ಯುವ ಕಾಂಗ್ರೆಸ್‌ನಿಂದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧರಿಗೆ ನಮನ

ದಾವಣಗೆರೆ, ಫೆ.15- ಜಮ್ಮು ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರ ಸ್ಮರಣಾರ್ಥ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಮಹಾನಗರ ಪಾಲಿಕೆವರೆಗೆ ಕ್ಯಾಂಡಲ್ ಲೈಟ್ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು.

ಅರುಣ ಸರ್ಕಲ್‌ನಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಭದ್ರತಾ ವೈಫಲ್ಯದಿಂದ ನಮ್ಮ ಯೋಧರ ಜೀವ ಬಲಿ ನೀಡಲಾಯಿತು ಎಂದು ವಿಷಾದಿಸಿದರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು `ಜೈ ಜವಾನ್ ಜೈ ಕಿಸಾನ್’ ಘೋಷಣೆ ಮಾಡಿ ದೇಶಕ್ಕೆ ಸೈನಿಕರ ಮತ್ತು ರೈತರ ಅವಶ್ಯಕತೆಯನ್ನು ಸಾರಿದ್ದರು. 

ಆದರೆ ಈಗಿನ ಮೋದಿ ಸರ್ಕಾರದಲ್ಲಿ ಯೋಧರ ಜೀವಕ್ಕೆ ಬೆಲೆ ಇಲ್ಲ ಹಾಗೂ ರೈತರು ಬೀದಿಯಲ್ಲಿ ಹೋರಾಟ ಮಾಡುತ್ತಿದ್ದರೂ ಅವರ ಬಗ್ಗೆ ಕಾಳಜಿ ಇಲ್ಲ, ರೈತರನ್ನು ಮತ್ತು ಯೋಧರನ್ನು ಮರೆತ ಯಾವುದೇ ಸರ್ಕಾರ ಜನಪರ ಸರ್ಕಾರವಾಗಲು ಸಾಧ್ಯವಿಲ್ಲ ಎಂದು ಸರ್ಕಾರವನ್ನು ಟೀಕಿಸಿದರು.

ಮಹಾನಗರ ಪಾಲಿಕೆ ಮುಂಭಾಗದಲ್ಲಿರುವ ಹುತಾತ್ಮ ಯೋಧರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಮುಗಿಸಲಾಯಿತು.

ಈ ಸಂದರ್ಭದಲ್ಲಿ ಸೈಯ್ಯದ್ ಖಾಲಿದ್, ಮೈನುದ್ದೀನ್, ಮುಜಾಹಿದ್ ಪಾಷಾ, ಶಶಿಧರ್ ಪಾಟೀಲ್, ವಾಜಿದ್, ಓ.ಜಿ. ಕಿರಣ್, ಐಯಾಜ್ ಅಹಮದ್, ಜಫರುಲ್ಲಾ, ರಘು ಧಮನಿ, ನವೀನ ನಲವಡಿ, ಹಬೀಬ್, ಮುಬಾರಕ್, ಖ್ವಾಜಾ ಮೊಯಿನುದ್ದೀನ್, ಸಮೀರ್ ಖಾನ್, ಮೆಹಬೂಬ್ ಭಾಷಾ, ಹರೀಶ್ ಬಸಾಪುರ, ಕಿಸಾನ್ ಕಾಂಗ್ರೆಸ್ ಘಟಕದಿಂದ ಸುರೇಶ್ ಹಾಗು ತಿಪ್ಪೇಶ್,  ಕಾಂಗ್ರೆಸ್ ಕಾರ್ಮಿಕರ  ಘಟಕದಿಂದ ಸುಬಾನುಲ್ಲಾ, ಹರೀಶ್, ಮಾರುತಿ ಮುಂತಾದವರು ಉಪಸ್ಥಿತರಿದ್ದರು.

error: Content is protected !!