ಹೊಸ ವ್ಯವಸ್ಥೆ ಕಡ್ಡಾಯವಲ್ಲ : ಲೋಕಸಭೆಯಲ್ಲಿ ಪ್ರಧಾನಿ ಮೋದಿ
ನವದೆಹಲಿ, ಫೆ. 10 – ನೂತನ ಕೃಷಿ ಕಾಯ್ದೆಗಳ ಕುರಿತು ತಮ್ಮ ನಿಲುವಿನ ದನಿ ಎತ್ತಿರುವ ರೈತರ ಬಗ್ಗೆ ಸರ್ಕಾರ ಹಾಗೂ ಸಂಸತ್ತಿಗೆ ಅಪಾರ ಗೌರವ ಇದೆ. ಅವರ ಪ್ರತಿಭಟನೆ ಪವಿತ್ರ ಎಂದು ಭಾವಿಸಿದ್ದೇನೆ ಎಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈತರು ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಬರುವಂತೆ ಮತ್ತೊಮ್ಮೆ ಆಹ್ವಾನ ನೀಡಿದ್ದಾರೆ.
ರಾಷ್ಟ್ರಪತಿ ಭಾಷಣಕ್ಕೆ ಅಭಿನಂದನೆ ಸಲ್ಲಿಸುವ ನಿಲುವಳಿ ಕುರಿತ ಚರ್ಚೆಯಲ್ಲಿ ಮಾತನಾಡುತ್ತಿದ್ದ ಅವರು, ಮೂರು ಕೃಷಿ ಕಾಯ್ದೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ನೂತನ ವ್ಯವಸ್ಥೆ ಕಡ್ಡಾಯವಲ್ಲ, ಇದು ರೈತರಿಗೆ ನೀಡುವ ಆಯ್ಕೆ ಮಾತ್ರವಾಗಿದೆ. ಹಳೆಯ ವ್ಯವಸ್ಥೆಯೂ ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.
90 ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ, ತಮ್ಮ ಭಾಷಣದ ಬಹುತೇಕ ಸಮಯವನ್ನು ಕೃಷಿ ಕಾಯ್ದೆಗಳಿಗೆ ಮೀಸಲಿಟ್ಟಿದ್ದರು.
ಕಾಯ್ದೆಯಲ್ಲಿ ಏನಾದರೂ ಲೋಪಗಳಿದ್ದರೆ ಅದರ ತಿದ್ದುಪಡಿಗೆ ಸರ್ಕಾರ ಮುಕ್ತವಾಗಿದೆ. ರೈತ ಒಕ್ಕೂಟಗಳ ಕಾಯ್ದೆಯ ಪ್ರತಿಯೊಂದು ಅಂಶವನ್ನು ಎಳೆ ಎಳೆಯಾಗಿ ಚರ್ಚಿಸಬಹುದಾಗಿದೆ ಹಾಗೂ ತಮ್ಮ ಆತಂಕಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ಮೋದಿ ಹೇಳಿದ್ದಾರೆ.
ಸೋಮವಾರ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ §ಆಂದೋಲನ ಜೀವಿ¬ ಎಂಬ ಪದ ಬಳಸಿದ್ದರು. ಈ ಪದಕ್ಕೆ ಪ್ರತಿಭಟನಾ ನಿರತ ರೈತ ಒಕ್ಕೂಟಗಳು ಆಕ್ಷೇಪಿಸಿದ್ದವು.
