ಕ್ರೀಡೆಗೆ ಪ್ರೋತ್ಸಾಹಿಸುವ ಕರ್ತವ್ಯ ನಮ್ಮೇಲಿದೆ

ದಾವಣಗೆರೆ, ಏ. 11 – ಕ್ರಿಕೆಟ್ ಹಾಗೂ ಪವರ್‌ಲಿಫ್ಟಿಂಗ್ ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ದಾವಣಗೆರೆಯ ಕ್ರೀಡಾಪಟುಗಳು ಸಾಧನೆ ಮಾಡಿದ್ದು, ಇಂತಹ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಎಸ್ಪಿ ಹನುಮಂತರಾಯ ಹೇಳಿದ್ದಾರೆ.

ದಾವಣಗೆರೆ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕ್ರೀಡೆಯಿಂದ ಆರೋಗ್ಯಕರ ಜೀವನ ರೂಪಿಸಿಕೊಳ್ಳಬಹುದಾಗಿದೆ ಎಂದ ಅವರು, ದಾವಣಗೆರೆಯಿಂದ ಸಾಕಷ್ಟು ಕ್ರೀಡಾಪಟುಗಳು ಹೊರ ಹೊಮ್ಮಿದ್ದಾರೆ. ಇಂತಹ ಕ್ರೀಡಾಪಟುಗಳು ಹೊರ ಹೊಮ್ಮಲು ಪ್ರೋತ್ಸಾಹ ನೀಡಬೇಕು ಎಂದರು.

ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಕ್ರೀಡೆಯಿಂದ ವ್ಯಕ್ತಿ ಹಾಗೂ ಸಮಾಜದ ಆರೋಗ್ಯ ಸುಧಾರಿಸುತ್ತದೆ. ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಗಳ ಅಗತ್ಯ ಹೆಚ್ಚಾಗಿದೆ ಎಂದರು.

ಪಾಲಿಕೆಯ ಪ್ರತಿಪಕ್ಷದ ನಾಯಕ ಎ. ನಾಗರಾಜ್ ಮಾತನಾಡಿ, ದಶಕಗಳ ಹಿಂದೆ ಕ್ರೀಡೆಯ ಅಭ್ಯಾಸ ನೋಡಲಿಕ್ಕೇ ನೂರಾರು ಜನ ಬರುತ್ತಿದ್ದರು. ಈಗ ಕ್ರೀಡೆಗಳಿಗೆ ಪ್ರೇಕ್ಷಕರ ಕೊರತೆಯಾಗಿದೆ. ಮಕ್ಕಳು ಆಡುವುದೇ ಕಡಿಮೆ ಯಾಗಿದೆ. ಇಂತಹ ಸಂದರ್ಭದಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡಲು ಪಾಲಿಕೆ ವತಿಯಿಂದ ದೇಶೀ ಕ್ರೀಡೆಗಳ §ಮೇಯರ್ ಕಪ್¬ ಪಂದ್ಯಾವಳಿ ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಹಾಗೂ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ ಅಜಯ್ ಕುಮಾರ್, ಪಾಲಿಕೆ ಸದಸ್ಯ ಚಮನ್ ಸಾಬ್, ಡಿವೈಎಸ್‌ಪಿ ನಾಗೇಶ್ ಯು. ಐತಾಳ್, ವಾಲಿಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷ ನಲ್ಲೂರು ರಾಘವೇಂದ್ರ, ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಪ್ರಕಾಶ್ ಎಲ್. ದೈವಜ್ಞ, ಎಲ್.ಡಿ. ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!