ದಾವಣಗೆರೆ, ಏ. 19- ತಾಲ್ಲೂಕಿನ ಎಲೆಬೇತೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ಉತ್ಸವ ನಡೆಯಿತು.
105 ವರ್ಷದ ಅಜ್ಜಿ ಅಂಬಾಬಾಯಿ ಕುಲಕರ್ಣಿ, 80 ವರ್ಷದ ಮಗಳು ಸರಸ್ವತಿ ನಾಡಿಗರ್ ಕೊರೊನಾ ಲಸಿಕೆ ಹಾಕಿಸಿಕೊಂಡರು. ನಗರದ ಕೆಟಿಜೆ ನಗರದ ರಂಗನಾಥ ನಾಡಿಗರ್ ಮನೆತನದವರಾಗಿರುವ ಅಂಬಾಬಾಯಿ ಕುಲಕರ್ಣಿ ಲಸಿಕೆ ಪಡೆದು ಮಾತನಾಡುತ್ತಾ, 45 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಂಡು ಆರೋಗ್ಯವಂತರಾಗಿರಿ ಎಂದು ಗಟ್ಟಿ ಧ್ವನಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಆಶಾ ಭಾನುಪ್ರಕಾಶ್, ಬೇತೂರು ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಡಿ. ಮಿಲ್ಕಾ, ನಿರ್ಮಲ ಕುಲಕರ್ಣಿ, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು. ಎಲೆಬೇತೂರು ಉಪಕೇಂದ್ರದಲ್ಲಿ ಏಪ್ರಿಲ್ 5 ರಂದು ಕೊರೊನಾ ಲಸಿಕೆ ಹಾಕಲು ಪ್ರಾರಂಭಿಸಿದ್ದು, 222 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.