ಶ್ರೀ ಬಸವ ಪ್ರಭು ಸ್ವಾಮೀಜಿ ಸ್ಮರಣೆ
ದಾವಣಗೆರೆ, ಅ.1- ಬಸವ ಚೇತನ ಲಿಂ. ಜಯದೇವ ಜಗದ್ಗುರುಗಳವರು ಆದರ್ಶ ಶಿಖರವನ್ನೇರಿದ ಓರ್ವ ಶ್ರೇಷ್ಠ ಮಹಾತ್ಮರು. ನಿರ್ಮಲಭಾವದ ಸತ್ಪುರುಷರು, ಆತ್ಮ ಕಲ್ಯಾಣದ ಜೊತೆ ಸಮಾಜ ಕಲ್ಯಾಣ ಸಾಧಿಸಿದವರು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.
ನಗರದ ಜಯದೇವ ವೃತ್ತದ ಬಸವ ಕೇಂದ್ರ ಶ್ರೀ ಶಿವಯೋಗಾಶ್ರಮದ ಆವರಣದಲ್ಲಿ ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65 ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ `ಶ್ರೀ ಜಯದೇವ ಲೀಲೆ’ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಅವರು ಮರಣವನ್ನು ಗೆದ್ದ ಮಹಾಂತರು. ಜೀವ ದಯೆ, ಮಾನವೀಯತೆ, ಸಮಭಾವ, ಸಮದರ್ಶಿನಿಯಾಗಿದ್ದರು. ಹೃದಯ ವೈಶಾಲ್ಯತೆಗೆ ಹೆಸರಾಗಿದ್ದವರು ಎಂದು ಬಣ್ಣಿಸಿದರು.
ಜಯದೇವ ಶ್ರೀಗಳು ವಿಶ್ವದ ಅದ್ಭುತವಾದ ಶಕ್ತಿ, ಅವರೊಂದು ಚಿನ್ಮಯ ಶಕ್ತಿ. ಅವರು ಏರಿದ ಎತ್ತರ, ತೋರಿದ ದಾರಿ, ಅಧ್ಯಾತ್ಮದ ಆದರ್ಶಗಳು, ಸಾಧನೆ, ಸಿದ್ಧಿಗಳು ಇಂದಿಗೂ ಮನುಕುಲಕ್ಕೆ ದೀಪಸ್ತಂಭವಾಗಿವೆ ಎಂದರು.
ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವ ಮಹತ್ಕಾರ್ಯವನ್ನು ಸಾಧಿಸಿದವರು. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು. ಬದುಕಿನ ಸಾರ್ಥಕತೆಯನ್ನು ಮೆರೆದವರು ಜಯದೇವ ಜಗದ್ಗುರುಗಳು ಎಂದು ಶ್ರೀಗಳ ಜೀವಮಾನ ಸಾಧನೆಯನ್ನು ತೆರೆದಿಟ್ಟರು.
ಭೂತಿ ಎಂದರೆ ಸಾಧಾರಣ ಇರುವಿಕೆ.`ವಿಭೂತಿ’ ಎಂದರೆ ವಿಶೇಷ ರೂಪ ಮೈದಾಳುವುದು ಎಂದರ್ಥ. ನರೇಂದ್ರ ಭೂತಿ, ಸ್ವಾಮಿ ವಿವೇಕಾನಂದ ವಿಭೂತಿ. ಚನ್ನವೀರ ಭೂತಿ, ಜಯದೇವ ವಿಭೂತಿ. ಹೀಗೆ ವ್ಯಕ್ತಿ ಶಕ್ತಿಯಾಗಿ ಪರಿಣಮಿಸಿದಾಗ ಭೂತಿಯಿಂದ ವಿಭೂತಿ ವ್ಯಕ್ತಿತ್ವ ಪಡೆದ ಜಯದೇವ ಜಗದ್ಗುರುಗಳು ವಿಭೂತಿ ಪುರುಷರಾಗಿದ್ದಾರೆ ಎಂದರು.
ಜಯದೇವ ಶ್ರೀಗಳಿಗೆ ದೂರದೃಷ್ಟಿ ಇತ್ತು. ಅವರು ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿದ್ದರಿಂದ ದೇಶದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಯಿತು. ಯಾವುದೇ ಆಧುನಿಕ ವ್ಯವಸ್ಥೆಗಳು ಇಲ್ಲದ ಸಂದರ್ಭದಲ್ಲೂ ಅಭೂತಪೂರ್ವ ಸಾಧನೆ ಮಾಡಿದ ಕೀರ್ತಿ ಜಯದೇವ ಶ್ರೀಗಳಿಗೆ ಸಲ್ಲುತ್ತದೆ ಎಂದರು.
ಚನ್ನಗಿರಿ ಮಹಾಂತೇಶ ಶಾಸ್ತ್ರಿಗಳು ` ಶ್ರೀ ಜಯದೇವ ಲೀಲೆ’ ಪ್ರವಚನ ನಡೆಸಿಕೊಟ್ಟರು.
ಶ್ರೀ ಬಸವ ಕಲಾಲೋಕದ ಅರುಣ್ ಮತ್ತು ಸಂಗಡಿಗರು ವಚನಗೀತೆ ಹಾಡಿದರು. ಶಿಕ್ಷಕಿ ಬಿ.ಜಿ. ಪುಷ್ಪ ಸ್ವಾಗತಿಸಿದರು. ಮಹಾನಗರ ಪಾಲಿಕೆ ಉಪ ಮಹಾಪೌರರಾದ ಶ್ರೀಮತಿ ಶಿಲ್ಪಾ ಜಯಪ್ರಕಾಶ್ ಅವರು ಜಯದೇವ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಜಿ.ಸಿ. ಬಸವರಾಜ್, ಜಯಪ್ರಕಾಶ್ ಉಪಸ್ಥಿತರಿದ್ದರು.