗೆ ಕ್ರಮ
ದಾವಣಗೆರೆ, ಫೆ. 17 – ಕಳೆದ ವರ್ಷವಷ್ಟೇ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಆರಂಭಿಸಿದ್ದ ನಗರದ ದೃಶ್ಯಕಲಾ ಮಹಾವಿದ್ಯಾಲಯ, ಶೀಘ್ರದಲ್ಲೇ ಸಂಗೀತ ಕಲೆಯ ಕೋರ್ಸ್ಗಳನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳುತ್ತಿದೆ. ಮಹಾವಿದ್ಯಾಲಯವನ್ನು ಪ್ರದರ್ಶನ ಕಲೆಯ ತಾಣವಾಗಿ ಮಾಡುವತ್ತ ಈಗ ಹೆಜ್ಜೆ ಇಡಲಾಗುತ್ತಿದೆ.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿ.ಎಸ್. ಹಲಸೆ ಅವರ ಸೂಚನೆಯಂತೆ ಶೀಘ್ರದಲ್ಲೇ ಅಲ್ಪಾವಧಿಯ ಸಂಗೀತ ತರಬೇತಿ ಕೋರ್ಸ್ಗಳು ಆರಂಭವಾಗಲಿವೆ ಎಂದು ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರವೀಂದ್ರ ಎಸ್. ಕಮ್ಮಾರ್ ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಸಂಗೀತದ ಸ್ನಾತಕೋತ್ತರ ಅಧ್ಯಯನ ವಿಭಾಗ ತೆರೆಯಲು ಸಭೆ ನಡೆಸಲಾಗಿತ್ತು. ಆದರೆ, ಈ ಕೋರ್ಸ್ ಆರಂಭಿಸಲು ಕನಿಷ್ಠ 10 ವಿದ್ಯಾರ್ಥಿಗಳ ಅಗತ್ಯವಿ ರುತ್ತದೆ. ಅಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಮುಂದೆ ಬಂದಿರಲಿಲ್ಲ ಎಂದವರು ಹೇಳಿದ್ದಾರೆ.
ಸಂಗೀತದಲ್ಲಿ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ ಎಂಬ ಪ್ರಮುಖ ವಿಭಾಗಗಳಿವೆ. ಇದರ ಜೊತೆಗೆ ವಾದ್ಯಗಳ ವಿಭಾಗವೂ ಇದೆ. ಸ್ನಾತಕೋತ್ತರ ಹಂತದ ಕಲಿಕೆಗೆ ಮುಂದೆ ಬರುವವರು ಈ ವಿಷಯಗಳಲ್ಲಿ ಪದವಿ ಪಡೆಯುವುದು ಕಡ್ಡಾಯ. ಹೀಗಾಗಿ ಅಗತ್ಯ ಸಂಖ್ಯೆ ಅಭ್ಯರ್ಥಿಗಳು ದೊರೆಯದೇ ಸಂಗೀತ ವಿಭಾಗದ ಪ್ರಸ್ತಾವನೆ ಕೈ ಬಿಡಲಾಗಿತ್ತು ಎಂದವರು ಹೇಳಿದ್ದಾರೆ.
ಈಗ ಪ್ರೊ. ಹಲಸೆ ಅವರು ಸ್ನಾತಕೋತ್ತರದ ಬದಲು ಮೂರು ತಿಂಗಳು, ಆರು ತಿಂಗಳ ತರಬೇತಿ ಹಾಗೂ ಒಂದು ವರ್ಷದ ಡಿಪ್ಲೋಮಾ ಕೋರ್ಸ್ ಆರಂಭಿಸಲು ಸೂಚನೆ ನೀಡಿದ್ದಾರೆ. ಇಂತಹ ಕೋರ್ಸ್ಗಳಿಗೆ ವಯಸ್ಸಿನ ಮಿತಿಯಾಗಲೀ, ವಿದ್ಯಾ ರ್ಹತೆಯ ಮಿತಿಯಾಗಲೀ ಇರುವುದಿಲ್ಲ. ಸಂಗೀತ ಆಸಕ್ತಿ ಇದ್ದರೆ ಮಾತ್ರ ಸಾಕು. ಹೀಗಾಗಿ ಶೀಘ್ರದಲ್ಲೇ ಅಲ್ಪಾವಧಿಯ ಕೋರ್ಸ್ ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರೊ. ಹಲಸೆ, ಅಲ್ಪಾವಧಿಯ ಹಾಗೂ ದಿನಕ್ಕೆ ಎರಡು – ಮೂರು ಗಂಟೆಯ ಸಂಗೀತ ಕಲಿಕೆಯ ಕೋರ್ಸ್ ಆರಂಭಿಸಿದರೆ ಪ್ರದರ್ಶನ ಕಲೆಗೆ ಪ್ರೋತ್ಸಾಹ ಸಿಗುತ್ತದೆ. ವಿಶೇಷವಾಗಿ ಮಹಿಳೆ ಯರು ಇಂತಹ ಕೋರ್ಸ್ಗಳಿಂದ ಪ್ರಯೋ ಜನ ಪಡೆಯುತ್ತಾರೆ ಎಂದು ಹೇಳಿದ್ದಾರೆ.
