ಅನನ್ಯ ಲೇಖಕಿ ಟಿ.ಗಿರಿಜಾ ಅವರ `ನೆನಪು-ಮೆಲುಕು’ ವೆಬಿನಾರ್ ಕಾರ್ಯಕ್ರಮದಲ್ಲಿ ಮಲ್ಲಮ್ಮ ನಾಗರಾಜ್
ದಾವಣಗೆರೆ,ಜು.9- ಹಿರಿಯ ಸಾಹಿತಿಯಾಗಿದ್ದ ಶ್ರೀಮತಿ ಟಿ. ಗಿರಿಜಾ ಅವರು ತಾವು ಬರೆದಂತೆ ಬದುಕಿ ಬಾಳಿದರಲ್ಲದೇ, ಬರಹಗಾರರಿಗೆ ಪ್ರೇರಣೆಯಾಗಿದ್ದರು ಎಂದು ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ನಾಗರಾಜ್ ಶ್ಲ್ಯಾಘಿಸಿದರು.
ಅನನ್ಯ ಲೇಖಕಿ ಟಿ. ಗಿರಿಜಾ ಅವರ 7ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕರ್ನಾಟಕ ಲೇಖ ಕಿಯರ ಸಂಘದ ರಾಜ್ಯ ಮತ್ತು ಜಿಲ್ಲಾ ಘಟಕಗಳು, ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮೊನ್ನೆ ಏರ್ಪಾಡಾಗಿದ್ದ `ನೆನಪು-ಮೆಲುಕು’ ಅಂತರ್ಜಾಲ ವೆಬಿನಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗಿರಿಜಾ ಅವರು ಸ್ತ್ರೀ ಎಂದು ಅಪಹಾಸ್ಯ ಮಾಡಿದವರಿಗೆ ಮೌನವಾಗಿದ್ದುಕೊಂಡೇ ಬರವಣಿಗೆಗಳ ಮೂಲಕ ಉತ್ತರ ನೀಡಿದ ದಿಟ್ಟೆ ಎಂದು ಮಲ್ಲಮ್ಮ ಅವರು ಗಿರಿಜಾ ಅವರ ವ್ಯಕ್ತಿತ್ವ, ಸಾಹಿತ್ಯ ಸೇವೆ, ಜೀವನದಲ್ಲಿ ಬಂದು ನೋವು – ನಲಿವುಗಳನ್ನು ಮಾರ್ಮಿಕವಾಗಿ ವಿವರಿಸಿ, ಸ್ತ್ರೀಗೆ ಪ್ರೇರಕ ಶಕ್ತಿಯಾಗಿದ್ದರು ಎಂದು ಕೊಂಡಾಡಿದರು.
ಹಿರಿಯ ಸಾಹಿತಿ ಶ್ರೀಮತಿ ಅರುಂಧತಿ ರಮೇಶ್ ಮಾತನಾಡಿ, ಟಿ. ಗಿರಿಜಾ ಅವರು ಅನನ್ಯ ಲೇಖಕಿಯಾಗಿದ್ದರು ಎಂದು ಶ್ಲ್ಯಾಘಿಸಿದರು.
ಟಿ.ಗಿರಿಜಾ ಅವರ ಅತ್ಯಂತ ಜನಪ್ರಿಯ ಕೃತಿಯಾಗಿದ್ದ `ಭಾರತದ ನದಿಗಳು’ ಕೃತಿಯ ಕುರಿತು ಮಾತನಾಡಿದ ಹಿರಿಯ ಲೇಖಕಿ ಶ್ರೀಮತಿ ಭಾಗ್ಯಲಕ್ಷ್ಮಿ ಅಮೃತಾಪುರ ಅವರು, ಭಾರತದಲ್ಲಿ ಹುಟ್ಟಿ ಹರಿಯುವ ನದಿಗಳ ಬಗ್ಗೆ ಈ ಕೃತಿಯಲ್ಲಿ ಗಿರಿಜಾ ಅವರು ಅತ್ಯಂತ ಮನೋಜ್ಞವಾಗಿ ವಿವರಿಸಿದ್ದಾರೆ ಎಂದು ಹೇಳಿದರು.
ಗಿರಿಜಾ ಅವರ ಸೋದರ ಸೊಸೆ ಟಿ.ಎಸ್.ಶೈಲಜಾ ಅವರು ಮಾತನಾಡಿ, ಈ ಬದುಕು ಗಿರಿಜಾ ಅವರು ನೀಡಿದ ಭಿಕ್ಷೆ, ನಮ್ಮ ಬದುಕಿಗೆ ಬೆಳಕು ಚೆಲ್ಲಿದ ಆಶಾಕಿರಣ ಎಂದು ಭಾವುಕರಾದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷರೂ ಆಗಿರುವ ಹಿರಿಯ ಸಾಹಿತಿ ವನಮಾಲ ಸಂಪನ್ನ ಕುಮಾರ್ ಮಾತನಾಡಿ, ದಾವಣಗೆರೆ ಎಂದಾಕ್ಷಣ ಹಿರಿಯ ಚೇತನ ಟಿ.ಗಿರಿಜಾ ಥಟ್ಟನೆ ನೆನಪಾಗುತ್ತಾರೆ. ಇಂದಿನ ಕಾರ್ಯಕ್ರಮವನ್ನು ಗಿರಿಜಾ ಅವರ ಆತ್ಮ ನೋಡಿ ಖಂಡಿತ ಸಾರ್ಥಕತೆ ಕಂಡುಕೊಂಡಿರುತ್ತದೆ ಎಂದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ವೀಣಾ ಕೃಷ್ಣಮೂರ್ತಿ ಅವರು ಸ್ವಾಗತಿಸಿದರು. ಗಾಯಕಿ ಐ.ಕೆ.ಉಮಾದೇವಿ ಅವರು ಗಿರಿಜಾ ಅವರ ಕುರಿತು ತಮ್ಮ ಸುಮಧುರ ಕಂಠದಿಂದ ಹಾಡಿ ಗಮನ ಸೆಳೆದರು. ಶ್ರೀಮತಿ ಸಂಧ್ಯಾ ಸುರೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಸುನೀತಾ ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಹೆಚ್.ಕೆ. ಸತ್ಯಭಾಮಾ ಮಂಜುನಾಥ್ ಅವರು ವಂದಿಸಿದರು. ಸಂಘದ ರಾಜ್ಯ ಘಟಕದ ಖಜಾಂಚಿಯೂ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀಮತಿ ರೇಣುಕಾ ದೇಸಾಯಿ ಅವರು ತಾಂತ್ರಿಕವಾಗಿ ಸಹಕರಿಸಿದರು.