ಲಸಿಕೆ ಪಡೆದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಕೆಲ ಪ್ರದೇಶಗಳಲ್ಲಿ ಮಾರ್ಗಸೂಚಿ ಪಾಲಿಸುತ್ತಿಲ್ಲ; ನಿರ್ಲಕ್ಷ್ಯ ಕಂಡರೆ ಕಾನೂನು ಕ್ರಮ: ಜಿಲ್ಲಾಧಿಕಾರಿ

ದಾವಣಗೆರೆ, ಏ.  14 –  ಕಳೆದ ವರ್ಷ ಕೊರೊನಾ ಸಂಕಷ್ಟದ ದಿನಗಳನ್ನು ಎದುರಿಸಿದ ನಾವುಗಳು ಮತ್ತೆ ಅಂತಹ ದಿನಗಳನ್ನು ಕಾಣದೇ ಬಹಳ ಎಚ್ಚರಿಕೆಯಿಂದ ಕೊರೊನಾದ ಎರಡನೇ ಅಲೆ  ಎದುರಿಸಲು ಸನ್ನದ್ಧರಾಗಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಕರೆ ನೀಡಿದರು.

ಮಹಾನಗರ ಪಾಲಿಕೆಯಲ್ಲಿ ಮಹಾಪೌರರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕೊರೊನಾ ಜಾಗೃತಿ ಸಭೆಯಲ್ಲಿ ನಗರದ ಮಸೀದಿಗಳ ಮುತುವಲ್ಲಿ ಅಧ್ಯಕ್ಷರು, ಉಲೇಮಾಗಳನ್ನು ಆಹ್ವಾನಿಸಿ ಲಸಿಕಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಸಲಹೆ ನೀಡಿದರು.

ಹಬ್ಬ, ಹರಿದಿನಗಳನ್ನು ಬಿಟ್ಟು, ಈ ಮಹಾಮಾರಿಯ ಹಿಂದೆ ಏಕೆ ಬಿದ್ದಿದ್ದೇವೆ ಎಂದರೆ ಜನರ ಪ್ರಾಣ ರಕ್ಷಣೆ ಬಹಳ ಅಗತ್ಯ. ನಾವು ಸ್ವಲ್ಪ ಮೈ ಮರೆತರೂ ಮತ್ತೆ ಗಂಡಾಂತರ ಎದುರಿಸ ಬೇಕಾಗುತ್ತದೆ ಎಂದು ವಿವರಿಸಿದ ಜಿಲ್ಲಾಧಿಕಾರಿ, ಪ್ರತಿಯೊಬ್ಬರೂ ಕೊರೊನಾ ಲಸಿಕೆ ಪಡೆಯು ವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು. ನಾವೆಲ್ಲರೂ ಒಗ್ಗಟ್ಟಾಗಿ ಈ ಯುದ್ಧವನ್ನು ಗೆಲ್ಲೋಣ ಎಂದು ಹುರಿದುಂಬಿಸಿದರು.

ಇತ್ತೀಚಿನ ದಿನಗಳಲ್ಲಿ ಕೆಲವು ಪ್ರದೇಶಗಳಲ್ಲಿ  ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಮುಂದಿನ ದಿನಗಳಲ್ಲಿ ಇಂತಹ ಅಜಾಗರೂಕತೆ ಕಂಡುಬಂದರೆ ದಂಡ ವಿಧಿಸಿ, ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಕೆಲವರಿಗೆ ನಮ್ಮ ಕ್ರಮ ಕಹಿಯಾಗಿ ದ್ದರೂ, ನಮಗೆ ಅನೇಕರ ಪ್ರಾಣ ರಕ್ಷಿಸಿದ ತೃಪ್ತಿ ನೀಡಿದೆ. ಕೊರೊನಾ ಸಂದರ್ಭದಲ್ಲಿ ಸಲ್ಲಿಸಿದ ನಮ್ಮ ಸೇವೆ ಜೊತೆ ನಿಮ್ಮೆಲ್ಲರ ಸಹಕಾರ ನಮ್ಮೆಲ್ಲಾ ಜಿಲ್ಲಾಡಳಿತ ತಂಡಕ್ಕೆ ಶ್ರೀರಕ್ಷೆಯಾಗಿದೆ ಎಂದು ಹೇಳಿ, ಸದ್ಯ ನಮ್ಮ ಜಿಲ್ಲೆ ಡೇಂಜರ್‌ ಮುಕ್ತವಾಗಿದೆ ಎಂದರು.

ಮೌಲಾನಾ ಮಹಮ್ಮದ್ ಹನೀಫ್ ರಜಾ ಮಾತನಾಡಿ,  ಅಧಿಕಾರಿಗಳು ನಮ್ಮ ಆರೋಗ್ಯ ರಕ್ಷಣೆಯ ಬಗ್ಗೆ ವಹಿಸಿರುವ ಕಾಳಜಿಗೆ ನಾವು ಆಭಾರಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಮಸೀದಿಗಳಿಗೆ ಪ್ರಕಟಣೆಯನ್ನು ನೀಡಿ, ಲಸಿಕೆಯನ್ನು ಪಡೆಯಲು ಸಹಕರಿಸುತ್ತೇವೆ ಎಂದು ಹೇಳಿದರು.

ಕೊರೊನಾ ಎರಡನೇ ಅಲೆಯನ್ನು ನಾವು ಬಹಳ ಗಂಭೀರತೆಯಿಂದ ಎದುರಿಸಬೇಕಿದೆ. ಬೇಜವಾಬ್ದಾರಿತನ ತೋರದೆ ನಾವು, ನಮ್ಮ ಕುಟುಂಬ, ನಮ್ಮ ಸಮಾಜ ಇದಕ್ಕೆ ಬಲಿಯಾಗದೇ ಒಂದಾಗಿ ಇದನ್ನು ಹಿಮ್ಮೆಟ್ಟಿಸೋಣ, ಇತಿಹಾಸದ ಪುಸ್ತಕದಲ್ಲಿ ದಾಖಲಿಸೋಣ ಎಂದು ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ನಾಗರಾಜ್, ಪಾಲಿಕೆ ಆಯುಕ್ತ ವಿಶ್ವನಾಥ್‌ ಪಿ. ಮುದಜ್ಜಿ, ಜಿಲ್ಲಾ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿ ಕಾರಿ ಡಾ|| ಮೀನಾಕ್ಷಿ ಕೆ.ಎಸ್. ಮಾತನಾಡಿದರು.

error: Content is protected !!