ಪಠ್ಯದಲ್ಲಿ ವಾಲ್ಮೀಕಿ ಕುರಿತ ಮಿಥ್ಯೆ ತೆಗೆಯಬೇಕು

ಹರಿಹರ  ತಾಲ್ಲೂಕು ರಾಜನಹಳ್ಳಿಯಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆ ಮಹೋತ್ಸವದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಮಾತೆ ಶಬರಿ ಮಹಿಳಾ ಜಾಗೃತಿ ಸಮಾವೇಶವನ್ನು ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಎಸ್. ಘಂಟಿ ಉದ್ಘಾಟಿಸಿದರು.

ಮಹರ್ಷಿ ವಾಲ್ಮೀಕಿ ಹೊಡೆಯುತ್ತಿದ್ದರು, ಕಳ್ಳತನ ಮಾಡುತ್ತಿದ್ದರು ಎಂಬ ಕಟ್ಟುಕಥೆಯಿಂದ ಅವಮಾನ : ಡಾ. ಮಲ್ಲಿಕಾ ಘಂಟಿ

ಹರಿಹರ, ಫೆ. 8 – ಪಠ್ಯದಲ್ಲಿ ಮಹರ್ಷಿ ವಾಲ್ಮೀಕಿ ಕುರಿತ ಮಿಥ್ಯೆಗಳನ್ನು ತೆಗೆದು ಹಾಕಬೇಕು. ವಾಲ್ಮೀಕಿ ಹೊಡೆದು – ಕಳ್ಳತನ ಮಾಡುತ್ತಿದ್ದರು ಎಂಬ ಕಟ್ಟುಕಥೆಯಿಂದ ಶ್ರೇಷ್ಠ ವಾಲ್ಮೀಕಿಯನ್ನು ಅವಮಾನಿಸುವ ಚರಿತ್ರೆ ಬದಲಿಸಬೇಕು ಎಂದು ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಎಸ್. ಘಂಟಿ ಆಗ್ರಹಿಸಿದ್ದಾರೆ.

ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಗುರುಪೀಠದ ವತಿಯಿಂದ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಾತ್ರೆ – 2021, ಶ್ರೀಮಠದ 23ನೇ ವಾರ್ಷಿಕೋತ್ಸವ, ಲಿಂ. ಜಗದ್ಗುರು ಶ್ರೀ ಪುಣ್ಯಾನಂದಪುರಿ ಸ್ವಾಮೀಜಿಯವರ 14ನೇ ವರ್ಷದ ಪುಣ್ಯಾರಾಧನೆ, ಜಗದ್ಗುರು ಶ್ರೀ ಪ್ರಸನ್ನಾನಂದ ಮಹಾಸ್ವಾಮೀಜಿ ಅವರ 13ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಮಾತೆ ಶಬರಿ ಮಹಿಳಾ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಾಲ್ಮೀಕಿ ನಮ್ಮ ಹಾಗೆ ಮನುಷ್ಯರು. ಅವರಿಗೆ ಅಪಾರ ಪಾಂಡಿತ್ಯ ಇತ್ತು. ಅವರು ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳ ಪರಿಣಿತರಾಗಿದ್ದರು. ಅಕ್ಷರ ಕಲಿಯಲು ಅವಕಾಶ ಇರದ ಕಾಲದಲ್ಲಿ ಮಹಾಗ್ರಂಥ ರಚಿಸಿದರು ಎಂದವರು ಹೇಳಿದರು.

ಈ ಸತ್ಯವನ್ನು ಹೇಳಿದರೆ, ವಾಲ್ಮೀಕಿಯವರಂತೆ ಎಲ್ಲರೂ ಓದಬಹುದು ಹಾಗೂ ಬರೆಯಬಹುದು ಎಂಬ ಭಯದಿಂದ ವೈದಿಕ ಸಮಾಜ ಕಟ್ಟು ಕತೆ ಹೆಣೆದಿದೆ. ವಾಲ್ಮೀಕಿ ಅವರು ತಪಸ್ಸಿನಿಂದಾಗಿ ಮಹಾಗ್ರಂಥ ಬರೆದರು ಎಂದು ಹೇಳಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಾಲ್ಮೀಕಿ ತಪಸ್ಸು ಮಾಡಿದ್ದರು, ಅವರ ಸುತ್ತ ಹುತ್ತ ಬೆಳೆದಿತ್ತು. ಆ ಹುತ್ತ ಒಡೆದ ನಂತರ ಜ್ಞಾನೋದಯವಾಯಿತು ಎಂಬುದು ಕಟ್ಟು ಕಥೆ. ಪಠ್ಯದೊಳಗಿನ ಮಿಥ್ಯೆಗಳನ್ನು ತೆಗೆಯಲು ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿಕೊಂಡರು.

