ಅಮರ್ ಜವಾನ್ ಪಾರ್ಕ್ ಉದ್ಘಾಟನೆ

ದಾವಣಗೆರೆ, ಜು. 5 – ಸೈನಿಕರ ನೆನಪಿನಲ್ಲಿ ನಗರದಲ್ಲಿ ಸುಸಜ್ಜಿತ ಉದ್ಯಾನವನ ನಿರ್ಮಿಸಬೇಕೆಂಬ ಮಾಜಿ ಸೈನಿಕರ ಬಹು ವರ್ಷಗಳ ಬೇಡಿಕೆ ಇಂದು ಸಾಕಾರಗೊಂಡಿದೆ. 

ಎಸ್. ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಭವನದ ಮುಂಭಾಗದಲ್ಲಿ ದೂಡಾದಿಂದ ನಿರ್ಮಿಸಿರುವ `ಅಮರ್ ಜವಾನ್’ ಉದ್ಯಾನವನವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಅವರು ತಮ್ಮ ಹುಟ್ಟುಹಬ್ಬದಂದೇ ಉದ್ಘಾಟಿಸಿದರು.

ದೂಡಾದಿಂದ ನಿವೇಶನ ಹುಡುಕಲಾರಂಭಿಸಿದಾಗ ಮುಕ್ಕಾಲು ಎಕರೆ ವಿಸ್ತೀರ್ಣದ ಈ ಜಾಗ ಸಿಕ್ಕಿತು. ಈ ರೀತಿಯ 3-4 ನಿವೇಶನಗಳು ಪ್ರಾಧಿಕಾರಕ್ಕೆ ಸಿಕ್ಕಿವೆ. ಇಂತಹ ನಿವೇಶನಗಳು ಇನ್ನೂ ಉಳಿದಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಮಾಜಿ ಸೈನಿಕರ ಆಶಯದಂತೆ ಪಾರ್ಕ್ ರೂಪುಗೊಳ್ಳಲಿದೆ ಎಂದು ಸಿದ್ದೇಶ್ವರ ಭರವಸೆ ನೀಡಿದರು.

ನೆರೆಯ ಶತ್ರು ರಾಷ್ಟ್ರಗಳಾದ ಚೀನಾ, ಪಾಕಿಸ್ತಾನಗಳು ಒಂದಲ್ಲ ಒಂದು ರೀತಿ ಭಾರತದ ಮೇಲೆ ದಾಳಿ ಮಾಡುತ್ತಿದ್ದು, ಈ ಎರಡೂ ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ ಬುದ್ಧಿ ಕಲಿಸಲು ಸಾಧ್ಯವಾಗಿದೆ. ಹಿಂದೆ ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ ಚೀನಾ ಮತ್ತು ಪಾಕಿಸ್ಥಾನಗಳಿಗೆ ಭಾರತದ ಭೂಮಿಯನ್ನೇ ಕೊಟ್ಟಿದ್ದಾರೆ. ಈಗ ಪಾಕ್ ಆಕ್ರಮಿಸಿಕೊಂಡ ಕಾಶ್ಮೀರದಲ್ಲಿ ಹಿಂದೂಗಳಿಗೆ ಆಗುತ್ತಿರುವ ನಿರಂತರ ತೊಂದರೆ, ದೌರ್ಜನ್ಯವನ್ನು ಕೇಂದ್ರ ಸರ್ಕಾರ ಗಮನಿಸುತ್ತಿದೆ. ಒಂದಲ್ಲಾ ಒಂದು ದಿನ ಕಾಶ್ಮೀರ ಭಾರತದ ಭಾಗವಾಗಲಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರವೀಂದ್ರನಾಥ್‌ ಮಾತನಾಡಿ, ಅಮರ್ ಜವಾನ್ ಸ್ಮಾರಕ ನಿರ್ಮಾಣ ಬಹು ವರ್ಷಗಳ ಕನಸಾಗಿತ್ತು. ನಿಧಾನವಾದರೂ ಪರವಾಗಿಲ್ಲ. ಗುಣಮಟ್ಟದ ಪಾರ್ಕ್ ನಿರ್ಮಾಣವಾಗಬೇಕು. ನಮ್ಮ ಊರಲ್ಲೂ ಇಂತಹ ಸ್ಮಾರಕ ಇದೆಯೆಂಬುದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಅಭಿವೃದ್ಧಿ ಕೆಲಸ ಇಲ್ಲಿ ಆಗಬೇಕು ಎಂದು ಆಶಿಸಿದರು.

ದೂಡಾ ನಿಯಮಾವಳಿ ಪಾಲಿಸದ 100 ಎಕರೆ ತೆರವಿಗೆ ನೋಟಿಸ್ ನೀಡಲಾಗಿದ್ದರೂ ಸಂಬಂಧಿಸಿದವರು ತೆರವು ಮಾಡಿಲ್ಲ. ಈ ಹಿನ್ನೆಯಲ್ಲಿ ಯರಗುಂಟೆ, ಬೂದಾಳು, ಕರೂರು ಭಾಗದ ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾದ ಖಾಸಗಿ ಲೇಔಟ್‍ಗಳ ತೆರವು ಕಾರ್ಯಾಚರಣೆಯನ್ನು ಇದೇ ದಿನಾಂಕ 8 ಮತ್ತು 9ರಂದು ಕೈಗೊಳ್ಳುವುದಾಗಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ತಿಳಿಸಿದರು.

 ಪ್ರಾಧಿಕಾರದ ಸದಸ್ಯರಾದ ದೇವೀರಮ್ಮ ಮಾತನಾಡಿ, ಮಂಡಕ್ಕಿ ಬಡಾವಣೆ ಸುತ್ತಮುತ್ತಲು ಸಹ ಸಾಕಷ್ಟು ಅನಧಿಕೃತ ಬಡಾವಣೆಗಳು ನಿರ್ಮಾಣವಾಗಿವೆ. ಅವುಗಳನ್ನೂ ತೆರವುಗೊಳಿಸಲು ದೂಡಾ ನಿರ್ಧಾರ ಕೈಗೊಂಡಿದೆ ಎಂದರು.

ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್‌ ಹನಗವಾಡಿ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ ಸೇರಿದಂತೆ ಮಾಜಿ ಸೈನಿಕರು ಹಾಗು ಇತರರು ಇದ್ದರು.

error: Content is protected !!