ಸಮಸ್ಯೆ ಆಲಿಸದ ಜನಪ್ರತಿನಿಧಿಗಳು : ಹಿರಿಯ ನಾಗರಿಕರ ಅಸಮಾಧಾನ

ದಾವಣಗೆರೆ, ಅ. 1- ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಗೆ ಜನಪ್ರತಿನಿಧಿಗಳು ಗೈರಾಗಿದ್ದು ಹಿರಿಯ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ನಗರದ ಹಿರೇಮಠದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ ಹಿರಿಯ ನಾಗರಿಕರ ಸಂಘ ಹಾಗೂ ಹಲವು ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ದಿನಾಚರಣೆ ಆಚರಿಸಲಾಗಿತ್ತು.

ಹಿರಿಯ ನಾಗರಿಕರ ಜೊತೆ ಕನಿಷ್ಠ ಐದು – ಹತ್ತು ನಿಮಿಷಗಳ ಕಾಲವಾದರೂ ಕಳೆಯಲು ಜನಪ್ರತಿನಿಧಿಗಳು ಆಗಮಿಸಿಲ್ಲ. ಕಾರ್ಯಕ್ರಮಕ್ಕೆ ಬರುವುದು ಅವರ ಕರ್ತವ್ಯವಲ್ಲವೇ? ಹಿರಿಯ ನಾಗರಿಕರು ಯಾರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು? ಎಂಬ ಪ್ರಶ್ನೆಗಳನ್ನು ಸಭೆಯಲ್ಲಿ ಮುಂದಿಡಲಾಯಿತು.

ಈ ಬಗ್ಗೆ ಮಾತನಾಡಿದ ಜಿಲ್ಲಾ ಹಿರಿಯ ನಾಗರಿಕರ ಸಂಘದ ಗೌರವ ಕಾರ್ಯದರ್ಶಿ ಎಸ್. ಗುರುಮೂರ್ತಿ, ಬಹುತೇಕ ಜನಪ್ರತಿನಿಧಿಗಳು ಹಿರಿಯ ನಾಗರಿಕರೇ. ಇಷ್ಟಾದರೂ ಅವರು ಕಾರ್ಯಕ್ರಮಕ್ಕೆ ಬಂದಿಲ್ಲ. ಹೀಗಿರುವಾಗ ಮುಂದಿನ ಸಭೆಗಳಲ್ಲಿ ನಾವು ಭಾಗವಹಿಸಬೇಕೇ? ಎಂಬ ಪ್ರಶ್ನೆ ಬರುತ್ತಿದೆ ಎಂದರು.

ಸಂಘದ ಅಧ್ಯಕ್ಷ ಎಸ್.ಟಿ. ಕುಸುಮಶ್ರೇಷ್ಠಿ ಮಾತನಾಡಿ, ಬೇರೆ ಕಾರ್ಯಕ್ರಮಗಳು ಇರುವ ಕಾರಣಕ್ಕಾಗಿ ಬರಲು ಸಾಧ್ಯವಾಗದು ಎಂದು ಜನಪ್ರತಿನಿಧಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಶೇ.30ರಷ್ಟು ಹಿರಿಯ ನಾಗರಿಕರಿದ್ದಾರೆ. ರಾಜಕಾರಣಿಗಳಿಗೆ ಹಿರಿಯ ನಾಗರಿಕರ ಆಶೀರ್ವಾದ ಬೇಕಾಗಿದೆ. ಇಷ್ಟಾದರೂ ಕಡೆಗಣಿಸಿರುವ ಬಗ್ಗೆ ವಿಷಾದವಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಹಿರಿಯ ನಾಗರಿಕರು ಕುಟುಂಬದಲ್ಲಿ ಕಲಹಗಳ ಬಗ್ಗೆ ಗಮನ ಕೊಡದೆ ನಿಮ್ಮ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಬೇಕು.  ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಗಾಗಿ ನೀವು ಸ್ಪಾರ್ಥಿಗಳಾಗಬೇಕು. ಆಗ ಮಾತ್ರ ಸಂತೋಷ ಸಾಧ್ಯ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಆನಂದ್, ಸುಶಿಕ್ಷಿತರೇ ವೃದ್ಧ ತಂದೆ – ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಿರುವುದು ವಿಷಾದಕರ. ಹಿರಿಯ ನಾಗರಿಕರನ್ನು ಆದರದಿಂದ ಕಾಣುವ ರೀತಿ ಸಮಾಜ ಬದಲಾಗಬೇಕಿದೆ. ಅವರಿಗೆ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಕಲ್ಪಿಸಬೇಕಿದೆ ಎಂದರು.

ಹಿರಿಯ ನಾಗರಿಕರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಿ.ಎಸ್.ಶಶಿಧರ್ ಹಾಗೂ ಪರಿಸರ ಪ್ರೇಮಿ ಬಿ.ಸೋಮಶೇಖರ ಗೌಡ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ಮತ್ತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿ ಡಾ.ಕೆ.ಕೆ.ಪ್ರಕಾಶ್ ಉಪಸ್ಥಿತರಿದ್ದರು.

error: Content is protected !!