ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಪೌರ ಶಿಕ್ಷಣ ಶಿಬಿರದಲ್ಲಿ ದಾವಿವಿ ಶಿಕ್ಷಣ ನಿಕಾಯದ ಮುಖ್ಯಸ್ಥ ಡಾ. ಕೆ. ವೆಂಕಟೇಶ್
ದಾವಣಗೆರೆ, ಫೆ.17- ದಾವಣಗೆರೆ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲಾ ಪದವಿ ಕಾಲೇಜುಗಳಲ್ಲಿ ನಾಲ್ಕು ವರ್ಷದ ಬಿಇಡಿ ಆಧಾರಿತ ವೃತ್ತಿಪರ ಕೋರ್ಸ್ ಶೀಘ್ರವೇ ಪ್ರಾರಂಭವಾಗಲಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣ ನಿಕಾಯದ ಮುಖ್ಯಸ್ಥ ಡಾ. ಕೆ. ವೆಂಕಟೇಶ್ ತಿಳಿಸಿದರು.
ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಇಡಿ ವಿದ್ಯಾರ್ಥಿಗಳಿಗಾಗಿ ಮೊನ್ನೆ ಹಮ್ಮಿಕೊಂಡಿದ್ದ ಪೌರ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಶಿಕ್ಷಣ ನೀತಿಯ ಪ್ರಕಾರ ಶಿಕ್ಷಕರ ಶಿಕ್ಷಣವನ್ನು ಉನ್ನತೀಕರಣಗೊಳಿ ಸಲು ನಾಲ್ಕು ವರ್ಷದ ಬಿಇಡಿ ಕೋರ್ಸ್ ಸೂಕ್ತವಾಗಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಆರಂಭಿಸುವ ಬಗ್ಗೆ ಪ್ರಸ್ತಾಪ ನಡೆದಿದೆ. ನಮ್ಮಲ್ಲಿರುವ 120 ಕಾಲೇಜುಗಳಲ್ಲಿ ಕನಿಷ್ಠ 100 ಕಾಲೇಜುಗಳಲ್ಲಿ ಈ ಕೋರ್ಸ್ ಪ್ರಾರಂಭಕ್ಕೆ ಚಿಂತನೆ ನಡೆದಿದೆ. ಹಾಗೇನಾದರೂ ಈ ಕೋರ್ಸ್ ಪ್ರಾರಂಭವಾದರೆ ಮಾಸ್ಟರ್ ಡಿಗ್ರಿ, ಎಂಎಸ್ ಸಿ, ಎಂಎ, ಬಿಇಡಿ ಪದವೀಧರರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಹೇಳಿದರು.
ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬಹಳಷ್ಟು ಅತ್ಯಾವಶ್ಯಕವಾಗಿದ್ದು, ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. ಅಂಗೈಯಲ್ಲಿಯೇ ಭೂ ಮಂಡಲದ ಮಾಹಿತಿ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಪೆನ್ನು, ಪೇಪರ್ ಇರದ ದಿನಗಳು ಬರುತ್ತವೆ. ಜಗತ್ತು ತಾಂತ್ರಿಕತೆಗೆ ಅಂಟಿಕೊಂಡಿದೆ. ಅದಕ್ಕೆ ಅನುಗುಣವಾಗಿ ನೀವು ಸಹ ನಿಮ್ಮ ಪದವಿಗೆ ನೆರವಾಗುವಂತೆ ಆನ್ ಲೈನ್ ನಲ್ಲಿ ಮಾಹಿತಿ ಪಡೆದು ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕೆಂದರು.
