ದಾವಣಗೆರೆ, ಸೆ. 30- ಪ್ರಗತಿಯ ಮುಂಚೂಣಿಯಲ್ಲಿರುವ ಹರ ವಿವಿಧೊದ್ದೇಶ ಸೌಹಾರ್ದ ಸಹಕಾರಿ ನಿಯಮಿತವು 2020-21ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ರೂ 40.17.ಲಕ್ಷಗಳ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 10ರಷ್ಟು ಷೇರು ಲಾಭಾಂಶ ಘೋಷಣೆ ಮಾಡಿದೆ ಎಂದು ಸಹಕಾರಿಯ ಅಧ್ಯಕ್ಷ ಬಿ.ಸಿ.ಉಮಾಪತಿ ಹರ್ಷ ವ್ಯಕ್ತಪಡಿಸಿದರು.
ನಗರದ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಮಠದಲ್ಲಿ ಮೊನ್ನೆ ಜರುಗಿದ ಸಹಕಾರಿಯ 9ನೇ ಸಾಮಾನ್ಯ ಸಭೆ ಉದ್ಘಾಟಿಸಿ ಮಾತ ನಾಡಿದ ಅವರು, ಕೋವಿಡ್ 19 ಪರಿಸ್ಥಿತಿಯಲ್ಲೂ ಸಹ ಕಾರಿಯ ಠೇವಣಿ ಸಂಗ್ರಹ ಹಾಗೂ ಸಾಲ ವಸೂಲಾತಿಯಲ್ಲಿ ಗಮನಾರ್ಹ ಪ್ರಗತಿ ಕಂಡಿದ್ದು ಇದಕ್ಕೆ ಸದಸ್ಯರ ಸಹಕಾರವೇ ಪ್ರಮುಖ ಕಾರಣ ಎಂದು ಹೇಳಿದರು.
ಷೇರು ಸಂಗ್ರಹಣೆಯಲ್ಲಿಯೂ ಗಮನಾರ್ಹ ಪ್ರಗತಿ ಕಂಡಿದ್ದು, ಸಹಕಾರಿಯಲ್ಲಿ ಕಳೆದ ಸಾಲಿನಲ್ಲಿ 1.01 ಲಕ್ಷ ರೂ. ಷೇರು ಬಂಡವಾಳವಿದ್ದು , ಆರ್ಥಿಕ ವರ್ಷಾಂತ್ಯಕ್ಕೆ 1.13 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. ಕಳೆದ ಸಾಲಿನಲ್ಲಿ 8.49 ಕೋಟಿ ರೂ. ಠೇವಣಿ ಸಂಗ್ರಹವಾಗಿದ್ದು, ಆರ್ಥಿಕ ವರ್ಷಾಂತ್ಯಕ್ಕೆ 10.01 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ. ಪ್ರಸ್ತುತ 7.50 ಕೋಟಿ ರೂ.ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
ಸಹಕಾರಿಯ ನಿರ್ದೇಶಕ ಬಾದಾಮಿ ಚಂದ್ರಶೇಖರ್, ಸ್ವಾಗತಿಸಿದರು. ಶ್ರೀಮತಿ ವಿನುತಾ ಎಂ.ಮಾಗಾನಹಳ್ಳಿ ಸಾಮಾನ್ಯ ಸಭೆಯ ಆಹ್ವಾನ ಪತ್ರಿಕೆ ಮಂಡಿಸಿದರು. ನಿರ್ದೇಶಕ ಅಂದನೂರು ಮುರುಗೇಶಪ್ಪ ಕಳೆದ ಸಾಲಿನ ಸಾಮಾನ್ಯ ಸಭೆಯ ನಡಾವಳಿಗಳನ್ನು ಓದಿ ದಾಖಲು ಮಾಡಿದರು. ನಿರ್ದೇಶಕರಾದ ಶ್ರೀಮತಿ ಗೀತಾ ಪ್ರಶಾಂತ್ 2020-21ನೇ ಸಾಲಿನ ಆಡಳಿತ ವರದಿ ಮಂಡಿಸಿದರು. ಕಾರ್ಯದರ್ಶಿ ಕೆ. ಚನ್ನಮಲ್ಲಿಕಾರ್ಜುನ್, ಲಾಭ-ನಷ್ಟ ಮತ್ತು ಅಢಾವೆ ಪತ್ರ ಹಾಗೂ ಲೆಕ್ಕಪರಿಶೋಧನಾ ವರದಿಯ ಸೂಚನೆಗಳಿಗೆ ಆಡಳಿತ ಮಂಡಳಿಯು ಸಲ್ಲಿಸಿದ ಪಾಲನಾ ವರದಿಯನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು. ಉಪಾಧ್ಯಕ್ಷ ಎಂ.ದೊಡ್ಡಪ್ಪ ಲಾಭ ವಿಲೇವಾರಿಯನ್ನು ಬಗ್ಗೆ ಸಭೆಯ ಮುಂದೆ ಮಂಡಿಸಿ ಶೇ.10ರಷ್ಟು ಲಾಭಾಂಶ ಘೋಷಿಸಿದರು.
ವಿಶೇಷ ಆಹ್ವಾನಿತರಾದ ಚೈತನ್ಯಕುಮಾರ್ ಬಿ.ಸಿ., ಮುಂಗಡ ಪತ್ರ ಮಂಡಿಸಿದರು. ಹಾಲೇಶ ಅಂಗಡಿ, ವಾರ್ಷಿಕ ಕಾರ್ಯಚರಣೆ ಯೋಜನೆ ಮಂಡಿಸಿದರು. ಪಿ.ವಿ. ರವಿಕುಮಾರ್, ಲೆಕ್ಕಪರಿಶೋಧಕರ ನೇಮಕಾತಿಗೆ ಅನುಮೋದನೆ ಪಡೆದುಕೊಂಡರು. ಜಿ.ವಿ. ಸುಂಕದ್, ಸಹಕಾರ ವರ್ಷದಲ್ಲಿ ಸದಸ್ಯರನ್ನು ಸೇರಿಸಿಕೊಂಡ ಬಗ್ಗೆ ಸಂಕ್ಷಿಪ್ತ ವರದಿ ಮಂಡಿಸಿದರು.
ಎಸ್.ಎಸ್.ಎಲ್.ಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ 8 ವಿದ್ಯಾರ್ಥಿಗಳು, 17 ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ತಲಾ ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಕಾಲಕ್ಕೆ ಸಾಲ ಮುರುಪಾವತಿ ಮಾಡಿದ ಸದಸ್ಯರನ್ನು ಸನ್ಮಾನಿಸಲಾಯಿತು.
ನಿರ್ದೇಶಕರುಗಳಾದ ಮಲ್ಲನಗೌಡ ಎಸ್., ಹೆಚ್.ಎಸ್.ಅವ್ವಣ್ಣಪ್ಪ, ರಮೇಶ ಡಿ., ಲೆಕ್ಕಪರಿಶೋಧಕ ಕೆ.ಎಸ್. ಮುರುಗೇಂದ್ರಪ್ಪ ಉಪಸ್ಥಿತರಿದ್ದರು. ಹಾಲೇಶ ಅಂಗಡಿ ವಂದಿಸಿದರು. ಅಂಗಡಿ ಸಂಗಮೇಶ್ ಹಾಗೂ ಕಲಿವೀರ ಕಳ್ಳಿಮನಿ, ಬಿ.ಬಸವರಾಜ ಉಚ್ಚಂಗಿದುರ್ಗ ಕಾರ್ಯಕ್ರಮ ನಿರೂಪಿಸಿದರು.