ಟೋಲ್ ಸಮಸ್ಯೆ ಇತ್ಯರ್ಥ : ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವಿಶ್ವನಾಥ್

ರಾಣೇಬೆನ್ನೂರು, ಫೆ.11- ಚಳಗೇರಿ ಟೋಲ್‌ನಲ್ಲಿ ಮೂಲ ಸೌಲಭ್ಯಗಳು ಸೇರಿದಂತೆ ರೈತರ ಎಲ್ಲಾ ಬೇಡಿಕೆಗಳನ್ನು ತಿಂಗಳೊಳಗಾಗಿ ಈಡೇರಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವಿಶ್ವನಾಥ್ ಹೇಳಿದರು. 

ಇಲ್ಲಿನ ತಹಶೀಲ್ದಾರ್‌ ಕಛೇರಿ ಸಭಾಂಗಣದಲ್ಲಿ ನಡೆದ ರೈತ ಸಂಘ, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಟೋಲ್‌ನವರ ಅವೈಜ್ಞಾನಿಕ ಸರ್ವೀಸ್‌ ರಸ್ತೆ, ಅಂಡರ್ ಬ್ರಿಡ್ಜ್, ಗ್ರಿಲ್ ವಾಲ್ ಸೇರಿದಂತೆ ಸಣ್ಣ, ಸಣ್ಣ ಸೇತುವೆಗಳ ನಿರ್ಮಾಣ ಮುಂತಾದ ಕಾರಣಗಳಿಂದ ನೂರಾರು ಪ್ರಯಾಣಿಕರು ಪ್ರಾಣ ಕಳೆದುಕೊಂಡರು. ಸರ್ಕಾರ ಹಾಗೂ ವಾಹನ ಮಾಲೀಕರಿಗೆ ಗುತ್ತಿಗೆದಾರರು ವಂಚಿಸುತ್ತಲೇ ಬಂದಿದ್ದಾರೆ. 

ಈ ಬಗ್ಗೆ ಸೂಕ್ತ ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ರವೀಂದ್ರಗೌಡ ಪಾಟೀಲ ಹಾಗೂ ಈರಣ್ಣ ಹಲಗೇರಿ ಒತ್ತಾಯಿಸಿದರು.

ಈ ಎಲ್ಲಾ ಸಮಸ್ಯೆಗಳ ಪರಿಹಾರದ ಜವಾಬ್ದಾರಿಯನ್ನು ತಹಶೀಲ್ದಾರ್ ಶಂಕರ ವಹಿಸಿಕೊಂಡು ಶೀಘ್ರವೇ ಕ್ರಮ ಕೈಗೊಳ್ಳಲು ಗುತ್ತಿಗೆದಾರರಿಗೆ ಸೂಚಿಸಿದರು. 

ಟೋಲ್ ಪ್ಲಾಜಾದ ರಘು ಚೌಧರಿ, ವ್ಯವಸ್ಥಾಪಕ ವಸಂತಕುಮಾರ್, ಸಿಪಿಐ  ಶ್ರೀಶೈಲ ಚೌಗಲಾ, ರೈತ ಮುಖಂಡರುಗಳಾದ ಸುರೇಶಪ್ಪ ಗರಡಿಮನಿ, ಹರಿಹರಗೌಡ ಪಾಟೀಲ್, ಡಿಳ್ಳೆಪ್ಪ ಸತ್ಯಪ್ಪನವರ, ಬಸವರಾಜ ಕೊಂಗಿ, ಶಂಭು ಪಾಟೀಲ ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!