ದಾವಣಗೆರೆ, ಅ.1- ಶಿಕ್ಷಕರು ನಿರಂತರ ಅಧ್ಯಯನಶೀಲರಾದಾಗ ಮಾತ್ರ ವಿದ್ಯಾರ್ಥಿಗಳಿಗೆ ಪರಿಣಾಮ ಕಾರಿ ಬೋಧನೆ ಮಾಡಲು ಸಾಧ್ಯವಿದೆ ಎಂದು ಉತ್ತರ ವಲಯ ಕ್ಷೇತ್ರ ಶಿಕ್ಷಣಾ ಧಿಕಾರಿ ಜಿ. ಕೊಟ್ರೇಶ್ ಹೇಳಿದರು.
ನಗರದ ಆರ್ವಿಜಿಕೆ ಪ್ರೌಢ ಶಾಲಾ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು, ದಾವಣಗೆರೆ ಉತ್ತರ ವಲಯದ ವತಿಯಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬದಲಾದ ತಂತ್ರಜ್ಞಾನ ಹಾಗೂ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರು ಹೊಂದಿಕೊಳ್ಳುವ ಅಗತ್ಯವಿದೆ. ಪ್ರಸ್ತುತ ವಿದ್ಯಮಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಮೂಲಕ ಮಾದರಿ ವಿದ್ಯಾರ್ಥಿಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ ಎಂದರು.
ಹಿಂದೆ ಗುರುಕುಲ ಪದ್ಧತಿ ಜಾರಿಯಲ್ಲಿತ್ತು. ವಸತಿಯುತ ಶಿಕ್ಷಣ, ಸಾರ್ವತ್ರಿಕ ನಂತರ ಕಡ್ಡಾಯ ಪ್ರಾಥಮಿಕ ಶಿಕ್ಷಣ ಪದ್ಧತಿ ಜಾರಿಗೆ ತರಲಾಯಿತು. ಮನುಕುಲದ ಅಭಿವೃದ್ಧಿ ಹಾಗೂ ಮನೋವಿಕಾಸದಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ ಎಂದರು.
ಶಿಕ್ಷಕರು ಶೈಕ್ಷಣಿಕ ಜವಾಬ್ದಾರಿಯನ್ನು ಅರಿತು ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ತನ್ನ ವೃತ್ತಿಯನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು. ನಾಗರಿಕ ಸಮಾಜ ನಿರ್ಮಿಸುವಲ್ಲಿ ಶಿಕ್ಷಕನ ಕರ್ತವ್ಯ ಹಾಗೂ ಹೊಣೆಗಾರಿಕೆ ಅದ್ವಿತೀಯವಾದುದು. ಶಿಕ್ಷಕರು ಮನುಕುಲದ ನಂದಾದೀಪ ಎಂದು ಬಣ್ಣಿಸಿದರು.
ಉತ್ತರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಕಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಜಗನ್ನಾಥ ನಾಡಿಗೇರ್ ಉಪನ್ಯಾಸ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಜಿ. ಸುರೇಂದ್ರನಾಯ್ಕ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಕೆ.ಜಿ. ಶಿವಶಂಕರ್, ಎಸ್.ಕೆ.ಪಿ. ವಿದ್ಯಾಪೀಠದ ಗೌರವ ಕಾರ್ಯದರ್ಶಿ ಕೆ.ಎನ್. ಅನಂತರಾಮ ಶ್ರೇಷ್ಠಿ, ಆರ್ವಿಜಿಕೆ ಪ್ರೌಢಶಾಲೆಯ ಛೇರ್ಮನ್ ಆರ್.ಜಿ. ನಾಗೇಂದ್ರ ಪ್ರಕಾಶ್, ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ಶಿವಕುಮಾರ್, ಸಂಘದ ಪದಾಧಿಕಾರಿಗಳಾದ ಮಡಿವಾಳ, ಅಜೇಯಕುಮಾರ್, ಜಿ.ಕೆ. ನಾಗರಾಜ್, ವೈ.ಎಲ್. ಶ್ರೀನಿವಾಸ ಶೆಟ್ಟಿ, ಎಂ. ಗುರುಸಿದ್ಧಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.