ಹರಪನಹಳ್ಳಿ ತಾಲ್ಲೂಕು ಕಾಂಗ್ರೆಸ್ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವ ಯು.ಟಿ. ಖಾದರ್
ಹರಪನಹಳ್ಳಿ, ಜು.8- ಬಿಜೆಪಿ ಸರ್ಕಾರ ಎಲ್ಲ ರಂಗದಲ್ಲಿ ಖಾಸಗೀಕರಣ ಮಾಡುವ ಮೂಲಕ ಹಣ ಲೂಟಿ ಮಾಡುತ್ತಿದ್ದು, ಯುವ ಜನತೆಗೆ ಕೆಲಸವಿಲ್ಲದೆ ನಿರುದ್ಯೋಗದ ಸಮಸ್ಯೆ ತಾಂಡ ವಾಡುತ್ತಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಪಟ್ಟಣದ ಬೈಪಾಸ್ ರಸ್ತೆ ಯ ಬಣಗೇರಿ ಬಳಿ ತಾಲ್ಲೂಕು ಕಾಂಗ್ರೆಸ್ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿಯವರಿಗೆ ಪ್ರಚಾರದ ಹುಚ್ಚು ಹಿಡಿದಿದೆ. ಉತ್ತಮ ಕೆಲಸ ಮಾಡಲು ಅವರಿಗಾಗದು. ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ಹಣ ಲೂಟಿ ಮಾಡುವ ಶೇವ್ ಇಂಡಿಯಾ ಸರ್ಕಾರವಾಗಿದೆ. ಜನರಿಗೆ ಉದ್ದೇಶ ಪೂರ್ವಕವಾಗಿ ಮೋಸ ಮಾಡುವ ಮೂಲಕ ಜನ ಸಾಮಾನ್ಯರ ಬದುಕಿನ ಮೇಲೆ ಆಟವಾಡುತ್ತಿದೆ ಎಂದು ದೂರಿದರು.
ಬಡವರಿಗೆ ಈವರೆಗೂ ಒಂದೂ ನಿವೇಶನ ನೀಡಿಲ್ಲ. ಮಾನವೀಯತೆ ಇಲ್ಲದ, ಕಣ್ಣಿಲ್ಲದ ಬಿಜೆಪಿ ಸರ್ಕಾರಕ್ಕೆ ಲಸಿಕೆ ಸೇರಿದಂತೆ, ಉತ್ತಮ ಕೆಲಸ ಮಾಡುವುದಕ್ಕೆ ಕೋರ್ಟ್ ಆದೇಶ ನೀಡಬೇಕಿದೆ. ಸದ್ಯಕ್ಕೆ ಕೋವಿಡ್ಗಿಂತ ಬಿಜೆಪಿ ಸರ್ಕಾರಕ್ಕೇ ಹೆಚ್ಚು ಚಿಕಿತ್ಸೆ ನೀಡಬೇಕು. ಸಚಿವರ ಮಧ್ಯೆ ಹೊಂದಾಣಿಕೆ ಇಲ್ಲ. ಜನರ ಸಮಸ್ಯೆ ಬಗೆಹರಿಸುವ ಬದಲು ಇವರ ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಜನರಿಗೆ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಿಳಿಸುವ ಕೆಲಸ ಮಾಡಬೇಕು ಎಂದರು.
ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿದೆ. ಬಹುಪಾಲು ರೈತರು ಯಂತ್ರಗಳ ಮೇಲೆ ಅವಲಂಬನೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಏರಿಕೆಯಿಂದ ಕಂಗಾಲಾಗಿದ್ದಾರೆ. ಈ ಹಿಂದೆ ಹೊಟ್ಟೆ ಪಾಡಿಗಾಗಿ ಕೂಲಿ ಮಾಡುತ್ತಿದ್ದ ಜನ, ಈಗ ಪೆಟ್ರೋಲಿಗಾಗಿ ಕೂಲಿ ಮಾಡುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಸಿರಾಜ್ ಶೇಖ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಮಂಜುನಾಥ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಶಾಲತಾ, ಡಾ. ಉಮೇಶ್ ಬಾಬು, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಟಿ. ಭರತ್, ಕಾಂಗ್ರೆಸ್ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸದಸ್ಯ ಶಶಿಧರ ಪೂಜಾರ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ್ ಹಾಜರಿದ್ದರು.
ಜಿಲ್ಲಾ ಪಂಚಾಯ್ತಿ ಸದಸ್ಯರುಗಳಾದ ಎಚ್.ಬಿ. ಪರಶುರಾಮಪ್ಪ, ಡಾ. ಮಂಜುನಾಥ ಉತ್ತಂಗಿ, ರಾಜ್ಯ ಅಲ್ಪ ಸಂಖ್ಯಾತರ ಘಟಕದ ಸದಸ್ಯ ಬಿ. ನಜೀರ್ ಅಹಮದ್, ಹಡಗಲಿ ಪುರಸಭೆ ಅಧ್ಯಕ್ಷ ವಾರದ ಗೌಸ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮುತ್ತಿಗಿ ಸಾಬಳ್ಳಿ ಜಂಬಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಪ್ರೇಮ್ಕುಮಾರ್ ಗೌಡ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಕಳ್ಳಿ ಹನುಮಂತಪ್ಪ, ಮುಖಂಡರಾದ ಪಿ.ಎಲ್ ಪೋಮ್ಯಾನಾಯ್ಕ, ಎನ್. ಮಜೀದ್, ಯಶವಂತ್ ಗೌಡ, ಪ್ರಕಾಶ ಪಟೇಲ್, ಎಂ. ಅಜ್ಜಣ್ಣ, ಯರಬಳ್ಳಿ ಉಮಾಪತಿ, ಜೋಗಿನ ಭರತೇಶ, ಐಗೋಳ ಚಿದಾನಂದ್, ಆಲದಹಳ್ಳಿ ಷಣ್ಮುಖಪ್ಪ ಇನ್ನಿತರರಿದ್ದರು.