ಹರಿಹರ, ಜೂ.5- ನಗರದಲ್ಲಿ ಆಕ್ಸಿಜನ್ ಪ್ಲಾಂಟ್ಗೆ ಚಾಲನೆ ನೀಡಿದ ಸಮಯದಲ್ಲಿ ಶಾಸಕ ಎಸ್. ರಾಮಪ್ಪ, §ಸಿದ್ದೇಶ್ವರ ಇನ್ನೂ ಎರಡು ಬಾರಿ ಗೆದ್ದು ಸಂಸದರಾಗಲಿ¬ ಎಂದು ಹೇಳಿಕೆ ನೀಡಿದ್ದವರು ದಿಢೀರ್ ಎರಡೇ ದಿನಗಳಲ್ಲಿ ಹರಿಹರ ಅಭಿವೃದ್ಧಿಗೆ §ಸಚಿವರ ಕಾಲು ಹಿಡಿಯಬೇಕಾ, ಸಂಸದರ ಮನೆಯ ಬಾಗಿಲಿಗೆ ಹೋಗಬೇಕಾ¬ ಎಂದು ಹೇಳಿಕೆಯನ್ನು ಕೊಡುತ್ತಿದ್ದಾರೆ ಎಂದರೆ, ಜಿಲ್ಲೆಯ ಕಾಂಗ್ರೆಸ್ ಮುಖಂಡರು ರಾಮಪ್ಪನವರನ್ನು ಮನೆಗೆ ಕರೆಸಿಕೊಂಡು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತೀರಾ ಎಂದು ಗರಂ ಆಗಿರಬಹುದು ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಕಿಡಿಕಾರಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಕೊರೊನಾ ಸಮಯದಲ್ಲಿ ಜನರು ಆಕ್ಸಿಜನ್ ಕೊರತೆಯಿಂದ ತೊಂದರೆಪಡಬಾರದು ಎಂದು ಜಿ.ಎಂ. ಕುಟುಂಬದ ಟ್ರಸ್ಟ್ ವತಿಯಿಂದ ಒಂದು ಕೋಟಿ ಎಂಬತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಹರಪನಹಳ್ಳಿ, ಹರಿಹರ, ಚಿತ್ರದುರ್ಗ ನಗರದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಿರುವುದು ಅಭಿನಂದನಾ ಕಾರ್ಯವಾಗಿದೆ. ಹರಿಹರ ತಾಲ್ಲೂಕಿನ ಜನತೆಯ ಪರವಾಗಿ ಅವರ ಕುಟುಂಬಕ್ಕೆ ಧನ್ಯವಾದಗಳನ್ನು ಹೇಳಿದ್ದ ಶಾಸಕ ರಾಮಪ್ಪ, ಈಗ ನೋಡಿದರೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದರು.
ಹರಿಹರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲಿ
ರಾಜ್ಯ ಸರ್ಕಾರ ದಾವಣಗೆರೆಯಲ್ಲಿ ಮೆಡಿಕಲ್ ಕಾಲೇಜ್ ಪ್ರಾರಂಭ ಮಾಡಲು ಮುಂದಾಗಿದೆ. ಈಗಾಗಲೇ ದಾವಣಗೆರೆ ನಗರದಲ್ಲಿ 2 ಮೆಡಿಕಲ್ ಕಾಲೇಜು, 2 ಡೆಂಟಲ್ ಕಾಲೇಜು, 4 ಇಂಜಿನಿಯರಿಂಗ್ ಕಾಲೇಜುಗಳಿವೆ. ದಾವಣಗೆರೆ ಬದಲು ಹರಿಹರ ನಗರದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸಬೇಕು. ಈ ಕುರಿತು ಯಾವುದೇ ಸಂಘಟನೆಯವರು ಹೋರಾಟ ಮಾಡಿದರೂ ನಾನು ಸಂಪೂರ್ಣ ಬೆಂಬಲ ನೀಡುವೆ.
