ಕಸಾಪ ಲೆಕ್ಕಪತ್ರ ಮಂಡನೆ – ಸ್ಪಷ್ಟನೆ

ದಾವಣಗೆರೆ, ಏ. 12- ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆಗಳ ಮತ್ತು ರಾಜ್ಯ ಅಧ್ಯಕ್ಷತೆಯ ಸ್ಥಾನಕ್ಕೆ ಚುನಾವಣೆ ಮೇ 9ರಂದು ಭಾನುವಾರ ಇದ್ದು, ಅಭ್ಯರ್ಥಿಗಳ ಪರ, ವಿರೋಧ ಸ್ಪರ್ಧಿಗಳು, ಪ್ರತಿ ಸ್ಪರ್ಧಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಪತ್ರಿಕಾ ಹೇಳಿಕೆ ಮೂಲಕ ಪರಸ್ಪರ ವಾದ, ವಿವಾದ ಸಹಜ ಪ್ರಕ್ರಿಯೆ. ಆದರೆ ಕ.ಸಾ.ಪ. ಚುನಾವಣೆ ರಾಜಕೀಯ ಹಂತದ ಬೆಳವಣಿಗೆಯತ್ತ ವಾಲುತ್ತಿರುವುದು ವಿಷಾದದ ಸಂಗತಿ.

ಕ.ಸಾ.ಪ. ದಾವಣಗೆರೆ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಶಿವಕುಮಾರಸ್ವಾಮಿ ಕುರ್ಕಿಯವರು ಇತ್ತೀಚಿಗೆ ಒಂದು ಪತ್ರಿಕಾ ಹೇಳಿಕೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕ.ಸಾ.ಪ. ಲೆಕ್ಕಪತ್ರ ಮಂಡನೆಯ ಕುರಿತು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಎರಡು ಅವಧಿಯ ಕಳೆದ 9 ವರ್ಷಗಳಿಂದಲೂ ಜಿಲ್ಲಾ ಸಮಿತಿ ಯಾವುದೇ ಸಭೆ ಕರೆಯದೇ ಲೆಕ್ಕಪತ್ರ ಮಂಡನೆ ಮಾಡದೇ ಇರುವುದು ಕ.ಸಾ.ಪ. ಆಜೀವ ಸದಸ್ಯರಾದವರ ಆಕ್ಷೇಪಣೆ ಮತ್ತು ಹಕ್ಕುಬಾಧ್ಯತೆಯೂ ಹೌದು. ಆದರೆ ದಾವಣಗೆರೆ ತಾಲ್ಲೂಕು ಕ.ಸಾ.ಪ.ದ ಕುರಿತು ಶಿವಕುಮಾರಸ್ವಾಮಿ ಕುರ್ಕಿ ಮಾಡಿರುವ ಆರೋಪ ಸತ್ಯಕ್ಕೆ ದೂರ.

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಹಾಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೇವಾಕಾಂಕ್ಷಿ ಬಿ.ವಾಮದೇವಪ್ಪನವರು ತಮ್ಮ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆದ ಎಲ್ಲಾ ತಾಲ್ಲೂಕು ಸಮ್ಮೇಳನಗಳ ಸರ್ವಾಧ್ಯಕ್ಷರ ಆಯ್ಕೆ, ಸಮ್ಮೇಳನಗಳ ರೂಪುರೇಷೆ ಸೇರಿದಂತೆ ಪ್ರತೀ ಹಂತದಲ್ಲೂ ಪೂರ್ವಭಾವಿ ಸಭೆ, ಸಮ್ಮೇಳನದ ನಂತರ ಸಮ್ಮೇಳನ ನಡೆದ ಆಯಾ ಗ್ರಾಮಕ್ಕೆ ಹೋಗಿ ಪಾರದರ್ಶಕವಾಗಿ ಲೆಕ್ಕಪತ್ರ ಮಂಡನೆ ಮಾಡಿ ಅನುಮೋದನೆ ಪಡೆದ ದಾಖಲೆ ಇದೆ. ಎಲ್ಲಾ ತಾಲ್ಲೂಕು ಸಮ್ಮೇಳನಗಳಲ್ಲೂ ಸಾಹಿತ್ಯ ಪರಿಷತ್ತಿನ ಶಿಷ್ಟಾಚಾರಗಳಂತೆ, ಸ್ಮರಣ ಸಂಚಿಕೆ ಸೇರಿದಂತೆ ಚಾಚೂ ತಪ್ಪದೇ ಕ್ರಮಬದ್ಧತೆಗಳನ್ನು ನಿಯಮಾವಳಿಗಳನ್ನು ಪಾಲಿಸಿ ನಡೆಸಿದ ಎಲ್ಲಾ ದಾಖಲೆ ಎಲ್ಲಾ ಪತ್ರಿಕೆಗಳಲ್ಲಿ ಬಂದ ವರದಿಗಳ ದಾಖಲೆಗಳೂ ಇದೆ. ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟು, ಜಿಲ್ಲಾ ಸಮ್ಮೇಳನಕ್ಕೆ ಸರಿಸಮಾನವಾಗಿ ತಾಲ್ಲೂಕು ಸಮ್ಮೇಳನಗಳನ್ನು ನಡೆಸಿ ಅಲ್ಲದೇ ಕಳೆದ ನವೆಂಬರ್ ಒಂದು ತಿಂಗಳು ಪೂರ್ಣ ಪ್ರಮಾಣದಲ್ಲಿ ಅಂತರ್‌ತಾಣದಲ್ಲಿ `ಕನ್ನಡ ನುಡಿ ಹಬ್ಬ’ ಕಾರ್ಯಕ್ರಮ ನಡೆಸಿ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕ.ಸಾ.ಪ.ದ ಘನತೆ, ಗೌರವ ಹೆಚ್ಚಿಸಿದ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಶಿವಕುಮಾರಸ್ವಾಮಿ ಕುರ್ಕಿ ತಪ್ಪು ಮಾಹಿತಿಯೊಂದಿಗೆ ಪತ್ರಿಕೆ ಹೇಳಿಕಾ ಕೊಟ್ಟಿರುವುದು ತಪ್ಪು ಮಾಹಿತಿ ಮತ್ತು ವಿಷಾದದ ಸಂಗತಿ ಎಂದು ಹಾಲಿ ದಾವಣಗೆರೆ ಕ.ಸಾ.ಪ.ದ ಗೌರವ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‍ಶೆಣೈ, ಇ.ಎಂ.ಮಂಜುನಾಥ, ಗೌರವ ಕೋಶಾಧ್ಯಕ್ಷ  ಹೆಚ್.ಕೆ.ಪಾಲಾಕ್ಷಪ್ಪ ಗೋಪನಾಳ್ ಸೇರಿದಂತೆ ಕ.ಸಾ.ಪ. ತಾಲ್ಲೂಕು ಸಮಿತಿಯವರು ಪತ್ರಿಕಾ ಹೇಳಿಕೆಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

error: Content is protected !!