ಮಹಿಳಾ ಪರ ಮಸೂದೆಗಳು ಪುರುಷರಿಂದ ಜಾರಿಯಾಗುವ ಪರಿಸ್ಥಿತಿ ಈಗಿದೆ ಎಂದು ವಿಷಾದಿಸಿದ ಅವರು, ಕಳೆದ 18 ವರ್ಷಗಳಿಂದ ಮಹಿಳಾ ಮೀಸಲಾತಿ ಹೋರಾಟ ನೆನೆಗುದಿಗೆ ಬಿದ್ದಿದೆ. ಈಗಾಲಾದರೂ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಮೀಸಲಾತಿ ಕಲ್ಪಿಸಲು ಹೋರಾಟ ನಡೆಯಬೇಕಿದೆ ಎಂದರು.

ಚಿತ್ರನಟಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಅಬ್ಬಕ್ಕ ರಾಣಿ ಖಡ್ಗದೊಂದಿಗೆ ಶತ್ರುಗಳ ವಿರುದ್ಧ ಹೋರಾಡಿದ್ದರು. ಈಗ ಮಹಿಳೆಯರು ಶಿಕ್ಷಣವನ್ನು ಅಸ್ತ್ರವಾಗಿಟ್ಟುಕೊಂಡು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಗೃಹ ಕಾರ್ಯದರ್ಶಿ ಮಾಲಿನಿ ಕೃಷ್ಣಮೂರ್ತಿ ಮಾತನಾಡಿ, ಮಹಿಳೆಯರಲ್ಲಿ ಸರಸ್ವತಿ, ಲಕ್ಷ್ಮಿ ಹಾಗೂ ಪಾರ್ವತಿಯ ಗುಣಗಳಿರಬೇಕು. ಸರಸ್ವತಿಯಿಂದ ವಿದ್ಯೆ, ಲಕ್ಷ್ಮಿಯಿಂದ ಆರ್ಥಿಕ ಸ್ವಾಲವಂಬನೆ ಪಡೆಯುವ ಜೊತೆಗೆ, ಪಾರ್ವತಿಯಿಂದ ಶಕ್ತಿ ಪಡೆಯಬೇಕು. ಆಗ ಸಮಾಜದಲ್ಲಿ ಮುಂದೆ ಬರಲು ಸಾಧ್ಯ ಎಂದರು.

ಕೆ.ಪಿ.ಟಿ.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕಿ ಡಾ. ಮಂಜುಳ ಮಾತನಾಡಿ, ಪರಿಶ್ರಮದಿಂದ ಮುಂದೆ ಬರಲು ಎಲ್ಲರಿಗೂ ಅವಕಾಶವಿದೆ. ಯಾರೂ ತಾವಾಗಿಯೇ ಅವಕಾಶ ಕೊಡುವುದಿಲ್ಲ. ಮಹಿಳೆಯರು ತಮ್ಮ ಅವಕಾಶವನ್ನು ಮುನ್ನುಗ್ಗಿ ಪಡೆದುಕೊಳ್ಳಬೇಕು ಎಂದರು.

ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಶಾಂತಲಾ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಾತ್ರೆಯು ಈಗ ಜಾಗೃತಿಯ ಮಟ್ಟಕ್ಕೆ ಕರೆದೊಯ್ಯುತ್ತಿದೆ ಎಂದು ಹೇಳಿದರು.

ವೇದಿಕೆಯ ಸಾನ್ನಿಧ್ಯವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ವಹಿಸಿದ್ದರು.

ವೇದಿಕೆಯ ಮೇಲೆ  ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಗೋಮತಿದೇವಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ವಾರಂಗಲ್, ಜವಳಿ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಕಮಲಾ ಮರಿಸ್ವಾಮಿ, ಶಿವಮೊಗ್ಗದ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ತಾರ, ಗೋಕಾಕ್‌ನ ಪ್ರಿಯಾಂಕ ಎಸ್. ಜಾರಕಿಹೊಳಿ ಮತ್ತಿತರರು ಉಪಸ್ಥಿತರಿದ್ದರು.

ಡಾ. ಶಾರದಾ ಹುಲಿನಾಯಕ ಸ್ವಾಗತಿಸಿದರೆ, ಕೀರ್ತನ ನಿರೂಪಿಸಿದರು.

error: Content is protected !!