ನೂತನ ಕೈಗಾರಿಕಾ ನೀತಿ ಮಾದರಿಯಾಗಿದೆ

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ ಹೆಚ್.ಎಂ. ಶ್ರೀನಿವಾಸ್‌ 

ದಾವಣಗೆರೆ, ಫೆ. 13 – ಉತ್ಪಾದನೆ, ತಂತ್ರಜ್ಞಾನ ಅಳವಡಿಕೆ, ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆ ಹಾಗೂ ರಫ್ತಿಗೆ ಉತ್ತೇಜನಗಳೆಂಬ ನಾಲ್ಕು ವಿಷಯಗಳಿಗೆ ಒತ್ತು ನೀಡಿ ನೂತನ ಕೈಗಾರಿಕಾ ನೀತಿ 2020-25 ರೂಪಿಸಲಾಗಿದ್ದು, ಈ ನೀತಿ ಬೇರೆ ರಾಜ್ಯಗಳಿಗೆ ಮಾದರಿಯಾಗುವಂತಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ ಹೆಚ್.ಎಂ. ಶ್ರೀನಿವಾಸ ತಿಳಿಸಿದ್ದಾರೆ.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ನಗರದ ಓಷಿಯನ್ ಪಾರ್ಕ್‌ನಲ್ಲಿ ಆಯೋಜಿಲಾಗಿದ್ದ ನೂತನ ಕೈಗಾರಿಕಾ ನೀತಿ ಹಾಗೂ ಹೂಡಿಕೆ ಅವಕಾಶಗಳು ಮತ್ತು ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

35 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಇಡೀ ದೇಶದಲ್ಲೇ ಮೊದಲ ಬಾರಿಗೆ ಕೈಗಾರಿಕಾ ನೀತಿ ರೂಪಿಸಲಾಗಿತ್ತು. ನಂತರದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಕೈಗಾರಿಕಾ ನೀತಿ ಪರಿಷ್ಕರಿಸಲಾ ಗುತ್ತಿದೆ. ಪ್ರಸಕ್ತ ಇರುವ ಕೈಗಾರಿಕಾ ನೀತಿ ಕಳೆದ ವರ್ಷ ಆಗಸ್ಟ್ 13ರಿಂದ ಜಾರಿಗೆ ಬಂದಿದ್ದು, 2025ರವರೆಗೆ ಜಾರಿಯಲ್ಲಿರಲಿದೆ ಎಂದರು.

ನೂತನ ನೀತಿಯಲ್ಲಿ ಐದು ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ, 20 ಲಕ್ಷ ಜನರಿಗೆ ಉದ್ಯೋಗಾವಕಾಶ, ಕರ್ನಾಟಕವನ್ನು ದೇಶದಲ್ಲೇ ಮೂರನೇ ಅತಿ ದೊಡ್ಡ ರಫ್ತು ರಾಜ್ಯ ಮಾಡುವುದು, ಶೇ.10ರ ಕೈಗಾರಿಕಾ ಬೆಳವಣಿಗೆ ಮತ್ತು ತಂತ್ರಜ್ಞಾನ – ಅನ್ವೇಷಣೆಗೆ ಪೂರಕ ಪರಿಸರ ನಿರ್ಮಿಸುವ ಗುರಿ ಇದೆ ಎಂದರು.

ಈ ಹಿಂದಿನಂತೆ ಉತ್ಪಾದನೆ ಹಾಗೂ ಸೇವಾ ವಲಯ ಎಂಬ ಭೇದವನ್ನು ತೆಗೆದು ಹಾಕಲಾಗಿದೆ. ಎರಡೂ ವಲಯಗಳನ್ನು ಹೂಡಿಕೆ ಹಾಗೂ ವಾರ್ಷಿಕ ವಹಿವಾಟು ಆಧಾರದ ಮೇಲೆ ಸೂಕ್ಷ್ಮ ಕೈಗಾರಿಕೆ, ಸಣ್ಣ ಕೈಗಾರಿಕೆ ಹಾಗೂ ಮಧ್ಯಮ ಕೈಗಾರಿಕೆಗಳನ್ನು ವಿಭಜಿಸಲಾಗಿದೆ. ನೂತನವಾಗಿ ಈ ಘಟಕಗಳನ್ನು ಸ್ಥಾಪಿಸಿದಾಗ, ವಿಸ್ತರಿಸಿದಾಗ ಹಾಗೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಜೊತೆಗೆ ಕೌಶಲ್ಯ ವೃದ್ಧಿಸುವಾಗ ನೆರವು ದೊರೆಯುತ್ತದೆ ಎಂದು ಶ್ರೀನಿವಾಸ್ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ, ಉಕ್ಕನ್ನು ನೇರವಾಗಿ ಕೈಗಾರಿಕೆಗಳಿಗೆ ಮಾರಲು ಪ್ರತಿ ಜಿಲ್ಲೆಯಲ್ಲೂ ಡಿಪೋ ಸ್ಥಾಪಿಸಬೇಕು ಎಂಬ ಪ್ರಸ್ತಾವನೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಮ್ಮತಿಸಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಡಿಪೋ ಸ್ಥಾಪನೆಯಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಡಿಪೋ ಸ್ಥಾಪನೆಯಾಗಬೇಕು. ಇದರಿಂದ ಕಡಿಮೆ ಬೆಲೆಗೆ ಉಕ್ಕು ಸಿಗಲಿದೆ ಎಂದರು.

ಹೊಸ ಕೈಗಾರಿಕಾ ನೀತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆಯಾದರೂ, ಹಲವಾರು ಇಲಾಖೆಗಳು ಈ ಕುರಿತು ಅಧಿಸೂಚನೆ ಹೊರಡಿಸಿಲ್ಲ. ಸರ್ಕಾರ ಅಧಿಸೂಚನೆಗಾಗಿ ಇಲಾಖೆಗಳಿಗೆ ಸೂಚನೆ ನೀಡುವ ಮೂಲಕ ಕೈಗಾರಿಗಳಿಗೆ ನೆರವು ತಲುಪಿಸಬೇಕು ಎಂದವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ್, ಜವಳಿ ಇಲಾಖೆ ಉಪ ನಿರ್ದೇಶಕ ಸುರೇಶ್ ಎನ್. ತಡಕನಹಳ್ಳಿ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಎನ್.ಆರ್. ಜಗದೀಶ್, ಜಂಟಿ ಕಾರ್ಯದರ್ಶಿ – ನಗರ ಪಿ.ಎನ್. ಜೈಕುಮಾರ್, ಜಂಟಿ ಕಾರ್ಯದರ್ಶಿ – ಗ್ರಾಮೀಣ ಚನ್ನಬಸಪ್ಪ ಹೊಂಡದಕಟ್ಟಿ, ಕಾಸಿಯಾ ಪ್ಯಾನಲ್ ಛೇರ್ಮನ್ ಮಂಜುನಾಥ್ ಜಿ. ಲಿಂಗಾಯತ್, ಕಾಸಿಯಾ ಪ್ಯಾನಲ್ ಕೋ ಛೇರ್ಮನ್ ಶೇಷಾಚಲ ದುಗ್ಗಾವತ್ತಿ ಉಪಸ್ಥಿತರಿದ್ದರು.

error: Content is protected !!