ಆ ಬಗ್ಗೆಯೂ ಮಾತನಾಡಿದ ಪ್ರಧಾನ ಮಂತ್ರಿ §ಆಂದೋಲನಕಾರಿ¬ (ಪ್ರತಿಭಟನಾಕಾರರು) ಹಾಗೂ ಆಂದೋಲನ ಜೀವಿಗಳ ನಡುವೆ ವ್ಯತ್ಯಾಸವಿದೆ. ರೈತರ ಆಂದೋಲನ ಪವಿತ್ರವಾಗಿದೆ ಎಂದು ನಾವು ಭಾವಿಸಿದ್ದೇನೆ. ಆದರೆ, ಆಂದೋಲನ ಜೀವಿಗಳು ಪವಿತ್ರ ಪ್ರತಿಭಟನೆಯನ್ನು ಹೈಜಾಕ್ ಮಾಡಿದ್ದಾರೆ. ಉಗ್ರವಾದದ ರೀತಿಯ ಗಂಭೀರ ಅಪರಾಧಗಳಲ್ಲಿ ಶಿಕ್ಷೆಗೆ ಗುರಿಯಾಗಿರುವವರ ಫೋಟೋ ಗಳನ್ನು ಪ್ರತಿಭಟನೆಯ ಸಂದರ್ಭದಲ್ಲಿ ತೋರಿಸುತ್ತಿದ್ದಾರೆ. ಇದರಿಂದ ಏನಾದರೂ ಪ್ರಯೋಜನವಾಗಲಿದೆಯೇ? ಟೋಲ್ ಪ್ಲಾಜಾಗಳು ಕೆಲಸ ಮಾಡಲು ಬಿಡದೇ ಇರುವುದು, ಪಂಜಾಬ್ನಲ್ಲಿ ಟೆಲಿಕಾಂ ಸ್ಥಾವರಗಳನ್ನು ನಾಶಗೊಳಿಸುವಂತಹ ಕೃತ್ಯಗಳಿಂದ ಪವಿತ್ರ ಆಂದೋಲನಕ್ಕೆ ಪ್ರಯೋಜನವಾಗುತ್ತದೆಯೇ? ಎಂದು ಮೋದಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೂರು ಕೃಷಿ ಕಾಯ್ದೆಗಳು ರದ್ದು
ಲಖ್ನೌ, ಫೆ. 10 – ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರ ಪ್ರಸಕ್ತ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಪಕ್ಷ ಆಯೋಜಿಸಿದ್ದ ಕಿಸಾನ್ ಪಂಚಾಯತ್ನಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಪ್ರತಿಭಟನಾ ನಿರತ ರೈತರನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೂರು ಕೃಷಿ ಕಾಯ್ದೆಗಳು ಕರಾಳವಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಕಾಯ್ದೆಗಳನ್ನು ರದ್ದುಗೊಳಿಸಲಿದೆ. ಈ ಕಾಯ್ದೆಗಳು ರದ್ದಾಗುವವರೆಗೂ ಪಕ್ಷ ಹೋರಾಟ ನಡೆಸುವುದನ್ನು ಮಂದುವರೆಸಲಿದೆ ಎಂದವರು ತಿಳಿಸಿದ್ದಾರೆ.
ರೈತರ ‘ಮನ್ ಕಿ ಬಾತ್’ ಆಲಿಸುತ್ತಿಲ್ಲ
ಕಾರ್ಪೊರೇಟ್ಗಳಿಗೆ ಗರಿಷ್ಠ ಬೆಲೆ ಕೊಟ್ಟರೂ, ರೈತರಿಗೆ ಕನಿಷ್ಠ ಬೆಲೆ ಇಲ್ಲ – ಕಾಂಗ್ರೆಸ್ ಆರೋಪ
ನವದೆಹಲಿ, ಫೆ. 19 – ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ‘ಮನ್ ಕಿ ಬಾತ್’ ಅನ್ನು ಕೇಂದ್ರ ಸರ್ಕಾರ ಆಲಿಸುತ್ತಿಲ್ಲ ಎಂದು ರಾಜ್ಯಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ದೊಡ್ಡ ಕಾರ್ಪೊರೇಟ್ಗಳು ಗರಿಷ್ಠ ಬೆಲೆಯನ್ನು ಕೇಳುತ್ತಿವೆ. ರೈತರು ಕನಿಷ್ಠ ಬೆಲೆಯನ್ನು ಮಾತ್ರ ಕೇಳುತ್ತಿದ್ದಾರೆ ಎಂದು ಹೇಳಿದೆ.
ಬಜೆಟ್ ಕುರಿತ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಾಲ್, ಮೂರು ಕೃಷಿ ಸುಧಾರಣಾ ಕಾಯ್ದೆಗಳ ಮೂಲಕ ಸರ್ಕಾರ ನಡೆಸುತ್ತಿರುವ ಪ್ರಯೋಗವನ್ನು ಈಗಾಗಲೇ ಅಮೆರಿಕ ಹಾಗೂ ಯುರೋಪ್ಗಳಲ್ಲಿ ನಡೆಸಲಾಗಿದೆ. ಇದರಿಂದಾಗಿ ಕೃಷಿಯ ಕಾರ್ಪೊರೇಟೀಕರಣ ವಾಗಿದೆ ಎಂದರು.