ಶಿಕ್ಷಕರು ತರಗತಿಗೆ ಅವರೇ ನಾಯಕರಿದ್ದಂತೆ. ಮಕ್ಕಳಲ್ಲಿ ಪ್ರಶ್ನೆ ಕೇಳುವ ಮನೋಭಾವ ಬೆಳೆಸಿ. ಶಾಲಾ ಕೊಠಡಿಯಲ್ಲಿ ಸೂಪರ್ ಮಿನಿಟ್ ನಲ್ಲಿ ಪಠ್ಯಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಪ್ರಶ್ನೆ ಕೇಳಿ ಇಷ್ಟು ನಿಮಿಷಗಳಲ್ಲಿ ಉತ್ತರ ನೀಡು ವಂತೆ ಮಕ್ಕಳನ್ನು ಹುರಿದುಂಬಿಸಿ. ಪೋಷ ಕರು ಬಯಸುವ ಗುಣಮಟ್ಟದ ಶಿಕ್ಷಣ ವನ್ನು ಮಕ್ಕಳಿಗೆ ಕೊಡಿ. ಹೆಚ್ಚು ಪರಿಶ್ರಮ ಹಾಕಿ ಮಕ್ಕಳನ್ನು ಭವಿಷ್ಯದ ನಾಯಕರನ್ನಾಗಿ ಮಾಡಿ ಎಂದು ಸಲಹೆ ನೀಡಿದರು.
ಪ್ರಶಿಕ್ಷಣದಲ್ಲಿ ನಿಜವಾಗಿ ಆಸಕ್ತಿಯುಳ್ಳವರು ಶಿಕ್ಷಕರಾಗಬೇಕು. ಈ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಬಿಇಡಿ ಆಧಾರಿತ ವೃತ್ತಿಪರ ಕೋರ್ಸ್ ಪೂರಕವಾಗಿದೆ. ದ್ವಿತೀಯ ಪಿಯುಸಿ ಮುಗಿದ ತಕ್ಷಣವೇ ಈ ಕೋರ್ಸ್ ಗೆ ಸೇರುವ ಅವಕಾಶವಿದೆ. ಬಿಎ, ಬಿಇಡಿ, ಎಂಎ ಇವುಗಳನ್ನು ಪ್ರತ್ಯೇಕವಾಗಿ ಮುಗಿಸಲು ಬಹಳ ಸಮಯ ಬೇಕು. ಆದರೆ ಈ ಕೋರ್ಸ್ ನಡಿ 4 ವರ್ಷಗಳಲ್ಲೇ ಬಿಎ-ಬಿಇಡಿ, ಬಿಎಸ್ಸಿ-ಬಿಇಡಿ ಕೋರ್ಸ್ ಗಳನ್ನು ಏಕಕಾಲದಲ್ಲೇ ಮುಗಿಸಬಹುದಾಗಿದೆ.
– ಡಾ. ಹೆಚ್.ವಿ. ವಾಮದೇವಪ್ಪ, ವಿಶೇಷಾಧಿಕಾರಿ, ತರಳಬಾಳು ವಿದ್ಯಾಸಂಸ್ಥೆ
ವಿದ್ಯಾಸಂಸ್ಥೆಯ ವಿಶೇಷಾಧಿಕಾರಿ ಡಾ. ಹೆಚ್.ವಿ. ವಾಮದೇವಪ್ಪ ಮಾತನಾಡಿ, ಹೊಸ ಶಿಕ್ಷಣ ನೀತಿ ಪ್ರಕಾರ ಶಾಲಾ ಶಿಕ್ಷಣದ ಪ್ರತಿ ಹಂತದಲ್ಲೂ ಶಿಕ್ಷಕರ ನೇಮಕಾತಿ ವೇಳೆ ಬಿಇಡಿ ಆದ ಪದವೀಧರರನ್ನೇ ನೇಮಕಾತಿ ಮಾಡುವ ನಿಯಮವಿದೆ. ಹಾಗಾಗಿ ಇನ್ಮುಂದೆ ಎಲ್ ಕೆಜಿ, ಯುಕೆಜಿ ಗೆ ಬಿಇಡಿ ಆದವರನ್ನೇ ನೇಮಕ ಮಾಡಲಾಗುತ್ತದೆ. ನರ್ಸರಿಯಿಂದ ದ್ವಿತೀಯ ಪಿಯುಸಿ ತನಕ ಬೋಧನೆಗೆ ಪ್ರತಿ ಶಿಕ್ಷಕರು ಬಿಇಡಿ ಪೂರೈಸಿರಬೇಕು. ಟಿಇಟಿ ಮತ್ತು ಸಿಟಿಇಟಿ ಪರೀಕ್ಷೆ ಪಾಸ್ ಮಾಡಿರಬೇಕು. ನರ್ಸರಿ, ಯುಕೆಜಿ, ಎಲ್‌ಕೆಜಿ ಬೋಧನೆಗೆ ಸಾಮಾನ್ಯ ಶಿಕ್ಷಕರ ತಯಾರು, ಮೊದಲು ಮತ್ತು ಎರಡನೇ ತರಗತಿಗೆ ಎಲ್ಲಾ ಪಠ್ಯ ಬೋಧನೆಗೆ ಶಿಕ್ಷಕರು, ವಿಶೇಷ ಪಠ್ಯಗಳಿಗೆ ಶಿಕ್ಷಕರು, ವಿಶೇಷ ಚೇತನಗಳಿಗೆ ಶಿಕ್ಷಣ ನೀಡಲು ಶಿಕ್ಷಕರು ಕಲೆ ಮತ್ತು ಸಂಗೀತದ ಶಿಕ್ಷಣಕ್ಕೆ ಶಿಕ್ಷಕರು ತಯಾರು ಮಾಡುವ ಪ್ರಕ್ರಿಯೆ ಎಲ್ಲಾ ಬೋಧನಾ ಶೈಕ್ಷಣಿಕ ಕಾರ್ಯಕ್ರಮದಡಿ ನಡೆಯಲಿದೆ ಎಂದು ತಿಳಿಸಿದರು.
ಶಿಕ್ಷಕರು ಸಮಾಜ ನಮ್ಮನ್ನು ಅನುಕರಿಸುವ ರೀತಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಹಿಂದೆ ಶಿಕ್ಷಕರಿಗೆ ಛೇರ್ಮನ್‍ಗೆ ಇರುವ ಗೌರವವಿತ್ತು. ಯಾಕೆಂದರೆ ನಿಷ್ಪಕ್ಷಪಾತ ಮಾರ್ಗದರ್ಶನ ಅವರು ಮಾಡುತ್ತಿದರು. ಅದೇ ರೀತಿ ಇಂತಹ ಮೌಲ್ಯವನ್ನು ಇಂದಿನ ಶಿಕ್ಷಕರು ರೂಢಿಸಿಕೊಳ್ಳಬೇಕು ಎಂದು ಸಲಹೆ ಕೊಟ್ಟರು.
ಶಿಕ್ಷಕರಿಗೆ ಗುಣಮಟ್ಟದ ಪ್ರಶಿಕ್ಷಣ ನೀಡುವಲ್ಲಿ ಪ್ರಯತ್ನ ನಡೆಯುತ್ತಿದೆ. ಪ್ರಶಿಕ್ಷಣ ಗುಣಮಟ್ಟ ಸುಧಾರಣೆ ಮಾಡಲು ಬಿಇಡಿ ಒಂದು ವರ್ಷ ಹೆಚ್ಚಳ ಮಾಡಿದ್ದಾರೆ. ಆ ಕಾರಣಕ್ಕಾಗಿ ಮುಂದಿನ ಭವಿಷ್ಯತ್ತಿನ ಶಿಕ್ಷಕರು ಪರಿಪಕ್ವತೆ ಹೊಂದುತ್ತಿದ್ದಾರೆ ಎಂದರು.
ಶಿಬಿರದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಟಿ. ನಾಗರಾಜ ನಾಯ್ಕ ಇದ್ದರು. ಪ್ರಶಿಕ್ಷಣಾರ್ಥಿ ಎಂ. ಸ್ವಾತಿ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಆರ್. ಸಂತೋಷ್ ಕುಮಾರ್ ಸ್ವಾಗತಿಸಿದರು. ಎನ್.ಆರ್. ಕಾವ್ಯ ನಿರೂಪಿಸಿದರು. ಜಿ.ಹೆಚ್. ಆಶಾ ವಂದಿಸಿದರು.