ಡಾ. ಅಂಬೇಡ್ಕರ್ ಜಯಂತ್ಯೋತ್ಸದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಕೆ.ಬಿ. ಗೀತಾ
ದಾವಣಗೆರೆ, ಏ.14- ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಮತದಾನ ಮಾಡುವ ಜೊತೆಗೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ತಿಳಿದು ಪಾಲಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಗೀತಾ ಕೆ.ಬಿ. ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸ್ಲಂ ಜನಾಂದೋಲನ ಕರ್ನಾಟಕದ ಸಂ ಯುಕ್ತಾಶ್ರಯದಲ್ಲಿ ನಗರದ ಹಳೇ ನ್ಯಾಯಾ ಲಯದ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರೂ ಮತದಾನ ಮಾಡಿದ ಮಾತ್ರಕ್ಕೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗುವುದಿಲ್ಲ. ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ಪಾಲಿಸುವ ಜೊತೆಗೆ ಅಕ್ಕ ಪಕ್ಕದವರನ್ನು ಗೌರವಿಸಬೇಕು. ಸಹಕಾರ, ಸಹಬಾಳ್ವೆಯಿಂದ ಬಾಳುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಮಾತ್ರ ಸುಂದರ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಸಾಧ್ಯ ಎಂದು ಹೇಳಿದರು.
ಸ್ವಾತಂತ್ರ್ಯ ಹಾಗೂ ಸಮಾನತೆ ಹೊಂದ ಬೇಕಾದರೆ ಸಂವಿಧಾನದ ಬಗ್ಗೆ ಅರಿವು, ಅಧ್ಯಯನ ಅಗತ್ಯ. ಸಂವಿಧಾನದ ಮೂಲ ತತ್ವಗಳನ್ನು ಎಲ್ಲರೂ ಅಳವಡಿಸಿಕೊಂಡಾಗ ಮಾತ್ರ ಸಂವಿಧಾನಕ್ಕೆ ನಿಜವಾದ ಅರ್ಥ ಬರುತ್ತದೆ. ಕೇವಲ ಮೇಲ್ನೋಟಕ್ಕೆ ಮಾತ್ರ ಸಂವಿಧಾನಕ್ಕೆ ಬೆಲೆ ಕೊಡದೆ, ಹೃದಯಾಂ ತರಾಳದಿಂದ ಸಂವಿಧಾನವನ್ನು ಅರ್ಥೈಸಿ ಕೊಂಡು, ಪಾಲಿಸಿದಾಗ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೆ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು.
ಉತ್ತಮ ಬದುಕು ಬದಕಲು ಮನ ಸ್ಸನ್ನು ಹದ ಮಾಡಿಕೊಳ್ಳುವ ಅಗತ್ಯವಿದೆ. ಉತ್ತಮ ಬೆಳೆಗಾಗಿ ಮೊದಲು ನಾವು ಹೇಗೆ ಜಮೀನನ್ನು ಹದ ಮಾಡುತ್ತೆವೇಯೋ ಹಾಗೆ. ಮನಸ್ಸನ್ನೂ ಉತ್ತಮ ವಿಚಾರಗಳಿಂದ ಹದಗೊಳಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಸಮಾಜದಲ್ಲಿ ಯಾವುದೇ ಬದಲಾವಣೆ ತರಬೇಕಾದರೆ ಆ ವಿಷಯದ ಬಗ್ಗೆ ಆಳವಾದ ಅಧ್ಯಯನ, ಅರಿವು, ಪೂರ್ವಾಪರ ಚಿಂತನೆ ಅಗತ್ಯ ಎಂದ ನ್ಯಾಯಾಧೀಶರು, ಪ್ರಸ್ತುತ ನಡೆಯು ವತ್ತಿರುವ ಕೆಎಸ್ಸಾರ್ಟಿಸಿ ನೌಕರರ ಮುಷ್ಕರ ವನ್ನು ಉದಾಹರಿಸುತ್ತಾ, ನೌಕರರೇ ಅಲ್ಲದ ವರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಇದರಿಂದ ನೌಕರರು ಹಾಗೂ ಜನತೆ ಸಾಕಷ್ಟು ತೊಂದರೆ ಅನುಭವಿಸಬೇಕಾ ಯಿತು ಎಂದರು. ನಾನು ಮುಷ್ಕರದ ಪರ ಹಾಗೂ ವಿರೋಧವೂ ಅಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.
ಸ್ಲಂ ಜನಾಂದೋಲನದ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳೂ, ಹಿರಿಯ ಸಿವಿಲ್ ನ್ಯಾಯಾಧೀಶರು ಆದ ಪ್ರವೀಣ್ ನಾಯಕ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್. ಅರುಣ ಕುಮಾರ್, ಹಿರಿಯ ವಕೀಲರಾದ ಅನೀಸ್ ಪಾಷ, ಬಿ.ಎಂ. ಹನುಮಂತಪ್ಪ, ಆಂಜನೇಯ ಗುರೂಜಿ ಉಪಸ್ಥಿತರಿದ್ದರು.