ಚಿತ್ರದುರ್ಗ, ಫೆ. 15- ತಾಲ್ಲೂಕಿನ ಸಿರಿಗೆರೆ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಆದಿಕವಿ, ಬೆಂಗಳೂರಿನ ಸಂಸ್ಕೃತ ವಿದ್ವಾಂಸ ಡಾ. ಶಂಕರ ರಾಜಾರಾಮನ್ ಅವರನ್ನು ವಾಗ್ದೇವಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ತಿಳಿಸಿದರು.
ಪರಿಷತ್ನಿಂದ ಸಮಾಜದಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಯರಿಗೆ ಪ್ರಶಸ್ತಿ ನೀಡುತ್ತಾ ಬರಲಾಗಿದೆ. ಧಾರ್ಮಿಕ, ಸಾಹಿತ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಕಾರಣಕ್ಕೆ ಶ್ರೀಗಳನ್ನು ದೇಶ, ವಿದೇಶಗಳಲ್ಲೂ ಛಾಪು ಮೂಡಿಸಿರುವ ಉದ್ದೇಶಕ್ಕೆ ರಾಜಾರಾಮನ್ಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರಘುನಂದನ್ ಭಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ತರಳಬಾಳು ಬೃಹನ್ಮಠದ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಫೆ. 21ರಂದು ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ಅಧ್ಯಕ್ಷತೆ ವಹಿಸುವರು. ಉತ್ತರದ ಧರ್ಮ ಜಾಗರಣ ಪ್ರಾಂತ ಸಹ ಸಂಯೋಜಕ ಡಾ. ಹನುಮಂತ ಮಳಲಿ, ಪರಿಷತ್ ರಾಜ್ಯ ಅಧ್ಯಕ್ಷ ಪ್ರೊ. ಪ್ರೇಮಶೇಖರ, ಹಿರಿಯ ಉಪಾಧ್ಯಕ್ಷ ಬಾಗಲಕೋಟೆಯ ಎಸ್.ಜಿ. ಕೋಟಿ, ಇಸ್ರೋ ಮಾಜಿ ವಿಜ್ಞಾನಿ ಕೆ. ಹರೀಶ್, ಉದ್ಯಮಿಗಳಾದ ವೀಣಾ ಜಯರಾಮ್, ಎಸ್. ಜಯರಾಮ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ನಿಂದ ಈಗಾಗಲೇ ಎರಡು ಪ್ರಾಂತ ಸಮ್ಮೇಳನ ನಡೆಸಲಾಗಿದೆ. ಮೂರನೇ ಸಮ್ಮೇಳನವನ್ನು ಡಿಸೆಂಬರ್ನಲ್ಲಿ ಉಜಿರೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. 5 ವರ್ಷಗಳಿಂದ ಪರಿಷತ್ ಅನ್ನು ರಾಜ್ಯದಾದ್ಯಂತ ಬಲಿಷ್ಠವಾಗಿ ಸಂಘಟಿಸಲಾಗುತ್ತಿದೆ ಎಂದು ಭಟ್ ಹೇಳಿದರು.
ಪರಿಷತ್ನ ಕಾರ್ಯಕರ್ತರು ರಾಜ್ಯದ ಬಹುತೇಕ ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದು ತಿಂಗಳ ಕಾಲ ನಿರ್ಗತಿಕರು, ಕಷ್ಟದಲ್ಲಿರುವವರಿಗೆ ಆಹಾರ ಧಾನ್ಯ, ವಿವಿಧೆಡೆ ಹಸುಗಳಿಗೆ ಮೇವು ಒದಗಿಸುವಲ್ಲೂ ಸಫಲರಾಗಿದ್ದಾರೆ ಎಂದು ರಘುನಂದನ್ ಭಟ್ ತಿಳಿಸಿದರು.
ಸಂಸ್ಕಾರ ಭಾರತೀಯ ಡಾ. ಕೆ.ರಾಜೀವಲೋಚನ, ಪರಿಷತ್ ಸಂಘಟಕ ಡಿ.ಓ. ಮುರಾರ್ಜಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.