ಖಾಸಗಿ ವ್ಯಾಪಾರಿಗಳ ಮೂಲಕ ರೈತರಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ಸಿಗಲಿದೆ ಎಂದು ಸರ್ಕಾರ ಹೇಳುತ್ತಿದೆ. ಸರ್ಕಾರ 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿದ್ದರೂ ಕೇವಲ ಗೋಧಿ, ಅಕ್ಕಿ ಹಾಗೂ ಕೆಲವು ಬೇಳೆಗಳನ್ನು ಮಾತ್ರ ಖರೀದಿಸುತ್ತಿದೆ ಎಂದವರು ಹೇಳಿದ್ದಾರೆ.
ಸರ್ಕಾರ ರೈತರ ಮನ್ ಕಿ ಬಾತ್ ಆಲಿಸುತ್ತಿಲ್ಲ. ನೀವು ಸದಾ ನಿಮ್ಮ ಮನ್ ಕಿ ಬಾತ್ ಮಾತನಾಡುತ್ತೀರಿ. ರೈತರು ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಕೇಳುತ್ತಿದ್ದಾರೆ ಎಂದು ಸಿಬಾಲ್ ತಿಳಿಸಿದ್ದಾರೆ.
ಚೀನಾ, ಅಮೆರಿಕ ಹಾಗೂ ಯುರೋಪ್ಗಳಿಗೆ ಹೋಲಿಸಿದರೆ ಭಾರತದಲ್ಲಿ ರೈತರಿಗೆ ಸಿಗುತ್ತಿರುವ ಸಬ್ಸಿಡಿ ಕಡಿಮೆ ಇದೆ. ಅಮೆರಿಕದಲ್ಲಿ ಪ್ರತಿ ರೈತನಿಗೆ ಸರ್ಕಾರ ವರ್ಷಕ್ಕೆ 62 ಸಾವಿರ ಡಾಲರ್ ಸಬ್ಸಿಡಿ ನೀಡುತ್ತಿದೆ. ನೀವು ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನೂ ಕೊಡುತ್ತಿಲ್ಲ. ರೈತರು ಹೆಚ್ಚೇನೂ ಕೇಳುತ್ತಿಲ್ಲ, ನಿಮ್ಮ ಕಾರ್ಪೊರೇಟ್ಗಳು ಕೇಳುತ್ತಾರೆ. ಕಾರ್ಪೊರೇಟ್ಗಳು ತೆರಿಗೆ ಪರಿಹಾರ ಹಾಗೂ ವಿನಾಯಿತಿ ಕೇಳಿದಾಗ ಸರ್ಕಾರ ಕೊಡುತ್ತದೆ. ಆದರೆ, ರೈತರು ಕನಿಷ್ಠ ಬೆಂಬಲ ಬೆಲೆ ಕೇಳಿದಾಗ ನೀವು ಕೊಡಲು ಸಿದ್ಧರಿಲ್ಲ. ರೈತರು ಕನಿಷ್ಠ ಕೇಳುತ್ತಿದ್ದಾರೆ, ನೀವು ಕಾರ್ಪೊರೇಟ್ಗಳಿಗೆ ಗರಿಷ್ಠ ಕೊಡುತ್ತಿದ್ದೀರಿ ಎಂದವರು ಆರೋಪಿಸಿದರು.
ಭಾರತ ರೈತರಿಗೆ 11 ಶತಕೋಟಿ ಡಾಲರ್ ಸಬ್ಸಿಡಿ ಕೊಡುತ್ತಿದೆ. ಚೀನಾದಲ್ಲಿ ಸಬ್ಸಿಡಿ 185.9 ಶತಕೋಟಿ ಡಾಲರ್, ಯುರೋಪ್ನಲ್ಲಿ 101.2 ಶತಕೋಟಿ ಡಾಲರ್ ಹಾಗೂ ಅಮೆರಿಕದಲ್ಲಿ 48.9 ಶತಕೋಟಿ ಡಾಲರ್ ಎಂದವರು ಹೇಳಿದರು.
ನೂತನ ಕೃಷಿ ಕಾಯ್ದೆಗಳಿಂದ ಭಾರತೀಯ ಕೃಷಿಯ ಕಾರ್ಪೊರೇಟೀಕರಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ ಸಿಬಾಲ್, ಕಾರ್ಪೊರೇಟೀಕರಣದಿಂದ ಅಮೆರಿಕದ ಜನರಲ್ಲಿ ಶೇ.1.5ರಷ್ಟು ಜನರು ಮಾತ್ರ ಕೃಷಿಯಲ್ಲಿ ಉಳಿದಿದ್ದಾರೆ. ಭಾರತದಲ್ಲಿ ಶೇ.50ರಷ್ಟು ಜನ ಕೃಷಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.
