ಕಾಂಗ್ರೆಸ್‌ ಮುಖಂಡರು ಹರೀಶ್‌ ತರಹ ಸಣ್ಣತನದ ವ್ಯಕ್ತಿಗಳಲ್ಲ

ಬಿ.ಪಿ. ಹರೀಶ್ ಆರೋಪಕ್ಕೆ ಶಾಸಕ ರಾಮಪ್ಪ ತಿರುಗೇಟು

ಹರಿಹರ, ಜು.6- ದಾವಣಗೆರೆ ಕಾಂಗ್ರೆಸ್ ಪಕ್ಷದ ಮುಖಂಡರು ನನಗೆ ಕರೆಸಿ ಗರಂ  ಆಗಿ ನೀನು ಹೀಗೆ ಇರು ಎಂದು ಹೇಳಲು ಅವರು ಮಾಜಿ ಶಾಸಕರ ತರಹ ಸಣ್ಣತನದ ವ್ಯಕ್ತಿಗಳಲ್ಲ. ಹರಿಹರ ಕ್ಷೇತ್ರದಲ್ಲಿ ಹತ್ತು ವರ್ಷ ಅಧಿಕಾರ ವಂಚಿತರಾಗಿರೋ ಕಾರಣದಿಂದಾಗಿ, ಮಾಜಿ ಶಾಸಕ ಬಿ.ಪಿ. ಹರೀಶ್ ಅವರಿಗೆ  ಬುದ್ದಿ ಭ್ರಮಣೆ ಆಗಿದ್ದು, ಇದರಿಂದ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಬೆಳವಣಿಗೆ ಹೀಗೆಯೇ ಮುಂದುವರೆದರೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಶಾಸಕ ಎಸ್. ರಾಮಪ್ಪ  ಎಚ್ಚರಿಸಿದರು.

ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಹರೀಶ್ ಅವರು ಜನತಾದಳ, ಬಿಜೆಪಿ, ಕಾಂಗ್ರೆಸ್, ಕೆಜೆಪಿ ಹೀಗೆ ಹಲವು ಪಕ್ಷಗಳಿಗೆ ಪಕ್ಷಾಂತರ ಮಾಡಿ 2008 ರಲ್ಲಿ ವಿಧಾನಸಭೆ ಸದಸ್ಯತ್ವಕ್ಕೆ ಅವಧಿಗಿಂತ ಮುಂಚೆ ರಾಜೀನಾಮೆ ನೀಡಿ, ಗೆಲ್ಲಿಸಿರುವ ಕ್ಷೇತ್ರದ ಮತದಾರರನ್ನು ಅವಮಾನಿಸಿದ್ದಾರೆ. ಇವರು ನಮಗೆ ನೀತಿ ಪಾಠವನ್ನು ಹೇಳಿಕೊಡುವ ಅಗತ್ಯವಿಲ್ಲ. ವಿನಾಕಾರಣ ನನ್ನ ಮೇಲೆ ಆಧಾರ ರಹಿತ ಆರೋಪ ಮಾಡುವುದು ನಿಲ್ಲಿಸಬೇಕು. ನಿಲ್ಲಿಸದೇ ಹೋದರೆ ಮುಂದಿನ ದಿನಗಳಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧವಿರುವುದಾಗಿ ಹೇಳಿದರು.

ನಿವೇಶನ ನೀಡುವ ವಿಚಾರದಲ್ಲಿ ಈಗಾಗಲೇ ಫಲಾನುಭವಿಗಳಿಗೆ ನಿವೇಶನ ನೀಡುವುದಕ್ಕೆ ಪ್ರತಿಯೊಬ್ಬರಿಂದ 80 ಸಾವಿರ ರೂ. ಪಡೆದು 11 ಎಕರೆ ಜಮೀನನ್ನು ಗುರುತಿಸಿ, ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಸಲಾಗಿದೆ.  ಈಗ ಒಂದು ನಿವೇಶನದ ಬೆಲೆ 6 ಲಕ್ಷ ರೂಪಾಯಿ ಆಗಲಿದೆ. ಆದಾಗ್ಯೂ ನನಗೆ ನಷ್ಟವಾದರೂ ಧೃತಿಗೆಡದೆ ಕೊಟ್ಟ ಮಾತಿನಂತೆ ನೀಡುವುದಕ್ಕೆ ಮುಂದಾಗಿದ್ದು, ಮಂಜೂರಾತಿ ಪಕ್ರಿಯೆ ಸರ್ಕಾರದ ಮಟ್ಟದಲ್ಲಿ ಇದೆ. 

ಅತೀ ಶೀಘ್ರವಾಗಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಸಂಬಂಧಿಸಿದ ಇಲಾಖೆಗೆ ಸೂಚನೆ ಸಹ ನೀಡಲಾಗಿದೆ. ಆದೇಶ ಆದ ತಕ್ಷಣವೇ ಸಾರ್ವಜನಿಕರಿಗೆ ಹಕ್ಕು ಪತ್ರವನ್ನು ವಿತರಣೆ ಮಾಡಲಾಗುತ್ತದೆ. ಜನರ ಹಣದಲ್ಲಿ ಮಜಾ ಮಾಡುವ ಹವ್ಯಾಸ ನನಗಿಲ್ಲ. ತಾವು ಶಾಸಕರಿದ್ದ ಸಮಯದಲ್ಲಿ ಮಜಾ ಮಾಡುವುದಕ್ಕೆ ರೆಸಾರ್ಟ್‌ಗೆ  ತೆರಳಿದ್ದನ್ನು ಕ್ಷೇತ್ರದ ಮತದಾರರು ಮರೆತಿಲ್ಲ. ಧೈರ್ಯವಿದ್ದರೆ ಜಮೀನನ್ನು ಖರೀದಿಸಿ ಅದನ್ನು ರಾಜ್ಯಪಾಲರ ಹೆಸರಿಗೆ ಮಾಡಿ ನಂತರದಲ್ಲಿ ಸಾರ್ವಜನಿಕರಿಗೆ ಸ್ವಂತ ಹಣದಲ್ಲಿ ನೀಡಲಿ ಎಂದು ಸವಾಲು ಹಾಕಿದರು.

