ಸರಿ ಇಲ್ಲ ಜಲಸಿರಿ ಕಾರ್ಯವೈಖರಿ

ದಾವಣಗೆರೆ, ಜು. 9 – 2023ರ ಒಳಗಾಗಿ 24×7 ಜಲಸಿರಿ ಯೋಜನೆ ಪೂರ್ಣವಾಗಬೇಕು. ಇದಕ್ಕಾಗಿ ಗುತ್ತಿಗೆ ಪಡೆದಿರುವ ಕಂಪನಿಗಳು ಹೆಚ್ಚು ಜನರು ಹಾಗೂ ಸರಕುಗಳನ್ನು ಬಳಸಿಕೊಳ್ಳಬೇಕು. ಇಲ್ಲವಾದರೆ ಕಠಿಣ ವಿಳಂಬ ದಂಡ ವಿಧಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಎಚ್ಚರಿಕೆ ನೀಡಿದ್ದಾರೆ.

ಜಿಎಂಐಟಿಯಲ್ಲಿ ಕರೆದಿದ್ದ ಜಲಸಿರಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ದಾವಣಗೆರೆಗೆ ಸಗಟು ನೀರು ಪೂರೈಸುವ 83.37 ಕೋಟಿ ರೂ.ಗಳ ಯೋಜನೆ ಈಗಾಗಲೇ ಎರಡು ಬಾರಿ ವಿಸ್ತರಣೆ ಪಡೆದುಕೊಂಡರೂ ಪೂರ್ಣವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2020ರಲ್ಲೇ ಯೋಜನೆ ಪೂರ್ಣವಾಗ ಬೇಕಿತ್ತು. ಎರಡು ಬಾರಿ ವಿಸ್ತರಣೆ ಪಡೆದುಕೊಳ್ಳ ಲಾಗಿದೆ. ಇನ್ನೂ ಕೆಲಸ ಮುಗಿದಿಲ್ಲ ಎಂದು ಹೇಳಿದರು.

ಗುತ್ತಿಗೆದಾರರನ್ನು ಕರೆದಾಗ ತ್ವರಿತವಾಗಿ ಮುಗಿಸುವುದಾಗಿ ಹೇಳುತ್ತಾರೆ. ಲಿಖಿತವಾಗಿಯೂ ತಿಳಿಸುತ್ತಾರೆ. ಆದರೆ, ನಂತರ ಕೆಲಸ ಮಾಡುತ್ತಿಲ್ಲ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಹೇಳಿದರು.

ಗುತ್ತಿಗೆ ಪಡೆದಿರುವ ಎಸ್‌ಇಪಿಸಿ – ಡಿಆರ್‌ಎಸ್ ಐಟಿಪಿಎಲ್ ಜೆವಿ ಕಂಪನಿಯ ಅಧಿಕಾರಿ ಮಾತನಾಡಿ, ಕೊರೊನಾ ಕಾರಣ ದಿಂದಾಗಿ ಕಾಮಗಾರಿ ವಿಳಂಬವಾಗಿದೆ ಎಂದರು. 2017ರಲ್ಲೇ ಕಾಮಗಾರಿ ಆರಂಭ ವಾಗಿತ್ತು. 2020ರ ಆರಂಭದಲ್ಲೇ ಕಾಮಗಾರಿ ಮುಗಿಯಬೇಕಿತ್ತು. ಹೀಗಿರುವಾಗ ಕೊರೊನಾ ನೆಪ ಹೇಳುವುದು ಬೇಡ. ನವೆಂಬರ್‌ ಒಳಗೆ ಕಾಮಗಾರಿ ಮುಗಿಸ ಬೇಕು. ಕಾಮಗಾರಿ ಇನ್ನೂ ತಡವಾದರೆ ಹೆಚ್ಚು ದಂಡ ವಿಧಿಸಲಾಗುವುದು ಎಂದು ಹೇಳಿದರು.

ನಗರದಲ್ಲಿ ನೀರು ಪೂರೈಕೆ ಜಾಲ ಅಳವಡಿಸುವ 681 ಕೋಟಿ ರೂ.ಗಳ ಕಾಮಗಾರಿ ಮುಂದಿನ ವರ್ಷ ಫೆಬ್ರವರಿ ಒಳಗೆ ಪೂರ್ಣ ಗೊಳ್ಳಬೇಕಿದೆ. ಆದರೆ, ಇನ್ನೂ ಶೇ.54ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ನಾಲ್ಕು ತಿಂಗಳಲ್ಲಿ ಉಳಿದ ಕಾಮಗಾರಿ ಮುಗಿಯುವುದು ಅಸಾಧ್ಯ ಎಂದು ಸಂಸದ ಸಿದ್ದೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗುತ್ತಿಗೆ ಪಡೆದಿರುವ ಗುರ್ಗಾಂವ್‌ನ ಸುಯೇಜ್ ಪ್ರಾಜೆಕ್ಟ್ಸ್ ನ ಅಧಿಕಾರಿ ಮಾತನಾಡಿ, ನಾಲ್ಕು ತಿಂಗಳ ಹೆಚ್ಚುವರಿ ಅವಧಿಯಲ್ಲಿ ಕಾಮಗಾರಿ ಮುಗಿಸ ಲಾಗುವುದು. ಪ್ರಸಕ್ತ 6 ನೀರಿನ ಟ್ಯಾಂಕ್‌ಗಳು ನಿರ್ಮಾಣವಾಗಿದ್ದು, ಇನ್ನೂ 12 ಟ್ಯಾಂಕ್‌ಗಳು ನಿರ್ಮಾಣ ಹಂತದಲ್ಲಿವೆ. ಪ್ರತಿದಿನ 150 ರಷ್ಟು ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಕಾಮಗಾರಿ ನಿಧಾನವಾಗುತ್ತಿದೆ. ಪ್ರತಿದಿನ 150 ನಲ್ಲಿಗಳಂತೆ ಸಂಪರ್ಕ ಕೊಟ್ಟರೆ, ಇರುವ ಎಲ್ಲಾ 70 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಲು 20 ತಿಂಗಳು ಬೇಕಾ ಗುತ್ತದೆ. ಪ್ರತಿದಿನ 600 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಬೇಕು. ತ್ವರಿತವಾಗಿ ಟ್ಯಾಂಕ್‌ಗಳನ್ನು ನಿರ್ಮಿಸಬೇಕು. ಇಲ್ಲವಾದರೆ 30 ಕೋಟಿ ರೂ.ಗಳವರೆಗೆ ವಿಳಂಬ ದಂಡವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಎಸ್.ಟಿ. ವೀರೇಶ್, ಜಲಸಿರಿ ಕಾಮಗಾರಿ ನಡೆಸುವಾಗ ನಗರಪಾಲಿಕೆಯ ನೀರಿನ ಪೈಪ್‌ಗಳು ಒಡೆಯುತ್ತಿವೆ. ದುರಸ್ತಿ ಮಾಡುವುದನ್ನು ಸುಯೇಜ್ ಕಂಪನಿ ಮೂರ್ನಾಲ್ಕು ದಿನ ತಡ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

ಕೆಯುಐಡಿಎಫ್‌ಸಿ – ಕೆಐಯುಡಬ್ಲ್ಯೂಎಂಐಪಿ ಕಾರ್ಯಕಾರಿ ಇಂಜಿನಿಯರ್ ಮಂಜುನಾಥ್ ಅವರು ಯೋಜನೆ ಕುರಿತು ವಿವರ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!