ಕೊರೊನಾ ಲಸಿಕೆ ಪಡೆದ ಡಿಸಿ-ಎಸ್ಪಿ

2ನೇ ಹಂತದಲ್ಲಿ 7,269 ಜನಕ್ಕೆ ಲಸಿಕೆಯ ಗುರಿ

ದಾವಣಗೆರೆ, ಫೆ. 8 – ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಸೋಮವಾರ ಎರಡನೇ ಹಂತದ ಕೊರೊನಾ ಲಸಿಕೆ  ಕಾರ್ಯ ಕ್ರಮ ವನ್ನು ಜಿಲ್ಲಾಧಿ ಕಾರಿಗಳು ಉದ್ಘಾಟಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಸ್ವತಃ ಲಸಿಕೆ ಪಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರೊಟ್ಟಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಹ ಲಸಿಕೆ ಪಡೆದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಇಂಜಕ್ಷನ್ ಹಾಕಿಸಿಕೊಂಡಾಗ ಆಗುವ ಅನುಭವವೇ ಲಸಿಕೆ ಪಡೆಯುವಾಗಲೂ ಆಗುತ್ತದೆ. ಯಾವುದೇ ತರಹದ ಅಡ್ಡಪರಿಣಾಮ ವಾಗಿಲ್ಲ. ಮುಂಚೂಣಿಯಲ್ಲಿರುವ ಎಲ್ಲಾ ಕೊರೊನಾ ವಾರಿಯರ್‌ಗಳು ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಮಾತನಾಡಿ, ಜಿಲ್ಲೆಯಲ್ಲಿ 29 ಸಾವಿರ ಮಂದಿ ಮುಂಚೂಣಿ ವಾರಿಯರ್‌ಗಳನ್ನು ಪಟ್ಟಿ ಮಾಡಿದ್ದು, 7,269 ಮಂದಿಗೆ ಲಸಿಕೆ ನೀಡುವ ಗುರಿ ಇದೆ. ಸೋಮವಾರ 3 ಸಾವಿರಕ್ಕೂ ಹೆಚ್ಚು ಮಂದಿ ಲಸಿಕೆ ಪಡೆಯಲಿದ್ದಾರೆ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್ ಇದ್ದರು.

ಮೊದಲನೇ ಹಂತದ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿ ಎರಡನೇ ಹಂತದ ಲಸಿಕೆ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದೆ.  ಈ ಹಂತದಲ್ಲಿ ಪೊಲೀಸ್ ಇಲಾಖೆ, ಪಂಚಾಯಿತ್ ರಾಜ್ ಅಡಿಯಲ್ಲಿ ಬರುವ ಸ್ಥಳೀಯ ಆಡಳಿತ ಸಂಸ್ಥೆಗಳು, ನಗರ ಸ್ಥಳೀಯ ಆಡಳಿತ ಸಂಸ್ಥೆಗಳು, ಅಗ್ನಿಶಾಮಕ ದಳ, ಹೋಂಗಾರ್ಡ್ಸ್‌ಗಳಿಗೆ ನೀಡಲಾಗುತ್ತದೆ.

error: Content is protected !!