ನಗರ ತ್ಯಾಜ್ಯವನ್ನು ಗೊಬ್ಬರವನ್ನಾಗಿಸಲು ಚಿಂತನೆ

ದಾವಣಗೆರೆ, ಏ.11- ನಗರದಲ್ಲಿನ ತ್ಯಾಜ್ಯವನ್ನು ಸಾವಯವ ಗೊಬ್ಬರವನ್ನಾಗಿ ಮಾರ್ಪಾಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದ್ದು, ಪ್ರಾಯೋಗಿಕವಾಗಿ ಎರಡು ವಾರ್ಡ್‌ಗಳಲ್ಲಿ ಘಟಕ ನಿರ್ಮಿಸಿ ಈ ಕಾರ್ಯ ಜಾರಿಗೆ ತರಲಾಗುವುದು ಎಂದು ಮಹಾನಗರಪಾಲಿಕೆ ಮೇಯರ್ ಎಸ್.ಟಿ.ವೀರೇಶ್ ತಿಳಿಸಿದರು.

ಮಹಾನಗರ ಪಾಲಿಕೆ, ದಾವಣಗೆರೆ ಸ್ಮಾರ್ಟ್ ಸಿಟಿ ಲಿ., ಹಾಗೂ ದಾವಣಗೆರೆ ಸೈಕಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಎಂಸಿಸಿ ಬಿ ಬ್ಲಾಕ್ ಮುಖ್ಯ ರಸ್ತೆಗಳಲ್ಲಿ ತ್ಯಾಜ್ಯ ಬೇರ್ಪಡಿಸುವಿಕೆ, ವೈಜ್ಞಾನಿಕ ವಿಲೇವಾರಿ, ಸಾವಯವ ಗೊಬ್ಬರ, ಸ್ವಚ್ಛ ದಾವಣಗೆರೆ ಹಾಗೂ ಸ್ವಚ್ಛ ಪರಿಸರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಗುಂಡಿ ಸರ್ಕಲ್ ನಿಂದ ಹಮ್ಮಿಕೊಳ್ಳಲಾಗಿದ್ದ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಮಂಗಳೂರಿನಲ್ಲಿ ತ್ಯಾಜ್ಯದಲ್ಲಿ ಸಾವಯವ ಗೊಬ್ಬರ ತಯಾರಿಸುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪಾಲಿಕೆ ತಂಡ ತೆರಳಿತ್ತು. ಮಂಗಳೂರಿನ ಉಪ್ಪಿನಹಳ್ಳಿ ಗ್ರಾಪಂ ಆಯ್ಕೆ ಮಾಡಿಕೊಂಡು ಬೇರೆ ಎಲ್ಲಾ ಕಡೆ ತಯಾರಿಸುವ ಸಾವಯವ ಗೊಬ್ಬರ ಕ್ಕಿಂತ ಎಂಪಿಕೆ- 7.5 ಎಂಬ ಹೊಸ ಪ್ರಯೋ ಗದೊಂದಿಗೆ ಕಳೆದ ಒಂದು ವರ್ಷದಿಂದ ಸಾವಯವ ಗೊಬ್ಬರ ತಯಾರಿಸಿ ಯಶಸ್ಸು ಕಂಡಿದೆ. ಅದೇ ಪ್ರಯೋಗವನ್ನು  ಪಾಲಿಕೆ ವ್ಯಾಪ್ತಿಯ 2 ವಾರ್ಡ್‌ಗಳಲ್ಲಿ ಪ್ರಯೋಗ ಮಾಡಿ ಮುಂದಿನ ಎಲ್ಲಾ ವಾರ್ಡ್‌ಗಳಿಗೆ ವಿಸ್ತರಿಸಲಾಗುವುದು ಎಂದರು.

38 ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯ ಗಡಿ ಗುಡಾಳ್ ಮಂಜುನಾಥ್,  ನನ್ನ ವಾರ್ಡ್‌ನಲ್ಲಿ ಅಲ್ಲಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚಲಾಗುತ್ತಿತ್ತು. ಇದನ್ನು ನಿಯಂತ್ರಿಸುವ ಸಲುವಾಗಿ ಎಂಸಿಸಿ ಬಿ ಬ್ಲಾಕ್ ನ ಪ್ರತಿಯೊಂದು ಮನೆಗೆ ತೆರಳಿ ಮರಗಳಿಗೆ ಕಟ್ಟಿರುವ ಬುಟ್ಟಿಗಳಲ್ಲಿ ಮರದ ಎಲೆ ಮತ್ತು ದೇವರನ್ನು ಪೂಜಿಸಿದ್ದ ಹೂವನ್ನು ಹಾಕುವಂತೆ ಜಾಗೃತಿ ಮೂಡಿಸಿದ್ದವು. ಇದೀಗ ಈ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಸ್ತುತ ವಾರ್ಡ್‌ನಲ್ಲಿ ಒಣ ತ್ಯಾಜ್ಯವನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ 2 ಟನ್ ಗೊಬ್ಬರವನ್ನು ಸಾರ್ವಜನಿಕರಿಗೆ  ವಿತರಿಸಲಾಗಿದೆ ಎಂದರು. 

ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ,  ದಾವಣಗೆರೆ ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯ ಚಮನ್ ಸಾಬ್, ಮುಖ್ಯ ಅಭಿಯಂತರ ಸತೀಶ್, ಆರೋಗ್ಯ ಅಧಿಕಾರಿ ಸಂತೋಷ್,  ಆರೋಗ್ಯ ನಿರೀಕ್ಷಕರು, ದಾವಣಗೆರೆ ಸೈಕಲ್ ಕ್ಲಬ್‌ನ ಡಾ. ರುದ್ರೇಶ್, ಆನಂದ್, ಪ್ರಜ್ವಲ್, ಪ್ರಮೋದ್, ಮಹೇಶ್, ವಿನಯ್ ಹಾಗು ಇತರರು ಹಾಜರಿದ್ದರು.

error: Content is protected !!