2020ರಲ್ಲಿ ಅಮೆರಿಕದ ರೈತರು 425 ಶತಕೋಟಿ ಡಾಲರ್ಗಳಿಗೂ ಹೆಚ್ಚಿನ ದಿವಾಳಿಗೆ ಗುರಿಯಾಗಿದ್ದಾರೆ. ಇದು ಕಾರ್ಪೊರೇಟೀಕರಣದ ಪರಿಣಾಮ. ಅಮೆರಿಕದಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಆತ್ಮಹತ್ಯೆ ಪ್ರಮಾಣ ಶೇ.45ರಷ್ಟು ಹೆಚ್ಚಾಗಿದೆ. ಅಲ್ಲಿ ಸಣ್ಣ ಜಮೀನು ಕಣ್ಮರೆಯಾಗಿವೆ ಎಂದವರು ಹೇಳಿದರು.
ಕೃಷಿ ಕಾಯ್ದೆಗಳ ವಿರುದ್ಧ 18ರಂದು ರೈಲು ತಡೆ
ನವದೆಹಲಿ, ಫೆ. 10 – ಬರುವ ಫೆಬ್ರವರಿ 18ರಂದು ದೇಶಾದ್ಯಂತ ನಾಲ್ಕು ಗಂಟೆ ರಸ್ತೆ ತಡೆ ನಡೆಸುವುದಾಗಿ ಹಾಗೂ ಫೆ.14ರಂದು ಪುಲ್ವಾಮಾ ದಾಳಿಯಲ್ಲಿ ಹತರಾದ ಸೈನಿಕರಿಗೆ ಮೇಣದ ಬತ್ತಿ ಬೆಳಕಿನ ಮೂಲಕ ನಮನ ಸಲ್ಲಿಸುವುದಾಗಿ ಪ್ರತಿಭಟ ನಾ ನಿರತ ರೈತ ಸಂಘಟನೆಗಳು ತಿಳಿಸಿವೆ.
ಈ ಬಗ್ಗೆ ಹೇಳಿಕೆ ನೀಡಿರುವ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ, ಫೆಬ್ರವರಿ 12ರಿಂದ ರಾಜಸ್ತಾನದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದೆ.
ಬುಧವಾರ ಸಭೆ ನಡೆಸಿದ ರೈತ ಸಂಘಟನೆಗಳು ಪ್ರತಿಭಟನೆ ತೀವ್ರಗೊ ಳಿಸಲು ನಿರ್ಧರಿಸಿವೆ. ಫೆಬ್ರವರಿ 18ರ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ರೈಲು ತಡೆ ನಡೆಸಲಾಗುವುದು ಎಂದು ಸಂಘ ಟನೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಾಶ್ಮೀರದ ಪುಲ್ವಾಮಾ ಉಗ್ರವಾದಿ ದಾಳಿಯಲ್ಲಿ ಫೆಬ್ರವರಿ 14, 2019ರಂದು ಹುತಾತ್ಮರಾದ 40 ಸಿ.ಆರ್.ಪಿ.ಎಫ್. ಸಿಬ್ಬಂದಿಯ ಬಲಿದಾನಕ್ಕೆ ನಮಿಸಲು ಫೆ.14ರಂದು ಮೇಣದ ದೀಪಗಳ ಮೆರವಣಿಗೆ ಹಾಗೂ ಪಂಜಿನ ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ನಾಯಕ ದರ್ಶನ್ ಪಾಲ್ ತಿಳಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಹಿರಿಯ ರೈತ ನಾಯಕರಾಗಿದ್ದ ಸರ್ ಛೋಟು ರಾಮ್ ಅವರ ಜನ್ಮದಿನಾಚರಣೆಯಾದ ಫೆಬ್ರವರಿ 16ರಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಆಂದೋಲನ ಜೀವಿಗಳು ರೈತರ ಪವಿತ್ರ ಪ್ರತಿಭಟನೆಯನ್ನು ಹಾಳು ಮಾಡಿದ್ದಾರೆಯೇ ಹೊರತು ಆಂದೋಲನಕಾರಿಗಳಲ್ಲ. ಹೀಗಾಗಿ ದೇಶ ಆಂದೋಲನ ಜೀವಿಗಳು ಹಾಗೂ ಆಂದೋಲನಕಾರಿಗಳ ವ್ಯತ್ಯಾಸ ತಿಳಿಯಬೇಕಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಕಾಂಗ್ರೆಸ್ ಸದಸ್ಯರು ಸದನದಲ್ಲಿ ಮಾತನಾಡುವಾಗ ಕಾಯ್ದೆಗಳಲ್ಲಿ ಇರುವ ಲೋಪಗಳ ಬಗ್ಗೆ ಏನೂ ಮಾತನಾಡಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳು ರೈತರ ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಕೃಷಿ ಕಾಯ್ದೆಗಳ ಕುರಿತು ತಮ್ಮ ನಿಲುವು ತಿಳಿಸುವಾಗಲೇ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಕೃಷಿ ಕಾಯ್ದೆಗಳಿಂದ ಮಂಡಿ ವ್ಯವಸ್ಥೆ ದುರ್ಬಲವಾಗಲಿದೆ ಹಾಗೂ ಕನಿಷ್ಠ ಬೆಂಬಲ ಬೆಲೆ ರದ್ದಾಗಲಿದೆ ಎಂದು ಟೀಕಾಕಾರರು ರೈತರಲ್ಲಿ ಹೆದರಿಕೆ ಹುಟ್ಟಿಸುತ್ತಿದ್ದಾರೆ. ಈ ಕಾಯ್ದೆಗಳು ಸಂಸತ್ತಿನಿಂದ ಅನುಮೋದನೆ ಪಡೆದ ನಂತರ ಯಾವುದೇ ಮಂಡಿ ಮುಚ್ಚಿಲ್ಲ. ಇದರ ಬದಲು ಕೃಷಿ ಮಂಡಿಗಳ ಆಧುನೀಕರಣಕ್ಕೆ ಹೆಚ್ಚು ಅನುದಾನ ನೀಡಲಾಗಿದೆ. ಇದೇ ರೀತಿ ಕನಿಷ್ಠ ಬೆಂಬಲ ಬೆಲೆ ಮುಂದುವರೆದಿದೆ. ಈ ಅಂಶಗಳನ್ನು ಕಡೆಗಣಿಸಲಾಗದು ಎಂದು ಪ್ರಧಾನಿ ತಿಳಿಸಿದ್ದಾರೆ.
ರೈತರು ಈ ಕಾಯ್ದೆಯನ್ನು ಕೇಳಿಯೇ ಇರಲಿಲ್ಲ ಏಕೆ ಕೊಟ್ಟಿರಿ ಎಂದು ಪ್ರತಿಪಕ್ಷಗಳ ಸದಸ್ಯರು ಹೇಳಿದ್ದರಿಂದ ಆಘಾತವಾಗಿದೆ. ವರದಕ್ಷಿಣೆ ವಿಷಯವೇ ಇರಲಿ, ತ್ರಿವಳಿ ತಲಾಕ್ ವಿಷಯವೇ ಇರಲಿ ಯಾರೊಬ್ಬರೂ ಇವುಗಳ ನಿಷೇಧಕ್ಕೆ ಕೇಳಿರಲಿಲ್ಲ. ಆದರೆ, ಪ್ರಗತಿಪರ ಸಮಾಜಕ್ಕೆ ಅಗತ್ಯವಾದ ರೀತಿಯಲ್ಲಿ ಕಾಯ್ದೆಗಳನ್ನು ಜಾರಿಗೆ ತರಬೇಕಾಗುತ್ತದೆ ಎಂದವರು ಹೇಳಿದ್ದಾರೆ.
ರಾಷ್ಟ್ರಪತಿ ಭಾಷಣಕ್ಕೆ ಅಭಿನಂದನೆ ಸಲ್ಲಿಸುವ ನಿಲುವಳಿಯಲ್ಲಿ ಸಾಕಷ್ಟು ಮಹಿಳಾ ಸಂಸದರು ಚರ್ಚೆಯಲ್ಲಿ ಪಾಲ್ಗೊಂಡರು. ಇದು ಉತ್ತಮ ಸಂಕೇತವಾಗಿದೆ. ಈ ಸದನದ ಪ್ರಕ್ರಿಯೆಗಳನ್ನು ತಮ್ಮ ವಿಚಾರಗಳಿಂದ ಶ್ರೀಮಂತಗೊಳಿಸಿದ ಮಹಿಳಾ ಸಂಸದರಿಗೆ ನಾನು ಅಭಿನಂದಿಸುತ್ತೇನೆ ಎಂದೂ ಪ್ರಧಾನಿ ತಿಳಿಸಿದ್ದಾರೆ.