ನಗರದ ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ : ಪಾಲಿಕೆಗೆ ಕೃತಜ್ಞತೆ

ದಾವಣಗೆರೆ,ಏ.16- ನಗರದ ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿ, ಅದಕ್ಕೆ 10 ಲಕ್ಷ ರೂ. ಅನುದಾನವನ್ನು ಇಂದು ನಡೆದ ಮಹಾನಗರ ಪಾಲಿಕೆಯ 2021-22ನೇ ಸಾಲಿನ ಆಯ-ವ್ಯಯದಲ್ಲಿ ಮೀಸಲಿಡಲು ನಿರ್ಧರಿಸಿರುವ ನಗರ ಪಾಲಿಕೆಯ ಕ್ರಮವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸ್ವಾಗತಿಸಿ, ಅಭಿನಂದಿಸಿದೆ.

ಪಾಲಿಕೆ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಬಜೆಟ್ ಆಯ-ವ್ಯಯ ಮಂಡನೆ ಸಭೆಯ ಸಂದರ್ಭದಲ್ಲಿ ಪಾಲಿಕೆ ಮಹಾಪೌರರಾದ ಎಸ್.ಟಿ. ವೀರೇಶ್ ಅವರು ಈ ವಿಷಯವನ್ನು ಘೋಷಿಸಿದಾಗ ಸಭೆಯಲ್ಲಿ ಹಾಜರಿದ್ದ ಪತ್ರಕರ್ತರು ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಬಾವಿ, ಪ್ರಧಾನ ಕಾರ್ಯದರ್ಶಿ ಇ.ಎಂ. ಮಂಜುನಾಥ, ಖಜಾಂಚಿ ಮಾಗನೂರು ಮಂಜಪ್ಪ ಸೇರಿದಂತೆ, ಪತ್ರಕರ್ತರು ಶಾಸಕ ಎಸ್. ಎ. ರವೀಂದ್ರನಾಥ್, ಮೇಯರ್ ವೀರೇಶ್, ಉಪ ಮೇಯರ್ ಶ್ರೀಮತಿ ಶಿಲ್ಪಾ ಜಯಪ್ರಕಾಶ್, ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಆಯುಕ್ತ ವಿಶ್ವನಾಥ ಮುದಜ್ಜಿ ಅವರುಗಳನ್ನು ಶಾಲು ಹೊದಿಸಿ, ಸನ್ಮಾನಿಸುವುದರ ಮೂಲಕ ಕೃತಜ್ಞತೆ ಸಲ್ಲಿಸಿದರು.

ಪತ್ರಿಕಾ ವಿತರಕರ ಪರವಾಗಿ ವಿತರಕರ ಸಂಘದ ಕೃಷ್ಣ ಮತ್ತಿತರರು ಪಾಲಿಕೆಯ ಕ್ರಮವನ್ನು ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!