ಬವಣೆಗಳನ್ನು ತೀರಿಸಲಾರದಷ್ಟು ಅನಾನುಕೂಲತೆಗಳು ರೈತರಿಗಿದೆ

ದಾವಣಗೆರೆ, ಜು.6- ದೇಶದಲ್ಲಿ ಎಲ್ಲಾ ರಂಗಗಳಿಗೆ ಅನುದಾನ ಒದಗಿಸುವ ಮೂಲಕ ಅಭಿವೃದ್ದಿಗೆ ತಾರ್ಕಿಕ ಅಂತ್ಯ ಹಾಡಬಹುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಅಣಬೇರು ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ರೈತರ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೃಷಿ ವರ್ಗಕ್ಕೆ ಎಷ್ಟೇ ಸಾವಿರ ಕೋಟಿ ಅನುದಾನ ನೀಡಿದರೂ ಅವರ ಬವಣೆ ತೀರಿಸ ಲಾರದಷ್ಟು ಅನಾನುಕೂಲತೆ ಯನ್ನು ರೈತಾಪಿ ವರ್ಗದವರು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೂರಾರು ಯೋಜನೆಗಳು ಜಾರಿಗೆ ತರುವ ಮೂಲಕ ಅವರ ಬವಣೆಯನ್ನು ನೀಗಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು. ಅಧಿಕಾರಿಗಳು ಯೋಜನೆಯ ಮಾಹಿ ತಿಯನ್ನು ರೈತಾಪಿ ವರ್ಗದವರಿಗೆ ನೀಡಿ ರೈತರನ್ನು ಸ್ವಾವಲಂಬಿಗಳಾಗಿ ಜೊತೆಗೆ ಯೋಜನೆಯ ಫಲಾನುಭವಿಗಳಾಗಿ ಮಾಡುವ ಜವಾಬ್ದಾರಿ ನಮ್ಮ, ನಿಮ್ಮೆಲ್ಲರ ಮೇಲಿದೆ. ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮದ ರೈತ ಶಿವಣ್ಣ ಮಾತನಾಡಿ, ನಮ್ಮ ಭಾಗದಲ್ಲಿ ನಾಲೆ ಆಧುನೀಕರಣ ಆದ ದಿನದಿಂದ ನಾಲೆಯಲ್ಲಿ ತುಂಬಿರುವ ಹೂಳು ಮತ್ತು ಜಂಗಲ್ ಸ್ವಚ್ಛಗೊಳಿಸದೆ ಹಾಗೂ ಜಾಲಿ ಗಿಡಗಳು ಬೆಳೆದಿರುವ ಕಾರಣ ತೊಂದರೆಯಾಗಿದೆ. ಈ ಸಂಬಂಧ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು, ಜೊತೆಗೆ ಈ ಭಾಗದಲ್ಲಿ ಭದ್ರಾ ಕಾಡಾ ಪ್ರಾಧಿಕಾರದಿಂದ ಅಚ್ಚುಕಟ್ಟು ರಸ್ತೆಗಳು, ಹೊಲಗಾಲುವೆ ಅಭಿವೃದ್ದಿ ಆಗಬೇಕು ಇದಕ್ಕೆ ಮುಂದಿನ ದಿನಗಳಲ್ಲಿ ಅನುದಾನ ನೀಡುವಂತೆ ಕೋರಿದರು.

ಈ ಸಮಯದಲ್ಲಿ ಸ್ಥಳದಲ್ಲಿದ್ದ ಪಿಡಿಓ ಅವರಿಗೆ  ನರೇಗಾ ಯೋಜನೆಯಲ್ಲಿ ನೂರಾರು ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದನ್ನು ಬಳಸಿಕೊಂಡು ನಾಲೆಗಳನ್ನು ಸ್ವಚ್ಛ ಮಾಡಿಸುವಂತೆ ಸೂಚನೆ ನೀಡಲಾಯಿತು. ಇದಕ್ಕೆ ಉತ್ತರಿಸಿದ ಪಿಡಿಒ, ನರೇಗಾ ಕೆಲಸ ಮಾಡಲು ಕಾರ್ಮಿಕರು ಸಿಗುವುದಿಲ್ಲ ಎಂದಾಗ ಊರಿನಲ್ಲಿ ಹಲಗೆ ಹೊಡೆಸುವಂತೆ ಹೇಳಿದರು. ಹೀಗೆ ಮಾಡುವುದರಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ಜೊತೆಗೆ ಅವರಿಗೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಹಾಗೂ ಗ್ರಾಮದಲ್ಲಿ ಜಮೀನಿನ ಕೆಲಸ ಕಡಿಮೆ ಇರುವ ಈ ಬಿಡುವಿನ ಅವಧಿಯಲ್ಲಿ ಅವರಿಗೆ ಕೆಲಸ ನೀಡಿದಂತಾಗುತ್ತದೆ ಎಂದು ಸಲಹೆ ನೀಡದರು.  

ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಬಳ್ಳೇಕೆರೆ ಸಂತೋಷ್, ಕಾಡಾ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣಸ್ವಾಮಿ, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!