ದರೋಡೆ ಪ್ರಕರಣ ಭೇದಿಸಿದ ಪೊಲೀಸರು

ಕೊಟ್ಟೂರು, ಏ.19- ಕಳೆದ ಭಾನುವಾರ ರಾತ್ರಿಯಷ್ಟೇ ಪಟ್ಟಣದ ಬಸವೇಶ್ವರ ನಗರದ ಮಲ್ಲೇಶ್‌ ಹುಲ್ಮನಿ ಮನೆಗೆ ನುಗ್ಗಿ, ಮಚ್ಚು ತೋರಿಸಿ 30 ಲಕ್ಷ ರೂ.ಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ವಾರದೊಳಗೆ ಕೊಟ್ಟೂರು ಪೊಲೀಸರು ಪತ್ತೆ ಹಚ್ಚಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರ ಸಂಜೆ ಇಲ್ಲಿನ ಸಿಪಿಐ ಕಚೇರಿಯಲ್ಲಿ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲ್ಲಾ ಅದೆವತ್‌ ಅವರು, ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿರಾವ್‌ ನೇತೃತ್ವದಲ್ಲಿ ಕೊಟ್ಟೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಹೆಚ್‌. ದೊಡ್ಡಪ್ಪ, ಸಬ್‌ಇನ್‌ಸ್ಪೆಕ್ಟರ್‌ ಹೆಚ್‌. ನಾಗಪ್ಪ, ತನಿಖಾ ತಂಡದಲ್ಲಿದ್ದ ಎಎಸ್‌ಐಗಳಾದ ಸೈಯದ್‌ ಸೈಫುಲ್ಲಾ, ಸಿ. ಗಂಗಾಧರ, ಮುಖ್ಯ ಪೇದೆಗಳಾದ ಆರ್‌. ಬಸವರಾಜ್‌, ವಿ. ಮಂಜಪ್ಪ, ಹೆಚ್‌. ಬಸವರಾಜ್‌, ಪೇದೆಗಳಾದ ರೇವಣಾರಾಧ್ಯ, ಟಿ. ರಾಜೇಂದ್ರಪ್ರಸಾದ್‌, ಎಂ.ವಿ. ಯರಿಸ್ವಾಮಿ, ಅನಿಲ್‌, ಬಸವರಾಜ್, ಬಿ. ಮೂಗಣ್ಣ, ಮಾಲತೇಶ್‌ ಮತ್ತಿತರರು ಸೂಕ್ಷ್ವಾದ ಈ ಪ್ರಕರಣವನ್ನು ಪತ್ತೆ ಹಚ್ಚಿ ಅತ್ಯುತ್ತಮ ಕೆಲಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.

ಏ. 11 ರಂದು ಪಟ್ಟಣದ ಮಲ್ಲೇಶ್‌ ಹುಲ್ಮನಿ ಅವರ ಮನೆಗೆ ನುಗ್ಗಿದ 6-7 ಜನರ ದರೋಡೆಕೋರರ ತಂಡ ಮಚ್ಚು ಮತ್ತು ಲಾಂಗ್‌ಗಳನ್ನು ತೋರಿಸಿ ಮನೆಯೊಳಗಿದ್ದ 30 ಲಕ್ಷ ರೂ. ನಗದು ಹಣವನ್ನು ದರೋಡೆ ಮಾಡಿಕೊಂಡು ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅಂದಿನಿಂದಲೇ ಪ್ರಕರಣದ ತನಿಖೆ ಕೈಗೊಂಡ ಪೊಲೀಸ್‌ ತಂಡ, ಕೊಟ್ಟೂರು ಪಟ್ಟಣದಲ್ಲಿನ ಸಿ.ಸಿ. ಕ್ಯಾಮರಾ ಮತ್ತಿತರರುಗಳಿಂದ ಸಂಗ್ರಹಿಸಿದ ಮಾಹಿತಿ ಮೇರೆಗೆ ಬೆಂಗಳೂರಿಗೆ ತೆರಳಿ ದರೋಡೆಕೋರರ ತಂಡವನ್ನು ಬೆಂಗಳೂರು ಪೊಲೀಸರ ಸಹಕಾರದೊಂದಿಗೆ ಪತ್ತೆ ಹಚ್ಚಿ 5 ಲಕ್ಷ 17 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ಸಂಬಂಧ ಒಂದು ಓಮಿನಿ ವ್ಯಾನು, ಒಂದು ಇನ್ನೋವಾ ಕಾರು ಹಾಗೂ ಒಂದು ಇಂಡಿಕ ಕಾರಗಳನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!