– ಬಿ.ಪಿ. ಹರೀಶ್, ಮಾಜಿ ಶಾಸಕ
ಶಾಸಕ ರಾಮಪ್ಪನವರೇ, ನೀವು ಅಧಿಕಾರದಲ್ಲಿರುವುದಾಗಿ ಬಡವರ, ಶ್ರಮಿಕರ, ಕೂಲಿ ಕಾರ್ಮಿಕರಿಗೆ ನಿವೇಶನ ನೀಡುವುದಾಗಿ ಹಣವನ್ನು ಪಡೆದಿದ್ದೀರಿ. ಆದರೆ ಇದುವರೆಗೂ ಒಂದು ನಿವೇಶನ ನೀಡಿರುವುದಿಲ್ಲ. ನಿಮ್ಮನ್ನು ಕೇಳಲು ಹೋದಾಗ ದೌರ್ಜನ್ಯ ಮಾಡುತ್ತಾರೆ ಎಂದು ಭಯದಿಂದ ನಿಮ್ಮ ಬಳಿ ಬರದೇ ಇರಬಹುದು. ನಿಯತ್ತು ಎನ್ನುವುದು ನಿಮ್ಮಲ್ಲಿದ್ದರೆ, ನಿಮ್ಮ ಅಧಿಕಾರವಧಿ ಮುಗಿಯುವುದರೊಳಗೆ ನಿವೇಶನ ನೀಡಿ. ಅಧಿಕಾರ ಇದೆ ಏನಾದರೂ ಮಾಡಬಹುದು ಎಂಬ ಭಾವನೆ ಬಿಡಿ. ಹಣ ನೀಡಿದವರು ಮನೆ ಬಾಗಿಲ ಬಳಿ ಬರುವ ಕಾಲ ದೂರ ಇಲ್ಲ ಎಂದರು.
ಕ್ಷೇತ್ರದ ಮತದಾರರು ಕೈ ಬಿಡುತ್ತಾರೆ, ಪಕ್ಷದಲ್ಲಿ ನನ್ನ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಭಯದಿಂದ ರಾಮಪ್ಪನವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಡಿ ಎಂದು ಹೇಳುವಂತಹ ಸಣ್ಣ ವ್ಯಕ್ತಿ ನಾನಲ್ಲ. ಅಭಿವೃದ್ಧಿ ವಿಚಾರದಲ್ಲಿ ಮೌನವಾಗಿ ಇರಬಹುದು. ಆದರೆ ಹಣ ಬಿಡುಗಡೆ ಮಾಡಬೇಡಿ ಎಂದು ಎಲ್ಲಿ ಹೇಳಿರುವುದಿಲ್ಲ. ಹೊನ್ನಾಳಿ, ಜಗಳೂರು, ಚನ್ನಗಿರಿ ತಾಲ್ಲೂಕಿನ ಅಭಿವೃದ್ಧಿಗೆ ಆಡಳಿತ ಪಕ್ಷದ ಮುಖ್ಯಮಂತ್ರಿ ಇದ್ದಾಗ ಇದು ಸಹಜ ಬೆಳವಣಿಗೆ. ನಿಮ್ಮ ಇಷ್ಟು ದಿನದ ಅವಧಿಯಲ್ಲಿ ಹರಿಹರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು? ಕೊರೊನಾ ಸಮಯದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಹಾಗೆಯೇ ಹರಿಹರ ಕ್ಷೇತ್ರದ ಅಭಿವೃದ್ಧಿಯೂ ಕುಂಠಿತವಾಗಿರಬಹುದು. ಅದನ್ನು ಬಿಟ್ಟು ಹರೀಶ್ ಅಭಿವೃದ್ಧಿಗೆ ಅಡ್ಡಿಪಡಿಸುವ ಕೆಲಸವನ್ನು ಮಾಡುತ್ತಾರೆ ಎಂದು ಆರೋಪ ಮಾಡಿದರೆ ಅದನ್ನು ನಾನು ಖಂಡಿಸುವುದಾಗಿ ಹೇಳಿದರು.
ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗರಾಜ ಮಾತನಾಡಿ, ಹರಿಹರ ನಗರದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭ ಮಾಡಿದಲ್ಲಿ ಇಲ್ಲಿನ ಸುತ್ತಮುತ್ತಲಿನ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ನಗರಸಭೆ ಸದಸ್ಯ ರಜನಿಕಾಂತ್, ಹನುಮಂತಪ್ಪ, ಮುಖಂಡರಾದ ಬೆಳ್ಳೂಡಿ ರಾಮಚಂದ್ರಪ್ಪ, ಬಾತಿ ಚಂದ್ರಶೇಖರ್, ರಾಘವೇಂದ್ರ, ಅಜಿತ್ ಸಾವಂತ್, ರಾಜು ರೋಖಡೆ, ತುಳಜಪ್ಪ, ಕೆಂಚನಹಳ್ಳಿ ಮಹಾಂತೇಶಪ್ಪ, ಮಾರುತಿ ಶೆಟ್ಟಿ, ಕೃಷ್ಣ. ಕೆ.ಜಿ. ಸುನೀಲ್, ವೀರೇಶ್, ಪ್ರಶಾಂತ್, ರೂಪಾ, ಸುಧಾ, ಮಹಾಂತೇಶ್ ಭಂಡಾರಿ, ಎನ್.ಇ. ಸುರೇಶ್, ಹನಗವಾಡಿ ಮಂಜಣ್ಣ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.