ಸಂಗೀತ ಮಾನಸಿಕ ಒತ್ತಡ ನಿವಾರಣೆ ಮಾಡುತ್ತದೆ ಹಾಗೂ ನೋವಿಗೆ ಪರಿಹಾರವಾಗಿದೆ. ಹೀಗಾಗಿ ಬಿಡುವಿನ ವೇಳೆಯಲ್ಲಿ ಆಸಕ್ತ ಮಹಿಳೆಯರು ಸಂಗೀತ ಕಲಿಯಲು ದೃಶ್ಯಕಲಾ ಮಹಾವಿದ್ಯಾಲಯ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಸಂಗೀತವಷ್ಟೇ ಅಲ್ಲದೇ ನೃತ್ಯ ಮುಂತಾದ ಪ್ರದರ್ಶನ ಕಲೆಗಳ ಕೋರ್ಸ್ ಆರಂಭಿಸುವ ಬಗ್ಗೆಯೂ ಸೂಚನೆ ನೀಡಲಾಗಿದೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
‘ಬೆಳಕು ಬಿಂದು’ ಪ್ರದರ್ಶನ
ಚಿತ್ರದುರ್ಗ ಹಾಗೂ ಸಂತೇಬೆನ್ನೂರಿನಲ್ಲಿ ತೆಗೆದ ಚಿತ್ರಗಳ ಪ್ರದರ್ಶನ
ದಾವಣಗೆರೆ, ಫೆ.17- ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಬಿ.ವಿ.ಎ. ಅಂತಿಮ ವರ್ಷದ ಅನ್ವಯಿಕ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ‘ಬೆಳಕು ಬಿಂದು -2020’ ಎಂಬ ಹೆಸರಿನ ಐತಿಹಾಸಿಕ ಸ್ಥಳಗಳ ಛಾಯಾಚಿತ್ರಕಲೆಯ ಪ್ರದರ್ಶನ ಆಯೋಜಿಸಲಾಗಿತ್ತು. ಪ್ರದರ್ಶನದಲ್ಲಿ 21 ವಿದ್ಯಾರ್ಥಿಗಳು ಚಿತ್ರದುರ್ಗ ಹಾಗೂ ಸಂತೇಬೆನ್ನೂರಿನಲ್ಲಿ ತೆಗೆದ ಚಿತ್ರಗಳನ್ನು ಪ್ರದರ್ಶಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿ.ಎಸ್. ಹಲಸೆ ಪ್ರದರ್ಶನವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ, ದಾವಣಗೆರೆ ವಿ.ವಿ. ಪರೀಕ್ಷಾಂಗ ಕುಲಸಚಿವರಾದ ಡಾ. ಹೆಚ್.ಎಸ್. ಅನಿತ, ಹಣಕಾಸು ಅಧಿಕಾರಿ ಡಿ. ಪ್ರಿಯಾಂಕ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರವೀಂದ್ರ ಎಸ್. ಕಮ್ಮಾರ್, ಬೋಧಕರಾದ ದತ್ತಾತ್ರೇಯ ಎನ್. ಭಟ್, ಡಾ. ಸತೀಶ್ ಕುಮಾರ್ ಪಿ. ವಲ್ಲೇಪುರೆ, ಡಾ. ಜೈರಾಜ್ ಚಿಕ್ಕಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
2019ರಲ್ಲಿ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಬಿ.ಆರ್. ಕೊರ್ತಿ ಅವರನ್ನು ಸನ್ಮಾನಿಸಲಾಯಿತು.