ಬಿಜೆಪಿ ಪಕ್ಷ ಅಧಿಕಾರ ಮಾಡಿದಾಗ ಏಕೆ ಬೈರನಪಾದ ಯೋಜನೆಗೆ ಹಣ ಬಿಡುಗಡೆ ಮಾಡಲು ಮುಂದಾಗಲಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ನಾನು ಅಡ್ಡಗಾಲು ಹಾಕಿಲ್ಲ ಎಂದು ಹೇಳುವ ಹರೀಶ್, ಹರಿಹರ ಕ್ಷೇತ್ರಕ್ಕೆ ಮಂಜೂರು ಆಗಿದ್ದ ಸುಮಾರು 120 ಕೋಟಿ ರೂ. ಹಣವನ್ನು ಜಿಲ್ಲಾಧಿಕಾರಿಗಳ ಬಳಿ ನಮ್ಮ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡದಂತೆ ತಡೆಯಲು ಏನು ಮಾಡಬೇಕೋ ಅದನ್ನು ಮಾಡಿದ್ದಾರೆ. ಕ್ಷೇತ್ರದ ಜನರು ನನಗೆ ಬೆಂಬಲವಾಗಿ ಇರುತ್ತಾರೆ ಎಂಬ ನಂಬಿಕೆ ನನಗಿದೆ. ಪಕ್ಷದಲ್ಲೂ ಸಹ ನನ್ನ ನಾಯಕತ್ವಕ್ಕೆ ಯಾವುದೇ ಧಕ್ಕೆ ಇಲ್ಲ. ಅದೇನಿದ್ದರೂ ಬಿಜೆಪಿ ಪಕ್ಷದಲ್ಲಿ. ಕಾರಣ ಆ ಪಕ್ಷದಲ್ಲಿ ಆಕಾಂಕ್ಷಿತರು ಹೆಚ್ಚು ಇದ್ದು, ಅವರಿಗೆ ಮುಂದಿನ ಭವಿಷ್ಯದ ಬಗ್ಗೆ ಆತಂಕ ಉಂಟಾಗಿರುವುದರಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕುಟುಕಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಉದ್ಘಾಟನಾ ಸಮಾರಂಭದಲ್ಲಿ ಸಂಸದರನ್ನು ಸಾರ್ವಜನಿಕವಾಗಿ ಅವರ ಕಾರ್ಯವನ್ನು ಅಭಿನಂದಿಸಿದ್ದು ನಿಜ. ಅವರು ಕ್ಷೇತ್ರದ ವಿಚಾರದಲ್ಲಿ ನನ್ನ ಕಾರ್ಯ ವೈಖರಿಯನ್ನು ಟೀಕಿಸಿದಾಗ ಅದಕ್ಕೆ ಉತ್ತರಿಸುವ ಅನಿವಾರ್ಯತೆ ಇದ್ದುದರಿಂದ ಪತ್ರಿಕೆಯ ಮೂಲಕ ಉತ್ತರಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.

ಮುಂಬರುವ ಜಿ.ಪಂ. ಮತ್ತು ತಾ.ಪಂ. ಸದಸ್ಯರ ಚುನಾವಣೆಗೆ ಸರ್ಕಾರ ಮೀಸಲಾತಿ ಹೊರಡಿಸಿದ್ದು, ಅದಕ್ಕೆ ನನ್ನ ಸಂಪೂರ್ಣ ವಿರೋಧವಿದೆ. ಕಾರಣ ಬಹಳ ದೊಡ್ಡ ಮಟ್ಟದಲ್ಲಿ ತಾರತಮ್ಯವನ್ನು ಸರ್ಕಾರ ಮಾಡಿದ್ದು, ಮೀಸಲಾತಿ ವಿಚಾರದಲ್ಲಿ ನಮಗೆ ತೃಪ್ತಿ ಇಲ್ಲದೇ ಇರುವುದರಿಂದ ಈ ಕೂಡಲೇ ಅದನ್ನು ಸರಿ ಪಡಿಸುವುದಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಎಂ.ಎಸ್. ಬಾಬುಲಾಲ್, ನಗರಸಭೆ ಸದಸ್ಯರಾದ ಅಬ್ದುಲ್ ಅಲಿಂ, ಎಸ್.ಎಂ. ವಸಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬಿದ್ ಅಲಿ, ಎಲ್. ಬಿ. ಹನುಮಂತಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಾರ್ವತಿ, ಮಾಜಿ ಅಧ್ಯಕ್ಷೆ ಬಾಗ್ಯಮ್ಮ, ಮುಖಂಡರಾದ ದಾದಾಪೀರ್ ಭಾನುವಳ್ಳಿ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ವಿಜಯ ಮಹಾಂತೇಶ್, ನಜೀರ್ ಹುಸೇನ್, ತಿಪ್ಪೇಶ್, ಬಾಷಾ ಇನ್ನಿತರರಿದ್ದರು.

error: Content is protected !!